ನೇಸರ ಜು.05: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಶ್ರೀನಗರ ಕ್ರಾಸ್‌ನಲ್ಲಿ ಇರುವ ಖಾಸಗಿ ಹೋಟೆಲ್‌ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಘಟನೆಯಿಂದ ಇಡೀ ಹುಬ್ಬಳ್ಳಿ ನಗರವೇ ಬೆಚ್ಚಿ ಬಿದ್ದಿದೆ. ಕರ್ನಾಟಕ ರಾಜ್ಯಾದ್ಯಂತ ಚಂದ್ರಶೇಖರ ಗುರೂಜಿ ಅವರ ಅನುಯಾಯಿಗಳಿದ್ದು, ಎಲ್ಲರ ಪಾಲಿಗೆ ಇದು ಶಾಕಿಂಗ್ ನ್ಯೂಸ್..!
ಚಂದ್ರಶೇಖರ ಗುರೂಜಿ ಅವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಏನಾಯ್ತು..?
ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರು ಹುಬ್ಬಳ್ಳಿಯ ಉಣಕಲ್ಲ ಕೆರೆ ಬಳಿಯ ಪ್ರೆಸಿಡೆಂಟ್ ಹೊಟೇಲ್‌ಗೆ ಬಂದಿದ್ದರು. ಈ ವೇಳೆ ಹೋಟೆಲ್‌ನ ಸ್ವಾಗತಕಾರರ ಕೌಂಟರ್ ಬಳಿ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಜುಲೈ 5 ರಂದು ನಡೆದಿರುವ ಈ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೋಟೆಲ್‌ನ ಸ್ವಾಗತಕಾರ ಕೌಂಟರ್ ಬಳಿ ಕುಳಿತಿದ್ದ ವೇಳೆ ಭಕ್ತರ ಸೋಗಿನಲ್ಲಿ ದುಷ್ಕಮಿಗಳ ತಂಡ ಏಕಾಏಕಿ ದಾಳಿ ನಡೆಸಿದ್ದು, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಸಾಹಿಲ ಬಾಗ್ಲಾ, ಗೋಪಾಲ ಬ್ಯಾಕೋಡ ಆಗಮಿಸಿ ಪರಿಶೀಲಿಸಿದರು. ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ – ಧಾರವಾಡ ಕಮೀಷನರ್ ಲಾಬೂರಾಮ್ ಕೂಡಾ ಆಗಮಿಸಿ ಸ್ಥಳದ ಪರಿಶೀಲನೆ ನಡೆಸಿದರು.
ಯಾವ ಕಾರಣಕ್ಕಾಗಿ ಗುರೂಜಿ ಅವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೋಟೆಲ್‌ನಲ್ಲಿ ರಿಸಪ್ಶನ್‌ನಲ್ಲಿಯೇ ಚಾಕು ಇರಿದ ಬಳಿಕ ಇಬ್ಬರು ದುಷ್ಕರ್ಮಿಗಳು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
‘ಜುಲೈ 2 ರಂದೇ ಹೋಟೆಲ್‌ಗೆ ಆಗಮಿಸಿದ್ದ ಚಂದ್ರಶೇಖರ್ ಗುರೂಜಿ, ಜುಲೈ 6, ಬುಧವಾರ ಹೋಟೆಲ್ ರೂಮ್ ಖಾಲಿ ಮಾಡಬೇಕಿತ್ತು. ಆದರೆ, ಮಂಗಳವಾರ ಮಧ್ಯಾಹ್ನ ಹೋಟೆಲ್‌ನ ರಿಸೆಪ್ಶನ್‌ನಲ್ಲಿ ಕುಳಿತಿದ್ದ ವೇಳೆ ಗುರೂಜಿ ಬಳಿ ಬಂದ ದುಷ್ಕರ್ಮಿಗಳು ಕಾಲಿಗೆ ನಮಸ್ಕಾರ ಮಾಡುವಂತೆ ನಟಿಸಿ ಅವರಿಗೆ ಚಾಕು ಇರಿದಿದ್ದಾರೆ’
ಚಂದ್ರಶೇಖರ ಗುರೂಜಿ ಜೀವನ – ಸಾಧನೆ
ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದ ಚಂದ್ರಶೇಖರ್, ಹಲವು ಪುಸ್ತಕಗಳನ್ನೂ ಬರೆದಿದ್ದರು. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದ್ದರು.
ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಸಿವಿಲ್ ಎಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್‌ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು.
ಸಿಜಿ ಪರಿವಾರ್ ಗ್ಲೋಬಲ್ ವಿಷನ್‌ನ ಚೇರ್ಮನ್ ಕೂಡ ಆಗಿದ್ದ ಚಂದ್ರಶೇಖರ್ ಗುರೂಜಿ, 2016ರಲ್ಲಿ ಸರಳ ಜೀವನ ಎನ್ನುವ ಇನ್ಫೋ ಎಂಟರ್‌ಟೇನ್‌ಮೆಂಟ್ ಟಿವಿ ಚಾನೆಲ್ ಅನ್ನೂ ಆರಂಭ ಮಾಡಿದ್ದರು. ಚಂದ್ರಶೇಖರ ಗುರೂಜಿಯವರು 2002 ರಲ್ಲಿ ಸಿಜಿ ಪರಿವಾರ್ ಎನ್ನುವ ಎಂಬ ಖಾಸಗಿ ಲಿಮಿಟೆಡ್ ಕಂಪನಿಯನ್ನು ಆರಂಭಿಸಿದ್ದರು. ಆ ಮೂಲಕ 350 ಕ್ಕೂ ಹೆಚ್ಚು ಶಿಷ್ಯರು ಮತ್ತು ಅನುಯಾಯಿಗಳೊಂದಿಗೆ ಸರಳ ವಾಸ್ತು ವಿಚಾರವನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.