ನೇಸರ ಜೂ.30: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಜೂ.25ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಲೀಂ ಎಂಬವರು ಕಾಜೂರಿನಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳ ಶಿಲನ್ಯಾಸದ ಕುರಿತು ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಉಂಟುಮಾಡುವ ಹೇಳಿಕೆಯನ್ನು ನೀಡಿದ್ದು, ಇದಕ್ಕೆ ಗೋಷ್ಠಿಯಲ್ಲಿ ಇರುವ ಇತರರು ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಹಿಂಪ ಪುತ್ತೂರು ಜಿಲ್ಲೆಯ ಸಹಕಾರ್ಯದರ್ಶಿ ನವೀನ್ ನೆರಿಯ, ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ ಹಾಗೂ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಕಾಜೂರು ಪರಿಸರದಲ್ಲಿರುವ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಅವರ ಮೇಲೆ ಹುನ್ನಾರವನ್ನು ಉಂಟುಮಾಡುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಇದು ಜನಪ್ರತಿನಿಧಿಗಳು, ಸರಕಾರದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ವೇಳೆ ಗೊಂದಲ ಗಲಭೆಗಳನ್ನು ಸೃಷ್ಟಿಸುವ ಅನುಮಾನ ಉಂಟುಮಾಡಿದೆ. ಇಂತಹ ಹೇಳಿಕೆ ನೀಡಿದವರ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದ್ದು. ವಿಹಿಂಪ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳುವ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.