ನೇಸರ ಜು.17: ನೆಲ್ಯಾಡಿಯ ಉದ್ಯಮಿ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಹಾಗೂ ಎಲೈಟ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಯು.ಪಿ ವರ್ಗೀಸ್ ರು ನಿಧನರಾದ ಹಿನ್ನೆಲೆಯಲ್ಲಿ ನೆಲ್ಯಾಡಿಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಜುಲೈ 16ರಂದು ಸಂತ ಚಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್ ರವರು ಮಾತನಾಡಿ ಬದುಕಿದ್ದಾಗ ನಾವು ಮಾಡುವ ಸತ್ಕಾರ್ಯಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತದ್ದಾಗಿದೆ. ಸುಮಾರು 45 ವರ್ಷಗಳ ಹಿಂದೆ ನೆಲ್ಯಾಡಿ ಪರಿಸರಕ್ಕೆ ಬಂದಂತ ಯು ಪಿ ವರ್ಗೀಸರವರು ಕಷ್ಟಪಟ್ಟು ದುಡಿದು ತಾನು ಗಳಿಸಿದ್ದರಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡಿ, ಊರಿನ ಜನರ ಪ್ರೀತಿ ಗಳಿಸಿದ್ದಾರೆ. ಅವರು ಮಾಡಿದಂತಹ ಸಾಮಾಜಿಕ ಚಟುವಟಿಕೆಗಳನ್ನು ಮಕ್ಕಳು ಮುಂದುವರಿಸಿಕೊಂಡು ಹೋಗುವಂತಾಗಬೇಕೆಂದು ನುಡಿದರು.
ನೆಲ್ಯಾಡಿ ವರ್ತಕರ ಸಂಘದ ಗೌರವ ಅಧ್ಯಕ್ಷರಾದ ಸರ್ವೋತ್ತಮ ಗೌಡರವರು ಮಾತನಾಡಿ ಅತ್ಯಂತ ಕಠಿಣ ಪರಿಶ್ರಮದಿಂದ ಝೀರೋದಿಂದ ಹೀರೋ ಆಗಿ ಬಂದವರು ಯು ಪಿ ವರ್ಗೀಸ್ ರವರು. ನೆಲ್ಯಾಡಿಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಎಲ್ಲಾ ಧರ್ಮದವರಿಗೂ ನೆರವನ್ನು ನೀಡುತ್ತಿದ್ದರು ಎಂದರು.
ನೆಲ್ಯಾಡಿ ಗೆಳೆಯರ ಬಳಗದ ವತಿಯಿಂದ ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಾನಂದ ಬಂಟ್ರಿಯಲ್ ರವರು ಮಾತನಾಡಿ ನನ್ನ ರಾಜಕೀಯ ಜೀವನಕ್ಕೂ ಹಾಗೂ ಸಾರ್ವಜನಿಕವಾದ ಎಲ್ಲಾ ಕೆಲಸ ಕಾರ್ಯಗಳಿಗೆ ಶಕ್ತಿ ತುಂಬುತ್ತಿದ್ದರು ಯು ಪಿ ವರ್ಗಿಸ್ ರವರು. ಗೆಳೆಯರ ಬಳಗದ ದಶಮಾನೋತ್ಸವ ಸಂದರ್ಭದಲ್ಲಿ ವೇದಿಕೆ ನಿರ್ಮಾಣಕ್ಕೆ, ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ನೆಲ್ಯಾಡಿ ಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರು ಸಹಕಾರ, ಸಹಾಯವನ್ನು ನೀಡುತ್ತಿದ್ದರು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ರವರು ಮಾತನಾಡಿ ನೆಲ್ಯಾಡಿಯಲ್ಲಿ ನಡೆದ ಕಾರ್ಯಕ್ರಮಗಳ ಯಶಸ್ವಿನಲ್ಲಿ ಯು ಪಿ ವರ್ಗೀಸ್ ರವರ ಸಹಕಾರ ಸದಾ ಇರುತ್ತಿತ್ತು. ಇವರು ನೆಲ್ಯಾಡಿ ಪರಿಸರಕ್ಕೆ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೂ ಇವರ ಕೊಡುಗೆ ಇದೆ. ಇವರ ಅಗಲಿಕೆಯಿಂದ ನೆಲ್ಯಾಡಿ ಜನತೆಗೆ ಅಪಾರ ನಷ್ಟವಾಗಿದೆ ಎಂದರು.
