ವಿದ್ಯಾರ್ಥಿಗಳಿಗೆ ಮಾದರಿಯಾದ 12 ವರುಷದ ಕೊಕ್ಕಡದ ಪೋರ ಧ್ಯಾನ್..!!

ಶೇರ್ ಮಾಡಿ

ಮೊಬೈಲ್, ಟಿವಿ ನೋಡುತ್ತಾ ಕಾಲ ಕಳೆಯುತ್ತಿರುವ ವಿದ್ಯಾರ್ಥಿಗಳ ಪೈಕಿ ಹೊಸದಾಗಿ ಆವಿಷ್ಕರಿಸಿ ವಿದ್ಯಾರ್ಥಿಗಳು ಹೀಗೂ ಮಾಡಬಹುದೆಂಬುದನ್ನು ಮಾದರಿಯಾಗಿ ತೋರಿಸಿಕೊಟ್ಟ 12ರ ವಯಸ್ಸಿನ ಬಾಲಕ ಧ್ಯಾನ್..!!!

ನೇಸರ ಜು.06:ಕೊರೋನ ಕಾಲದಲ್ಲಿ ಶಾಲೆಯು ಇಲ್ಲದೆ, ಮನೆಯಿಂದ ಹೊರಗೂ ಬಾರದೆ ಮನೆಯಲ್ಲೇ ಕೂತು ಮೊಬೈಲ್, ಟಿವಿ ಚಟಕ್ಕೆ ಮಕ್ಕಳು ಹಾಳಾದರೆಂದು ಬೊಬ್ಬಿಡುವ ಪೋಷಕರೇ ಹೆಚ್ಚು. ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬ 12ರ ಪೋರ ರಜಾ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ಹೊಸ ಆವಿಷ್ಕಾರಗಳೊಂದಿಗೆ ಎಲ್ಲರೂ ನೋಡಿ ಬೆರಗುಗೊಳ್ಳುವಂತೆ ಮಾಡಿದ್ದಾನೆ ಧ್ಯಾನ್. ಅರೆಗಳಿಗೆಯು ಸುಮ್ಮನಿರದ ಪಾದರಸದಂತೆ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಪೋರ. ಕೊಕ್ಕಡದ ರಕ್ತೇಶ್ವರಿ ಪೆಟ್ರೋ ಪಾಯಿಂಟ್ ಮಾಲಕ ನಾರಾಯಣ ಗೌಡ ಹಾಗೂ ಧ್ಯಾನ್ ದಿಯಾ ಕೆಫೆ ಮಾಲಕಿ ಶೋಭವತಿ ದಂಪತಿಗಳ ಪುತ್ರ.

ಎರಡು ವರ್ಷಗಳ ಕೊರೋನ ರಜೆಯ ಸಂದರ್ಭ ಎಲ್ಲಾ ಮಕ್ಕಳಂತೆ ಮೊಬೈಲ್ ಕೈಗೆತ್ತಿಕೊಂಡವನೇ ಗೇಮ್‌ಗಳ ಕಡೆ ಗಮನಹರಿಸದೆ ವಿಜ್ಞಾನಕ್ಕೆ ಸಂಬಂಧಿಸಿದಂತಹ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹುಡುಕಲು ಆರಂಭಿಸಿದ. ನಾನೂ ಹೊಸದಾಗಿ ಆವಿಷ್ಕಾರಿಸಬೇಕೆಂದು ಮನ ಮಾಡಿದ. ಸತ್ಫಲವಾಗಿ ಈತನೇ ತಯಾರಿಸಿದ ಹಿಟಾಚ್, ರೈಸ್ ಮಿಲ್, ಏರ್ ಕೂಲರ್ ಮಾಡೆಲ್‌ಗಳಾಗಿ ಪ್ರದರ್ಶನಗೊಂಡಿದೆ.
ನಿಜವಾದ ಹಿಟಾಚನ್ನೇ ಹೋಲುವ ಅದರಂತೆ ಕಾರ್ಯನಿರ್ವಹಿಸುವ ಮಾದರಿಯೊಂದನ್ನು ತಯಾರಿಸಿ ಪ್ರಯೋಗಕ್ಕಿಳಿಸಿದ್ದಾನೆ. ರೈಸ್ ಮಿಲ್ಲರ್ ನಲ್ಲಿ ಅಕ್ಕಿ ಹಾಕಿದೊಡನೆ ಅಕ್ಕಿ ಹಿಟ್ಟು ತಯಾರಾಗುವಂತೆಯೂ, ಸೆಕೆಗಾಲದಲ್ಲಿ ಸೆಕೆಯನ್ನು ತಣಿಸಲು ಏರ್ ಕೂಲರ್‌ಗಳನ್ನು ಕೂಡ ತಯಾರಿಸಿದ್ದಾನೆ. ಕೇವಲ ಹವ್ಯಾಸವಾಗಿ ಅಭ್ಯಾಸ ಮಾಡಿಕೊಂಡ ಈ ಪೋರ ತನ್ನ ಬಿಡುವಿನ ವೇಳೆಯಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಸಿ ಹೊಸ ಹೊಸ ಆವಿಷ್ಕಾರದತ್ತ ಮನ ಮಾಡುತ್ತಿದ್ದಾನೆ.

