ನೇಸರ ಜು.21: ನಾಡಿನ ಪುಣ್ಯದ ನೆಲೆವೀಡಾಗಿ ಸಮಾಜಮುಖೀ ಯೋಜನೆಗಳಿಂದ ಐತಿಹಾಸಿಕ ಗೌರವ ಗಳಿಗೆ ಸಾಕ್ಷಿಯಾಗಿರುವ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸಭೆಗೆ ಪ್ರವೇಶಿಸುವ ಮೂಲಕ ಜನಸಾಮಾನ್ಯರ ಏಳಿಗೆಗಾಗಿ ಹಲವು ಸೇವೆಗಳನ್ನು ಸಲ್ಲಿಸಿರುವ ಧರ್ಮಾಧಿಕಾರಿಗಳ ಅಗ್ರಮಾನ್ಯ ಸೇವೆಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸಿದ ಕ್ಷಣದಿಂದ ನಾಡಿನಾದ್ಯಂತ ಅಭಿನಂದನೆಯ ಮಹಾಪೂರವೆ ಹರಿದುಬಂದಿತ್ತು.
ಜು. 21 (ಇಂದು) ದಿಲ್ಲಿಯ ಸಂಸತ್ ಭವನದಲ್ಲಿ ಬೆಳಗ್ಗೆ 10.30ಕ್ಕೆ ಡಾ| ಡಿ. ಹೆಗ್ಗಡೆಯವರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿರುವರು. ಡಾ| ಹೆಗ್ಗಡೆಯವರು ಬುಧವಾರ ಸಂಜೆ 8.30ಕ್ಕೆ ದಿಲ್ಲಿ ವಿಮಾನ ನಿಲ್ದಾಣ ತಲುಪಿದ್ದಾರೆ. ಬಳಿಕ ತನ್ನ ಆಪ್ತ ಸ್ನೇಹಿತರೋರ್ವರ ನಿವಾಸ (ವಸಂತ್ ವಿಹಾರ್)ದಲ್ಲಿ ತಂಗಿದ್ದಾರೆ.
ಪ್ರಮಾಣವಚನ ಸಂದರ್ಭದಲ್ಲಿ ಡಾ| ಹೆಗ್ಗಡೆ ಕುಟುಂಬ ವರ್ಗದಿಂದ ಸಹೋದರ ಡಿ. ಸುರೇಂದ್ರ ಕುಮಾರ್, ಶ್ರೇಯಸ್ ಕುಮಾರ್, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಧರ್ಮಸ್ಥಳ ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ, ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಜತೆಗಿರುವರು.
ದಿಲ್ಲಿ ತಲುಪಿದ ಹೆಗ್ಗಡೆ ಅವರನ್ನು ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.
ಪ್ರಮಾಣವಚನಕ್ಕೂ ಮುನ್ನಾದಿನ ಬುಧವಾರ ಮುಂಜಾನೆ ತಾನು ಆರಾಧಿಸುವ ಮಂಜುನಾಥ ಸ್ವಾಮಿಗೆ ಶಿರಬಾಗಿ ನಮಿಸಿ ಪ್ರಾರ್ಥನೆ ಸಲ್ಲಿಸಿ ಸ್ವಾಮಿಯ ಆಶೀರ್ವಾದ ಪಡೆದು ಬಳಿಕ ದಿಲ್ಲಿಗೆ ತೆರಳಿದ್ದರು.