ಬೆಳ್ತಂಗಡಿ ತಾಲೂಕು ಪ್ರಭಾರ ತಾಲೂಕು ಆರೋಗ್ಯಧಿಕಾರಿಯಾಗಿ ಡಾ.ಪ್ರಕಾಶ್ ಬಿ.

ಶೇರ್ ಮಾಡಿ

ನೇಸರ ಜು.01: ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿಯಾಗಿದ್ದ ಡಾ.ಕಲಾ ಮಧು ಶೆಟ್ಟಿ, ನಿವೃತ್ತಗೊಂಡ ನಂತರ ಆ ಸ್ಥಾನಕ್ಕೆ ಪ್ರಭಾರ ತಾಲೂಕು ಆರೋಗ್ಯಧಿಕಾರಿಯಾಗಿ ಡಾ.ಪ್ರಕಾಶ್ ಬಿ., ರವರಿಗೆ ಜೂನ್ 30ರಂದು ಅಧಿಕಾರ ಹಸ್ತಾಂತರಿಸಿದ್ದಾರೆ.

ಜನರ ಮೆಚ್ಚಿನ ವೈದ್ಯಾಧಿಕಾರಿ ಡಾ.ಪ್ರಕಾಶ್
ಮೂಲತ: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬೇರಿಕೆ ನಿವಾಸಿಯಾಗಿರುವ ವಿಷ್ಣಯ್ಯ ಹಾಗೂ ಮಹಾಲಕ್ಷ್ಮಿ ದಂಪತಿಗಳ ಪುತ್ರನಾಗಿರುವ ಡಾ.ಪ್ರಕಾಶ್ ಬಿ., 1998ರಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಹಾಜರಾದರು. 2006ರಲ್ಲಿ ಸರಕಾರವು ಇದೇ ಆಸ್ಪತ್ರೆಗೆ ವೈದ್ಯಾಧಿಕಾರಿಯಾಗಿ ಇವರನ್ನು ನೇಮಕಗೊಳಿಸಿತು. 2010ರಲ್ಲಿ ಧರ್ಮಸ್ಥಳ ಪ್ರಾ.ಆ.ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ನೇಮಕಗೊಂಡರು. 2017ರಲ್ಲಿ ಅರಸಿನಮಕ್ಕಿ (ಹತ್ಯಡ್ಕ) ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿಯೂ, ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಭಾರ ವೈದ್ಯಾಧಿಕಾರಿಯಾಗಿಯೂ ನೇಮಕಗೊಂಡರು. ಕೊಕ್ಕಡ ಭಾಗದಲ್ಲಿ “ದಿ ಬೆಸ್ಟ್ ಡಾಕ್ಟರ್” ಎಂದೇ ಜನಸಾಮಾನ್ಯರಿಗೆ ಚಿರಪರಿಚಿತರಾಗಿರುವ ಇವರು ಗಂಭೀರ ಸ್ಥಿತಿಯಲ್ಲಿ ದಾಖಲಾದ ರೋಗಿಗಳನ್ನು ಕೂಡ ಗುಣಮುಖಗೊಳಿಸಿದ್ದಾರೆ. ಹೆರಿಗೆ ಪರಿಣಿತ ನಾಗಿಯೂ ಹಗಲು ರಾತ್ರಿ ಎನ್ನದೆ ರೋಗಿಗಳ ಸೇವೆಯನ್ನು ಮಾಡುತ್ತಾ ಬಂದಿರುವ ಇವರ ಉತ್ತಮ ವೈದ್ಯ ಸೇವೆಯನ್ನು ಗುರುತಿಸಿ 2010ರಲ್ಲಿ “ಉತ್ತಮ ವೈದ್ಯಾಧಿಕಾರಿ” ಎಂಬ ಪ್ರಶಸ್ತಿ ದೊರೆತಿರುತ್ತದೆ. 2014ರಲ್ಲಿ ಇವರಿದ್ದ ಕೊಕ್ಕಡ ಆರೋಗ್ಯ ಕೇಂದ್ರಕ್ಕೆ “ಉತ್ತಮ ಆರೋಗ್ಯ ಕೇಂದ್ರ ಪ್ರಶಸ್ತಿ” ಲಭಿಸಿದೆ. 2016ರಲ್ಲಿ ಇವರ ಅವಧಿಯಲ್ಲಿಯೇ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿತು. ಪ್ರಚಾರ ಬಯಸದ ಇವರ ಜನ ಪರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

ಸುಖೀ ಸಂಸಾರ
ಸಾಧು ವ್ಯಕ್ತಿತ್ವದ, ಮಿತ ಭಾಷಿಯಾಗಿರುವ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ, ಡಾ.ಪ್ರಕಾಶ್ ಬಿ., ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿ, ಅಳಿಕೆಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಪೂರೈಸಿರುತ್ತಾರೆ. ಬಳಿಕ ಮೈಸೂರಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿರುತ್ತಾರೆ. ಪತ್ನಿ ನೆಲ್ಯಾಡಿಯಲ್ಲಿ ದಂತ ವೈದ್ಯಯಾಗಿರುವ ಡಾ.ರಂಜಿತಾ ಹಾಗೂ ಪುತ್ರರಾದ ಪ್ರಜ್ವಲ್ ಮತ್ತು ರಾಹುಲ್ ಜೊತೆ ಸುಖಿ ಜೀವನ ನಡೆಸುತ್ತಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!