ಹವ್ಯಾಸಗಳು:
ಈ 12ರ ಪೋರನಿಗೆ ಕಾರುಗಳೆಂದರೆ ಪ್ರಾಣ. ಕಾರು ಓಡಿಸುತ್ತಾನೆ. ಅಲ್ಲದೆ ನಿಜವಾದ ಹಿಟಾಚನ್ನು ಆಪರೇಟ್ ಮಾಡುತ್ತಾನೆ. ಲಾರಿ ಟಿಪ್ಪರ್ ಗಳನ್ನು ಕೂಡ ಚಲಾಯಿಸುತ್ತಾನೆ.ಫೋಟೋಗ್ರಾಫಿ, ಕ್ರೀಡೆಯಲು ಸದಾ ಮುಂದಿರುವ ಈತ ಸುಂದರವಾದ ಚಿತ್ರಗಳನ್ನು ಕೂಡಾ ಬಿಡಿಸುತ್ತಾನೆ. ಯಕ್ಷಗಾನದ ಪಕ್ಕ ವಾದ್ಯವಾದ ಚೆಂಡೆಯನ್ನು ಕೂಡ ಅಭ್ಯಾಸಿಸುತ್ತಾನೆ. ಊರಿನ ಯಾವುದೇ ದೇವಸ್ಥಾನದ ಕಾರ್ಯಕ್ರಮಗಳಿರಲಿ, ಭಜನಾ ಕಾರ್ಯಕ್ರಮಗಳಿರಲಿ, ಕ್ರೀಡಾ ಚಟುವಟಿಕೆ ಕಾರ್ಯಕ್ರಮಗಳಿರಲಿ ತಪ್ಪದೇ ಪಾಲ್ಗೊಳ್ಳುತ್ತಾನೆ. ಈತ ಹೊಸ ತರಹದ ಕಲಿಕೆಯಲ್ಲಿ ಸದಾ ಆಸಕ್ತ.

ಈತನ ಹಿಟಾಚಿ ಕಾರ್ಯನಿರ್ವಹಿಸುವ ವಿಧಾನ:
ರಟ್ಟುಗಳು, ಡಿಸಿ ಮೋಟಾರ್, ಬ್ಯಾಟರಿ, ಇಂಜೆಕ್ಷನ್ ಗೆ ಉಪಯೋಗಿಸುವ ಸಿರಿಂಜ್ ಪೈಪುಗಳು, ಗ್ಲುಕೋಸ್ ವಯರ್ ಗಳು, ಮೈಕ್ರೋ ಸ್ವಿಚ್ ಗಳನ್ನು ಈ ಸಾಧನದಲ್ಲಿ ಬಳಸಲಾಗಿದೆ. 12 ವ್ಯಾಟ್‌ನ ಬ್ಯಾಟರಿ ಇರುವ ಈ ಸಾಧನದಲ್ಲಿ 6 ಮೈಕ್ರೋ ಸ್ವಿಚ್ ಗಳಿವೆ. 3 ಡಿಸಿ ಮೋಟಾರ್‌ಗಳಿವೆ. 2 ಸಣ್ಣ ಕಡ್ಡಿಗಳನ್ನು ಹಿಟಾಚಿನ ಚಕ್ರಗಳಿಗೆ ಸಂಪರ್ಕಿಸಿ, ಚಾಲಕನ ಜಾಗದಲ್ಲಿ 2 ಮೈಕ್ರೋ ಸ್ವಿಚ್ ಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಸ್ವಿಚ್ ಗೂ ನಂಬರ್ ಗಳನ್ನು ಕೊಡಲಾಗಿದ್ದು, ಸ್ವಿಚ್ ಗಳ ಮೂಲಕವೇ ಹಿಟಾಚ ಮುಂದೆ, ಹಿಂದೆ, ಎಡ, ಬಲ ಚಲಿಸಲು ಅನುಕೂಲ ಮಾಡಿ ಕೊಡುತ್ತದೆ. ಉಳಿದ ಸ್ವಿಚ್ ಹಿಟಾಚಿನ ಬಕೆಟ್ ಭಾಗವನ್ನು ಮೇಲೆ ಕೆಳಗೆ ಮಾಡಲು, ಭಾರ ಎತ್ತಲು, ಗುಂಡಿ ತೆಗೆಯಲು ಸಹಕರಿಸುತ್ತದೆ.

ಕನಸು:
ನನ್ನ ಈ ಸಾಧನೆಗೆ ನನ್ನ ತಂದೆ, ತಾಯಿ, ಸಹೋದರಿ ದಿಯಾ ಹಾಗೂ ಮಿತ್ರರು ಸಹಕಾರ, ಪ್ರೋತ್ಸಾಹ ನೀಡುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾನೆ. ಏನಾದರೂ ಹೊಸದನ್ನು ತಯಾರಿಸಬೇಕೆಂದು ಈತನ ಹಂಬಲ. ಚೆನ್ನಾಗಿ ಓದಿ ಎಂಜಿನಿಯರ್ ಆಗಿ ದೇಶ ಕಾಯುವ ಯೋಧರಿಗೆ ಸ್ವಯಂಚಾಲಿತ ಆಯುಧಗಳನ್ನು ಸಿದ್ದಪಡಿಸಿಕೊಡಬೇಕು ಎಂಬುದೇ ನನ್ನಾಸೆ – ಧ್ಯಾನ್ ಎನ್

Leave a Reply

error: Content is protected !!