ನೆಲ್ಯಾಡಿ ಕಟ್ಟಡ ಮಾಲಕ ಸಂಘದ ಅಧ್ಯಕ್ಷ ಓ ಜಿ ನೈನಾನ್, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಜಯಂತಿ ಬಿ ಎಂ, ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷ ಆರ್ ವೆಂಕಟ್ರಮಣ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನ ಮಾಜಿ ಸದಸ್ಯ ವಿಜಯಕುಮಾರ್ ಸೊರಕೆ, ನೆಲ್ಯಾಡಿಯ ನೋಟರಿ, ನ್ಯಾಯವಾದಿ ಇಸ್ಮಾಯಿಲ್, ನೆಲ್ಯಾಡಿ ಮೆಸ್ಕಾಂ ಜೆ.ಇ ರಮೇಶ್ ಕುಮಾರ್, ನೆಲ್ಯಾಡಿ ಬೆಥನಿ ಐ ಟಿ ಐ ನ ಜಾನ್ ಪಿ ಎಸ್, ಮಾತನಾಡಿ ಯು ಪಿ ವರ್ಗೀಸ್ ರವರೊಂದಿಗಿನ ಸಂಬಂಧ ಅವರ ಕಾರ್ಯ ವೈಖರಿಯಗಳ ಬಗ್ಗೆ ಮಾತನಾಡಿ ಅವರ ಆತ್ಮಕ್ಕೆ ಸ್ವರ್ಗ ಪ್ರಾಪ್ತಿಯಾಗಲಿ ಎಂದರು.
ಯು ಪಿ ವರ್ಗೀಸ್ ರವರ ಹಿರಿಯ ಪುತ್ರ ಶಾಜಿ ಯು ವಿ ಯವರು ಮಾತನಾಡಿ ನನ್ನ ತಂದೆಯವರು ನೆಲ್ಯಾಡಿಗೆ ಬಂದ ಆರಂಭದಲ್ಲಿ 5 ಸೆಂಟ್ಸ್ ಮನೆಯಲ್ಲಿ ವಾಸವಿದ್ದು ಮರಗೆಣಸು ಕೃಷಿ ಮಾಡಿ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಬಳಿಕ ಸಣ್ಣ ಹೋಟೆಲ್ ಆರಂಭಿಸಿದರು. ತದನಂತರ ರಬ್ಬರ್ ವ್ಯಾಪಾರವನ್ನು ಆರಂಭಿಸಿದ್ದು. ಊರ ಹಿರಿಯರಿಂದ ಸಾಲ ಪಡೆದು ಸೈಕಲ್ ನಲ್ಲಿ ಹೋಗಿ ರಬ್ಬರ್ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ವ್ಯವಹಾರಗಳ ಬಗ್ಗೆ ಅಪಾರಜ್ಞಾನ ಹೊಂದಿದ್ದರು. ತಂದೆಯವರು ಈಗ ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಬಿಟ್ಟು ಹೋಗಿದ್ದಾರೆ. ನಮ್ಮ ಕುಟುಂಬದ ಮೇಲೆ ಊರಿನವರು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಯು ಪಿ ವರ್ಗೀಸ್ ರವರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಯುಪಿ ವರ್ಗೀಸ್ ರವರ ನುಡಿ ನಮನ ದ ಅವರ ಭಾವಚಿತ್ರವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್ ನ ಮಾಲಕ ಸುಬ್ರಹ್ಮಣ್ಯ ಆಚಾರ್ಯ, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಲಿಯಾಸ್ ಎಂ ಕೆ., ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಟಿ., ಉದ್ಯಮಿ ಸತೀಶ್ ಕೆ ಎಸ್ ದುರ್ಗಾಶ್ರೀ., ನೆಲ್ಯಾಡಿ ಗೆಳೆಯರ ಬಳಗದ ಅಧ್ಯಕ್ಷ ರತ್ನಾಕರ ಶೆಟ್ಟಿ ಕೊಲ್ಯೊಟ್ಟು., ಜೋಸೆಫ್ ನಯನ ಟ್ರೀಡರ್ಸ್, ಜೋಸೆಫ್ ಸ್ಟುಡಿಯೋ ಮಾಲಕ ಜೋಸೆಫ್, ವಿನಯಕುಮಾರ್ ವನಸುಮ ಪ್ರಿಂಟರ್, ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಐ ತೋಮಸ್., ನೆಲ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆನಂದ ಅಜಿಲ, ಜನಾರ್ಧನ ಟಿ ದೈಹಿಕ ಶಿಕ್ಷಕರು, ಯು ಪಿ ವರ್ಗೀಸ್ ರವರ ಪುತ್ರಿ ಸೆಲೀನಾ ಮೊದಲಾದವರು ಉಪಸ್ಥಿತರಿದ್ದರು.