ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಬತ್ತದೋತ್ಸಾಹ’ ಕಾರ್ಯಕ್ರಮಕ್ಕೆ ಚಾಲನೆ

ಶೇರ್ ಮಾಡಿ

ವಿಶೇಷತೆ

  • ಯುವ ಕೃಷಿಕರ ಮೆರಗು
  • ತುಳುನಾಡ ಶೈಲಿಯ ಮೌಖಿಕ ಸಾಹಿತ್ಯದ ಪಾಡ್ದನ
  • ತುಳುನಾಡ ಸಾಂಪ್ರದಾಯಿಕ ಶೈಲಿಯ ತೆಂಗಿನ ಸಿರಿಯನ್ನು ಬಿಡಿಸುವ ಮೂಲಕ ಬತ್ತದೋತ್ಸಾಹ ಕಾರ್ಯಕ್ರಮಕ್ಕೆ ಚಾಲನೆ
  • ಪಠ್ಯಾಧಾರಿತ ಪ್ರಾಯೋಗಿಕ ಕಲಿಕೆಗೆ ಆದ್ಯತೆ

ನೇಸರ ಜು.02: ಉಜಿರೆ ಎಸ್.ಡಿ.ಎಂ ಪದವಿ ಕಾಲೇಜು ಅಂಗಳದಲ್ಲಿ ಸಾಂಪ್ರದಾಯಿಕ ಕೃಷಿಯ ಸೊಗಡು ಅರಳಿಕೊಂಡಿತ್ತು. ಅಲ್ಲಿ ಯುವ ಕೃಷಿಕರದ್ದೇ ಮೆರಗು. ತುಳುನಾಡ ಶೈಲಿಯ ಮೌಖಿಕ ಸಾಹಿತ್ಯದ ಪಾಡ್ದನ ಎಲ್ಲೆಲ್ಲೂ ಕೇಳಿಬರುತ್ತಿತ್ತು. ಯುವ ಕೃಷಿಕರು ನೇಗಿಲು, ನೊಗ ನೇಜಿಯನ್ನು ಹಿಡಿದು ನಾಟಿ ಮಾಡಲು ಉತ್ಸುಕರಾಗಿದ್ದರು.
ಎಸ್‌.ಡಿ.ಎಂ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಅಂಗಳದಲ್ಲಿ ಆಯೋಜಿಸಲಾಗಿದ್ದ ‘ಬತ್ತದೋತ್ಸಾಹ’ ವಿಶಿಷ್ಟ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
ಪ್ರಸ್ತುತ ಕಾಲಘಟ್ಟದ ಸ್ಪರ್ಧಾತ್ಮಕ ಯುಗದಲ್ಲಿ ತ್ವರಿತ ಮತ್ತು ಅಧಿಕ ಆದಾಯ ನೀಡುವ ವಾಣಿಜ್ಯ ಬೆಳೆಗಳ ನಡುವೆ ಪಾರಂಪರಿಕ ವಿಧಾನದಲ್ಲಿ ಕೃಷಿ ಮಾಡುವುದನ್ನು ಯುವ ಜನತೆ ಕಡೆಗಣಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿಯ ಮಹತ್ವ ತಿಳಿಸುವ ಉದ್ದೇಶದಿಂದ ಪ್ರಾಯೊಗಿಕವಾಗಿ ನೇಜಿ ನೆಡುವ ಮೂಲಕ ಬತ್ತದೋತ್ಸಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಅವರು ತುಳುನಾಡ ಸಾಂಪ್ರದಾಯಿಕ ಶೈಲಿಯ ತೆಂಗಿನ ಸಿರಿಯನ್ನು ಬಿಡಿಸುವ ಮೂಲಕ ಬತ್ತದೋತ್ಸಾಹ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಠ್ಯಾಧಾರಿತ ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡುವಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಸದಾ ಮುಂಚೂಣಿ. ಈ ನಿಟ್ಟಿನಲ್ಲಿ ಬತ್ತದೋತ್ಸಾಹ ಕಾರ್ಯಕ್ರಮ ಮಹತ್ವದ ಪ್ರಾಯೋಗಿಕ ಹೆಜ್ಜೆ ಎಂದು ಹೇಳಿದರು.

205 ಪಾಲಿಬ್ಯಾಗ್‌ಗಳಲ್ಲಿ 30 ದಿನ ಬೆಳೆದಿರುವ ನೇಜಿಯನ್ನು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ನಾಟಿ ಮಾಡಿದ್ದಾರೆ. ಈ ಸಸಿಯ ಬೆಳವಣಿಗೆಯನ್ನು ಹಂತಹಂತವಾಗಿ ನೂರು ದಿನಗಳ ಅವಧಿಯವರೆಗೆ ವಿದ್ಯಾರ್ಥಿಗಳು ಗಮನಿಸಲಿದ್ದಾರೆ. ಕಜೆ, ಜಯಾ ಜಾತಿಯ ಭತ್ತದ ನೇಜಿಗಳನ್ನು ಕಟಾವು ಹಂತದವರೆಗೂ ಪೋಷಿಸಿ ಉಳಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳದ್ದೇ ಆಗಿದೆ. ಅಂದಾಜು 8000 ರೂ ವೆಚ್ಚದಲ್ಲಿ ಈ ವಿನೂತನ ಯೋಜನೆಯು ರೂಪುಗೊಂಡಿದ್ದು, ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ಉಸ್ತುವಾರಿಯಲ್ಲಿ ನಡೆಯಲಿದೆ.

ಸಸ್ಯಶಾಸ್ತ್ರ ವಿಭಾಗದ ‘ಸಸ್ಯಸೌರಭ’ ಕ್ಲಬ್ ವತಿಯಿಂದ 205 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಜಿ.ಎಫ್.ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಕರ ಭಂಡಾರಿ, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎನ್.ಉದಯಚಂದ್ರ, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಜಯಕುಮಾರ್ ಶೆಟ್ಟಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ, ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ ‘ವನಶ್ರೀ’ ಅಧ್ಯಕ್ಷ, ಎಸ್.ಡಿ.ಎಂ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕುಮಾರ ಹೆಗ್ಡೆ ಬಿ.ಎ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಪ್ರಜ್ಞಾ ನಿರೂಪಿಸಿದರು .

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!