ನೇಸರ ಜೂ.12: ಬೆಂಗಳೂರು-ಮಂಗಳೂರು ಹಾಗೂ ಸುಬ್ರಹ್ಮಣ್ಯ-ಧರ್ಮಸ್ಥಳ ಸಂಚರಿಸುವ ದಾರಿ ಮಧ್ಯೆ ರಸ್ತೆ ಬದಿಯಲ್ಲಿ ಇದ್ದ ಮರ ಟೆಂಪೋ ಟ್ರಾವೆಲ್ಲರ್ ಮೇಲೆ ಬಿದ್ದ ಪರಿಣಾಮ ವಾಹನ ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಇಂದು(ಜೂ.12) ನಡೆದಿದೆ.
ಸಂಜೆ ಸುರಿದ ವಿಪರೀತ ಮಳೆಯಿಂದ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುವ ಯಾತ್ರಾತ್ರಿಗಳ ಟೆಂಪೋ ಟ್ರಾವೆಲ್ ಮೇಲೆ ರಸ್ತೆಯ ಪಕ್ಕದಲ್ಲಿದ್ದ ಮರವೊಂದು ಉರುಳಿ ಬಿದ್ದು, ಟೆಂಪೋ ಟ್ರಾವೆಲ್ ನ ಮೇಲ್ಭಾಗ ಸಂಪೂರ್ಣ ಹಾನಿಗೊಂಡಿದ್ದು. ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಇದರಿಂದ ಕೆಲಕಾಲ ವಾಹನ ಸಂಚಾರದಲ್ಲಿ ಅಡೆತಡೆ ಉಂಟಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ನೆಲ್ಯಾಡಿಯ ಹೊರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅರಣ್ಯ ಇಲಾಖೆ ಮೌನ:
ಈಗಾಗಲೇ ಈ ರಸ್ತೆಯಲ್ಲಿ ಅಪಾಯಕಾರಿ ಮರಗಳು ಇದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ, ಅಪಾಯಕಾರಿ ಮರಗಳ ತೆರವಿನ ಬಗ್ಗೆ ಅರಣ್ಯ ಇಲಾಖೆ ಹಾಗೂ ರಾ.ಹೆ. ಪ್ರಾಧಿಕಾರ ಮೌನವಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ಜಾಹೀರಾತು