ಗೊಂದಲದ ಗೂಡಾದ ಕೌಕ್ರಾಡಿ ಗ್ರಾಮ ಪಂ ಸಭೆ ➽ ನೋಡಲ್ ಅಧಿಕಾರಿಯ ಸೂಕ್ತ ಮಾರ್ಗದರ್ಶನದೊಂದಿಗೆ ಧೀರ್ಘಕಾಲದ ಸಭೆ ಅಂತ್ಯ

ಶೇರ್ ಮಾಡಿ
  • ಸಭೆಗೆ ಚುನಾಯಿತ ಪಂಚಾಯತ್ ಸದಸ್ಯರ ಅನುಪಸ್ಥಿತಿ ಸಾರ್ವಜನಿಕರಲ್ಲಿ ಆಕ್ರೋಶ.
  • ಬೆಳಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಸಭೆಯು ಪಂಚಾಯತ್ ಅಧ್ಯಕ್ಷರು ತಡವಾಗಿ ಆಗಮಿಸಿದ್ದರಿಂದ 11.00ಗಂಟೆಗೆ ಆರಂಭ.
  • ಗ್ರಾಮ ಸಭೆ ನಡೆಸಬೇಡಿ, ಎಲ್ಲಾ ಅಧಿಕಾರಿಗಳು ಬಂದ ಮೇಲೆಯೇ ಆರಂಭಿಸಿ.
  • ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಹಾಗೂ ಕೆಲವು ವಾರ್ಡ್ ಗಳನ್ನು ಕಡೆಗಣನೆ.
  • ಬೆಳಿಗ್ಗೆ 11: 00 ಗಂಟೆಗೆ ಆರಂಭವಾದ ಸಭೆ ಸಂಜೆ 5:30ಕ್ಕೆ ಕೊನೆ.

ನೇಸರ ಜು.23: ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಹಾಗೂ ಕೆಲವು ವಾರ್ಡ್ ಗಳನ್ನು ಕಡೆಗಣನೆ ಮಾಡಿದ್ದಕ್ಕಾಗಿ ಸಾರ್ವಜನಿಕರು ಗ್ರಾ.ಪಂ.ನ ಅಧ್ಯಕ್ಷರು, ಎಲ್ಲಾ ಸದಸ್ಯರನ್ನು ಹಾಗೂ ಪಿಡಿಒರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಚಿಲಂಪಾಡಿಯಲ್ಲಿ ಜುಲೈ 21 ರಂದು ನಡೆಯಿತು.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ವನಿತಾ ಎಂ. ಅಧ್ಯಕ್ಷತೆಯಲ್ಲಿ ನಡೆಯಿತು. ನೋಡಲ್ ಅಧಿಕಾರಿಯಾಗಿ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಮಧುಸೂದನ್ ಆಗಮಿಸಿದ್ದರು.
ಬೀದಿ ಬದಿ ವ್ಯಾಪಾರಕ್ಕೆ ಅರಣ್ಯ ಪ್ರದೇಶದಲ್ಲಿ ಅವಕಾಶ ನೀಡಬಾರದು. ಈಗಾಗಲೇ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಕೌಕ್ರಾಡಿ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ನೋಡಲ್ ಅಧಿಕಾರಿ ಕೂಡಲೇ ಪಿಡಬ್ಲ್ಯೂಡಿ ಇಲಾಖೆಗೆ ಮಾಹಿತಿ ನೀಡಿ ಅಂಗಡಿಗಳ ತೆರವನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮಾಡಿಕೊಡುವಂತೆ ಮನವಿ ನೀಡಲು ಪಿಡಿಒಗೆ ಸೂಚಿಸಿದರು. ವಾಹನಗಳಲ್ಲಿ ಕಸವನ್ನು ತಂದು ರಸ್ತೆ ಬದಿಯಲ್ಲಿ ಕಸ ಬಿಸಾಕುವವವರಿಗೆ 10 ಸಾವಿರ ರೂ ದಂಡ ವಿಧಿಸಬೇಕು ಇದರಲ್ಲಿ ಕಸ ಬಿಸಾಕಿದವರನ್ನು ಪತ್ತೆ ಹಚ್ಚಿದವರಿಗೆ 5 ಸಾವಿರ ರೂ ಪ್ರೋತ್ಸಾಹ ಧನ ನೀಡುವಂತೆ ಸಭೆಯಲ್ಲಿ ಅಭಿಪ್ರಾಯ ಮೂಡಿಬಂತು. ಅಲ್ಲದೆ ಈ ಸಂಬಂಧ ಪೆರಿಯಶಾಂತಿ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸುವಂತೆ ಒತ್ತಾಯಿಸಲಾಯಿತು.

