ನೇಸರ ಜು.03: ಮಳೆಗಾಲ ಆರಂಭಗೊಂಡು ಚಾರ್ಮಾಡಿ ಘಾಟಿ ಪ್ರದೇಶದ ಜಲಪಾತ, ಹಳ್ಳ, ತೊರೆಗಳು ತುಂಬಿಕೊಳ್ಳತೊಡಗಿವೆ. ಇದರ ಜತೆ ಈ ಭಾಗದಲ್ಲಿ ಸಾಗುವ ಪ್ರವಾಸಿಗರ ಪುಂಡಾಟವು ಹೆಚ್ಚುತ್ತಿದೆ. ಇಲ್ಲಿನ ಸೌಂದರ್ಯವನ್ನು ಆಸ್ವಾದಿಸುವ ನೆಪದಲ್ಲಿ ಇತರ ವಾಹನ ಸವಾರರಿಗೆ ತೊಂದರೆ, ಟ್ರಾಫಿಕ್ ಜಾಮ್ ಮೊದಲಾದ ಸಮಸ್ಯೆಗಳು ಎದುರಾಗುತ್ತಿವೆ.
ಈ ವಾರಂತ್ಯವು ಇಲ್ಲಿ ವಾಹನಗಳನ್ನು ನಿಲ್ಲಿಸಿ ಸಾಕಷ್ಟು ಪುಂಡಾಟಗಳು ನಡೆದಿವೆ. ಅಪಾಯಕಾರಿ ಬಂಡೆಗಳನ್ನು ಏರುವುದು, ಏಕಾಏಕಿ ರಸ್ತೆ ದಾಟುವುದು, ರಸ್ತೆ ಮಧ್ಯೆಯೇ ಸೆಲ್ಫೀ, ನೃತ್ಯ, ತಡೆಗೋಡೆ ಜಾರುವ ಸ್ಥಳಗಳನ್ನು ಹತ್ತುವುದು ಮಾಮೂಲಾಗಿದೆ. ಘಾಟಿ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಸರತಿ ಸಾಲಲ್ಲಿ ಕಂಡುಬಂದಿದೆ. ಮಂಜು ಕವಿದ ವಾತಾವರಣ, ಮಳೆ, ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ನಿಂದ ಇತರ ವಾಹನ ಸವಾರರು ಪರದಾಡುವಂತಾಗಿದೆ.
ಪೊಲೀಸ್ ವಾಹನ ಗಸ್ತು ನಿರತವಾಗಿದ್ದರೂ ಅದನ್ನು ಕಂಡ ಕೂಡಲೇ ಜಾಗ ಖಾಲಿ ಮಾಡುವ ಪ್ರವಾಸಿಗರು ಇನ್ನೊಂದು ಪ್ರದೇಶಕ್ಕೆ ಠಿಕಾಣಿ ಬದಲಾಯಿಸಿ ಪೊಲೀಸರಿಗೆ ಸವಾಲಾಗುತ್ತಿದ್ದಾರೆ.
ಎಚ್ಚರಿಕೆ ಫಲಕಗಳಿಲ್ಲ
ಘಾಟಿ ಪ್ರದೇಶ ನಾನಾ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಿದ್ದರು ಇಲ್ಲಿನ ಜಲಪಾತ, ಹಳ್ಳ, ತೊರೆಗಳ ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧದ ಕುರಿತು ಯಾವುದೇ ಎಚ್ಚರಿಕೆ ಫಲಕಗಳಿಲ್ಲದಿರುವುದು ಪ್ರವಾಸಿಗರಿಗೆ ವರದಾನವಾಗಿದೆ. ಇದರಿಂದ ಕೆಲವು ಪ್ರವಾಸಿಗರು ಪೊಲೀಸರೊಂದಿಗೆ ವಾಗ್ವಾದವನ್ನು ನಡೆಸುವ ಪ್ರಸಂಗಗಳು ನಡೆಯುತ್ತಿವೆ. ಘಾಟಿ ಪ್ರದೇಶದ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.