ದನಕಳ್ಳನನ್ನು ಬೆನ್ನಟ್ಟಿ ಹಿಡಿದ ಕಾನ್‌ಸ್ಟೇಬಲ್ ಎಂ.ಬಿ.ಅಸುಂಡಿ

ಶೇರ್ ಮಾಡಿ

ನೇಸರ ಜೂ.08: ವೈದ್ಯಕೀಯ ತಪಾಸಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದಾಗ ಪರಾರಿಯಾಗಲು ಯತ್ನಿಸಿದ ದನ ಕಳ್ಳತನ ಪ್ರಕರಣದ ಆರೋಪಿಯೋರ್ವನನ್ನು ಕೊಣಾಜೆ ಠಾಣಾ ಕಾನ್‌ಸ್ಟೇಬಲ್ ಬೆನ್ನಟ್ಟಿ ಸೆರೆಹಿಡಿದಿದ್ದಾರೆ.
ಬುಧವಾರ ಬೆಳಗ್ಗೆ ಚೇಳೂರು ಚೆಕ್‌ಪೋಸ್ಟ್ ಬಳಿ ಪಿಎಸ್‌ಐ ಯೋಗೇಶ್ವರ್ ಮತ್ತು ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ ಮೆಲ್ಕಾರ್‌ನಿಂದ ಸಜಿಪ ಕಡೆಗೆ ಬರುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಕಾರಲ್ಲಿ ಒಂದು ಹೆಣ್ಣು ಕರು ಪತ್ತೆಯಾಗಿತ್ತು. ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಆರೋಪಿಗಳಾದ ದೇರಳಕಟ್ಟೆ ನಿವಾಸಿ ಮಹಮ್ಮದ್ ಮುಸ್ತಾಫ, ಸಜಿಪ ನಿವಾಸಿ ಮುನಾಫರ್, ಕಲ್ಲಾಪು ನಿವಾಸಿಗಳಾದ ಮಹಮ್ಮದ್ ಜುನೈದ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳನ್ನು ಮಧ್ಯಾಹ್ನ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಆರೋಗ್ಯ ತಪಾಸಣೆಗಾಗಿ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆರೋಗ್ಯ ಕೇಂದ್ರದ ಆವರಣ ತಲುಪುತ್ತಿದ್ದಂತೆಯೇ ಮುಸ್ತಫಾ ಎಂಬಾತ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಸಾರ್ವಜನಿಕರ ಎದುರಲ್ಲೇ ಗುಡ್ಡ ಹಾರಿ ಓಡಲು ಯತ್ನಿಸಿದ್ದಾನೆ. ಎಚ್ಚೆತ್ತುಕೊಂಡ ಪೊಲೀಸ್ ಕಾನ್‌ಸ್ಟೇಬಲ್ ಎಂ.ಬಿ.ಅಸುಂಡಿ ಆರೋಪಿಯನ್ನು ಬೆನ್ನಟ್ಟಿ ಹಿಡಿಯುವಲ್ಲಿ ಸಫಲರಾದರು. ಘಟನೆಯಲ್ಲಿ ಕಾನ್‌ಸ್ಟೇಬಲ್ ಅಸುಂಡಿ ಅವರಿಗೆ ತರಚಿದ ಗಾಯಗಳಾಗಿವೆ.

ಜಾಹೀರಾತು

Leave a Reply

error: Content is protected !!