ಶಿರಾಡಿ ಘಾಟಿ ರಸ್ತೆ ಸಂಪೂರ್ಣ ಬಂದ್ ಮಾಡಲ್ಲ ➽ ಭೂಕುಸಿತ ಪ್ರದೇಶ ಪರಿಶೀಲಿಸಿದ ಸಚಿವ ಸಿ.ಸಿ.ಪಾಟೀಲ್

ಶೇರ್ ಮಾಡಿ

ನೇಸರ ಜು.12: ಮಂಗಳೂರು-ಬೆಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿಯಾಗಿರುವ ಶಿರಾಡಿ ಘಾಟಿ ರಸ್ತೆ ಬಂದ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ಅವರು ಜು.11ರಂದು ಶಿರಾಡಿ ಘಾಟ್‌ನ ದೋಣಿಗಲ್ ಸಮೀಪ ಹೆದ್ದಾರಿ ಕೆಳಭಾಗದ ಭೂಕುಸಿತದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಈ ಹೆದ್ದಾರಿಯಲ್ಲಿ ಪ್ರತಿದಿನ 30 ಸಾವಿರ ವಾಹನಗಳ ಓಡಾಟ ಇರುವ ಕಾರಣ ರಸ್ತೆ ಸಂಪೂರ್ಣ ಬಂದ್ ಮಾಡದೆ ಏಕಮುಖ ಬಂದ್ ಮಾಡಿ ಕಾಮಗಾರಿ ಮಾಡುವ ಚಿಂತನೆ ಇದೆ.

ಮಂಗಳೂರು ಸಂಪರ್ಕದ ಪ್ರಮುಖ ರಸ್ತೆಯಾದ ಕಾರಣ ಬಂದ್ ಮಾಡದೇ ರಸ್ತೆ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿರುವುದಾಗಿ ಸಚಿವರು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ನೆಲಮಂಗಲದಿಂದ ಹಾಸನದ ತನಕ ಚತುಷ್ಪಥ ರಸ್ತೆ ಕಾಮಗಾರಿ ಅಚ್ಚುಕಟ್ಟಾಗಿ ನಡೆದಿದೆ. ಆದರೆ ಹಾಸನದಿಂದ ಸಕಲೇಶಪುರ ಮಾರ್ಗದ ರಸ್ತೆ ಹಲವು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ. ಕೋವಿಡ್ ಹಾಗೂ ಮಳೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕೆಲವೆಡೆ ಕಳಪೆ ಕಾಮಗಾರಿ ನಡೆದಿದೆ. ಸಮರ್ಪಕವಾಗಿ ಕಾಮಗಾರಿ ನಡೆಸಲು ಸೂಚನೆ ನೀಡಿದ್ದೇನೆ. 2024ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ಭರವಸೆ ನೀಡಿದ್ದಾರೆ ಎಂದು ಸಿ.ಸಿ.ಪಾಟೀಲ್ ಹೇಳಿದ್ದಾರೆ.

Leave a Reply

error: Content is protected !!