ರಸ್ತೆಯ ಎರಡು ಬದಿಗಳಲ್ಲಿ ಅರಣ್ಯ ಇರುವುದರಿಂದ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮರಗಳಿಂದ ಅಪಾಯವಾಗುತ್ತಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಸಂಬಂಧ ವಲಯ ಅರಣ್ಯಾದಿಕಾರಿಗಳು ಲೋಕೋಪಯೋಗಿ ಇಲಾಖೆ ಮತ್ತು ರಾ.ಹೆ.ಪ್ರಾಧಿಕಾರ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಮರಗಳು ನೇರವಾಗಿ ರಸ್ತೆಗೆ ಬೀಳದಂತೆ ಎತ್ತರವಾದ ಬ್ಯಾರಿಕೇಡ್‌ಗಳನ್ನು ರಚಿಸಿದ್ದಲ್ಲಿ ಅರಣ್ಯ ನಾಶ ಹಾಗೂ ಪ್ರಯಾಣಿಕರಿಗೆ ಆಗಮಿಸುವ ಅಪಾಯವನ್ನು ತಪ್ಪಿಸಬಹುದು. ಈ ಸಂಬಂಧ ನಿರ್ಣಯ ಕೈಗೊಂಡು ಪಿಡಬ್ಲ್ಯೂಡಿ ಮತ್ತು ರಾ.ಹೆ ಪ್ರಾಧಿಕಾರಕ್ಕೆ ಪತ್ರ ವ್ಯವಹಾರ ನಡೆಸುವಂತೆ ಸೂಚಿಸಿದರು.

ಹೋಟೇಲ್, ಚಿಕನ್ ಸ್ಟಾಲ್ ಸೇರಿದಂತೆ ಎಲ್ಲಾ ಮಳಿಗೆ ಆರಂಭಿಸಲು ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಂಡೇ ಅನುಮತಿ ನೀಡಬೇಕು. ಒಂದು ವೇಳೆ ನಿಯಮ ಮೀರಿದ್ದಲ್ಲಿ ಪರವಾನಗಿ ರದ್ದುಗೊಳಿಸುವಂತೆ ಸೂಚಿಸಲಾಯಿತು. ಹೊಸಮಜಲು ಕಾಲೊನಿ ರಸ್ತೆಯಲ್ಲಿ ಚರಂಡಿ ನೀರು ನೇರವಾಗಿ ರಸ್ತೆಯಲ್ಲೇ ಹರಿದು ಹೋಗುತ್ತಿದೆ, ಶಾಲಾ ಮಕ್ಕಳು, ಸಾರ್ವಾಜನಿಕರಿಗೆ ಈ ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ಇದೆ. ಆದರೆ ಚರಂಡಿ ಕಾಮಗಾರಿ ನಡೆದಿದೆ ಎನ್ನುತ್ತೀರಲ್ಲಾ ? ಕೆಲವು ವಾರ್ಡ್ ಗಳಲ್ಲಿಅಭಿವೃದ್ದಿ ಕಾಮಗಾರಿಗಳನ್ನು ಸರಿಯಾಗಿ ನಡೆಸದೇ ಕೇವಲ ಅಧಿಕ ಬಿಲ್ಲು ನಮೂದಿಸಿದ್ದೀರಿ ಅಲ್ಲವೇ ? ಕಾಮಗಾರಿ ಎಲ್ಲಿ ನಡೆದಿದೆ ತೋರಿಸಿ ಎಂದು ಪಿಡಿಓ ಹಾಗೂ ಸದಸ್ಯರಿಗೆ ಒತ್ತಾಯಿಸಿದರು. ಈ ಸಂಬಂಧ ಜಮಾಬಂದಿ ಸಮಯದಲ್ಲಿ ಕಾಮಗಾರಿ ಪರಿಶೀಲನೆಗೆ ಅವಕಾಶವಿದೆ ಎಂದು ಪಿಡಿಒ ತಿಳಿಸಿದರು. ಪಂ.ನಿಂದ ಸರಬರಾಜಾಗುವ ಕುಡಿಯುವ ನೀರಿನ ಬಿಲು ಪಾವತಿ ವಿಳಂಬವಾದಲ್ಲಿ ಬಳಕೆದಾರಿರಿಗೆ ಮೌಖಿಕವಾಗಿ ಮಾಹಿತಿ ನೀಡಬೇಕು. ಪಾವತಿಸದಿದ್ದಲ್ಲಿ ಏಕಾಏಕಿ ನೀರಿನ ಸಂಪರ್ಕ ಕಡಿತಗೊಳಿಸಬಾರದೆಂದು ಸಾರ್ವಾಜನಿಕರಲ್ಲಿ ಅಭಿಪ್ರಾಯವಿಟ್ಟರು.

ಬೆಳಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಸಭೆಯು ಪಂಚಾಯತ್ ಅಧ್ಯಕ್ಷರು ತಡವಾಗಿ ಆಗಮಿಸಿದ್ದರಿಂದ 11.00ಗಂಟೆಗೆ ಆರಂಭವಾಯಿತು. ಇದನ್ನು ಸಾರ್ವಜನಿಕರು ಖಂಡಿಸಿದರು. ಅಲ್ಲದೆ ಸಭೆಯು ರಾಜೀವ್ ಗಾಂಧಿ ಸೇವಾ ಕೇಂದ್ರದ ಸಭಾ ಭವನದಲ್ಲಿ ನಡೆಯಬೇಕಿತ್ತು, ಆದರೆ ಅಂತಿಮ ಕ್ಷಣದಲ್ಲಿ ಇಚಿಲಂಪಾಡಿ ಸರಕಾರಿ ಶಾಲೆಯಲ್ಲಿ ಆಯೋಜಿಸಿತ್ತು. ಆದರೆ ಈ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸದೆ ಗೊಂದಲದ ಗೂಡಾಗಿತ್ತು. ಗ್ರಾಮಸ್ಥರೆಲ್ಲರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬರುತ್ತಾರೆ ಅನ್ನುವ ನಿರೀಕ್ಷೆಯಲ್ಲಿದ್ದರು, ಆದರೆ ಅವರು ಸಹಿತ 8 ಇಲಾಖೆಯ ಅಧಿಕಾರಿಗಳು ಗೈರಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ಗ್ರಾಮ ಸಭೆ ನಡೆಸಬೇಡಿ, ಎಲ್ಲಾ ಅಧಿಕಾರಿಗಳು ಬಂದ ಮೇಲೆಯೇ ಆರಂಭಿಸಿ ಎಂದು ಸಾರ್ವಾಜನಿಕರು ಒಕ್ಕೊರಲಿನಿಂದ ಆಗ್ರಹಿಸಿದರು. ಆದರೆ ನೋಡಲ್ ಅಧಿಕಾರಿಯವರ ಸಂದರ್ಭೋಚಿತ ಮಾರ್ಗದರ್ಶನದಿಂದ ಸಭೆ ಮುಂದುವರಿಯಿತು. ಬೆಳಿಗ್ಗೆ 11: 00 ಗಂಟೆಗೆ ಆರಂಭವಾದ ಸಭೆ ಸಂಜೆ 5:30ಕ್ಕೆ ಕೊನೆಗೊಂಡಿತು.

Leave a Reply

error: Content is protected !!