ನೇಸರ ಜು.22: ಬೇಸಿಗೆಯಲ್ಲಿ ಕಾಡಿನಿಂದ ಬರುವ ನೀರು ಕೃಷಿಗೆ ಆಧಾರವಾದರೆ, ಮಳೆಗಾಲದಲ್ಲಿ ಇದೇ ನೀರು ಮನೆಗೆ ವಿದ್ಯುತ್ ಒದಗಿಸಲು ಸಹಕಾರ ನೀಡುತ್ತಿದೆ.
ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ದರ್ಭೆತಡ್ಕ ಸಮೀಪದ ಜಯರಾಮ ಪಾಳಂದ್ಯೆ ತಮ್ಮ ತೋಟದಲ್ಲಿರುವ ನೀರಿನಾಶ್ರಯವಾಗಿರುವ ಗುಡ್ಡ ಪ್ರದೇಶದಿಂದ ಹರಿದು ಬರುವ ನೀರಿನಲ್ಲಿ ಮಳೆಗಾಲದಲ್ಲಿ ವಿದ್ಯುತ್ ಉತ್ಪಾದಿಸಿ ಜೂನ್ ನಿಂದ ಡಿಸೆಂಬರ್ ತನಕ ಗೃಹಬಳಕೆಗೆ ಉಪಯೋಗಿಸುತ್ತಾರೆ. ಫ್ರಿಡ್ಜ್, ಇಸ್ತ್ರಿ ಪೆಟ್ಟಿಗೆ ಹೊರತುಪಡಿಸಿ ಉಳಿದೆಲ್ಲಾ ಉಪಕರಣಗಳಿಗೆ ಇದೇ ವಿದ್ಯುತ್ತನ್ನು ಬಳಸಲಾಗುತ್ತದೆ.
ಒಂದು ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಈ ಘಟಕವನ್ನು ಕರಾವಳಿ ರಿನಿವೇಬಲ್ ಎನರ್ಜಿಯ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಿಸರ್ಗ ರಿನಿವೇಬಲ್ ಎನರ್ಜಿ ಮೂಲಕ ನಿರ್ಮಿಸಲಾಗಿದೆ. ಸುಮಾರು ಒಂದು ಲಕ್ಷ ರೂ.ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಇದಕ್ಕೆ ಕೇಂದ್ರ ಸರಕಾರದ ವತಿಯಿಂದ 75 ಶೇ.ಸಬ್ಸಿಡಿ ದೊರಕಿದೆ.
ಬೇಸಿಗೆಯಲ್ಲಿ ಈ ಗುಡ್ಡದ ನೀರು ಇವರ ಕೃಷಿಗೆ ಪೂರಕವಾಗಿರುತ್ತದೆ.
ನಿರ್ಮಾಣ ಹೇಗೆ?
ಗುಡ್ಡದಿಂದ ಹರಿದು ಬರುವ ನೀರು ತೋಡಿನ ಮೂಲಕ ಬರುತ್ತಿದೆ. ತೋಡಿಗೆ ಕಟ್ಟವನ್ನು ಕಟ್ಟಿ 4 ಇಂಚಿನ ಪೈಪ್ ಅಳವಡಿಸಿ ಬಳಿಕ 3 ಇಂಚಿನ ಪೈಪ್ ಗೆ ತಗ್ಗಿಸಲಾಗಿದೆ. ಇದನ್ನು ಟರ್ಬೈನ್ ಗೆ ಬರುವಾಗ ಮುಕ್ಕಾಲು ಇಂಚು ಪೈಪ್ ಅಳವಡಿಸಿ ಒತ್ತಡ ಹೆಚ್ಚಿಸಿದಾಗ ವಿದ್ಯುತ್ ಉತ್ಪತ್ತಿಯಾಗುತ್ತದೆ. ಒಂದು ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಇಂಚು ನೀರು ಅವಶ್ಯಕ. ಟರ್ಬೈನ್ ನಿಂದ ಮನೆತನಕ ಕೇಬಲ್ ಅಳವಡಿಸಿ ಕಂಟ್ರೋಲರ್ ಗೆ ವಿದ್ಯುತ್ತನ್ನು ಹರಿಸಲಾಗುತ್ತದೆ. ಕಂಟ್ರೋಲರ್ ನಿಂದ ವಿದ್ಯುತ್ ಮನೆಗೆ ಪೂರೈಕೆಯಾಗುತ್ತದೆ. ಎಸಿ ವಿದ್ಯುತ್ ನೇರ ಪೂರೈಕೆಯಾಗುವುದರಿಂದ ಡಿಸಿ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ವಿದ್ಯುತ್ತನ್ನು ಸ್ಟೋರೇಜ್ ಮಾಡಲು ಸಾಧ್ಯವಿಲ್ಲ.
ಉಳಿತಾಯ
ಮಾಮೂಲು ತಿಂಗಳಿಗೆ ಒಂದು ಸಾವಿರದಷ್ಟು ವಿದ್ಯುತ್ ಬಿಲ್ ಬರುತ್ತಿದ್ದು ಘಟಕ ಕಾರ್ಯನಿರ್ವಹಿಸುವ ಆರು ತಿಂಗಳು ಕೇವಲ 100 ರಿಂದ 200 ರೂ.ಬಿಲ್ ಬರುತ್ತದೆ. ತಿಂಗಳಿಗೆ ಸುಮಾರು 800ರೂ. ಉಳಿತಾಯ ಆಗುತ್ತಿದೆ. ಕಿರು ವಿದ್ಯುತ್ ಘಟಕಕ್ಕೆ ವಾರ್ಷಿಕವಾಗಿ ನಿರ್ವಹಣೆ ಖರ್ಚು ಇರುವುದಿಲ್ಲ. ವರ್ಷಕ್ಕೆ ಒಂದು ಬಾರಿ ಗ್ರೀಸಿಂಗ್ ಮಾಡಿದರೆ ಸಾಕು. ವರ್ಷದ ಆರು ತಿಂಗಳ ಕಾಲ ವಿದ್ಯುತ್ ಬಿಲ್ ಉಳಿತಾಯದ ಜತೆ ಅಷ್ಟು ವಿದ್ಯುತ್ ಕೂಡ ಉಳಿಯುತ್ತದೆ.
ಇಂದಿನ ದಿನಗಳಲ್ಲಿ ವಿದ್ಯುತ್ ನ ಉಳಿತಾಯದ ದೃಷ್ಟಿಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು, ಸೋಲಾರ್ ನ ಉಪಯೋಗವನ್ನು ಹೆಚ್ಚಿಸಬೇಕು. ಹಳ್ಳಿ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವಿಪರೀತ ವಿದ್ಯುತ್ ಸಮಸ್ಯೆ ಇರುವುದರಿಂದ ಅನುಕೂಲ ಇರುವ ಕಡೆ ಎತ್ತರ ಪ್ರದೇಶದಿಂದ ಹರಿಯುವ ನೀರಿನಿಂದ ಇಂತಹ ಕಿರು ವಿದ್ಯುತ್ ಘಟಕ ಸ್ಥಾಪಿಸುವುದು ಉತ್ತಮ. ಇದಕ್ಕೆ ಸರಕಾರದ ಸಹಾಯಧನ ಕೂಡ ಸಿಗುತ್ತದೆ.
:-ಜಯರಾಮ ಪಾಳಂದ್ಯೆ, ಕೃಷಿಕ, ನಿಡ್ಲೆ.