ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ

ಶೇರ್ ಮಾಡಿ

ನೇಸರ ಜು.24: ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿಗಳಿಗೆ ಸರಕಾರ ನೀಡಲಿರುವ ಪರಿಹಾರದ ಕುರಿತು ಕಂದಾಯ ಇಲಾಖೆಯ ಜತೆ ಚರ್ಚಿಸಲಾಗಿದೆ. ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ಸಹಕಾರವನ್ನು ನೀಡಲಾಗಿದ್ದು, ಸ್ಥಳೀಯ ಪಂಚಾಯಿತಿಗಳು, ಜನಪ್ರತಿನಿಧಿಗಳ ಮೂಲಕ ತಾತ್ಕಾಲಿಕ ಅಗತ್ಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಶನಿವಾರ ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಾರ್ಮಾಡಿ, ನೆರಿಯ, ಪುದುವೆಟ್ಟು, ಕಳೆಂಜ, ಶಿಬಾಜೆ, ಅರಸಿನಮಕ್ಕಿ, ಶಿಶಿಲ, ರೆಖ್ಯ ಮೊದಲಾದ ಗ್ರಾಮಗಳಲ್ಲಿ ಮಳೆ ಹಾನಿ ವೀಕ್ಷಣೆ ನಡೆಸಿ ಮಾತನಾಡಿದರು.

ಕೊಲ್ಲಿ-ಲಾಯಿಲ ರಸ್ತೆಯ ಅಭಿವೃದ್ಧಿ ಕುರಿತ ಪ್ರಸ್ತಾವನೆ ಟೆಂಡರ್ ಹಂತದಲ್ಲಿದ್ದು 9 ಕೋಟಿ ರೂ. ಅನುದಾನ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಳ್ಳಲಿದೆ. ಕೊಲ್ಲಿ ದೇವಸ್ಥಾನದ ಬಳಿಯು ಕಾಂಕ್ರೀಟೀಕರಣ ನಡೆಯಲಿದೆ. ಬೆದ್ರಬೆಟ್ಟು ತನಕ ಅಗಲೀಕರಣ, ನಾವೂರು ತನಕ ಮರು ಡಾಮಾರೀಕರಣ ಸಹಿತ ರಸ್ತೆ ಅಭಿವೃದ್ಧಿಗೊಳ್ಳಲಿದೆ. ಸುಮಾರು 250 ಕುಟುಂಬಗಳಿಗೆ ಅಗತ್ಯ ಬೇಕಾದ ಕೊಲ್ಲಿ-ಫಣಿಕಲ್ಲು ರಸ್ತೆ ನಿರ್ಮಾಣವು ಮುಂದಿನ ಹಂತದಲ್ಲಿ ನಡೆಯಲಿದೆ ಎಂದು ಹೇಳಿದರು.

ಶಾಲಾ ಕಟ್ಟಡ, ಅಂಗನವಾಡಿ ಅಭಿವೃದ್ದಿ
ಕಿಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಟ್ಟು ಆರು ನೂತನ ಕೊಠಡಿಗಳ ಅಗತ್ಯವಿದ್ದು ಮೂರು ಕೊಠಡಿ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುತ್ತದೆ. ಪೋಷಕರು,ಹಳೆ ವಿದ್ಯಾರ್ಥಿಗಳು ಸೇರಿ ಹೆಚ್ಚುವರಿ ಮೂರು ಕೊಠಡಿಗಳನ್ನು ನಿರ್ಮಿಸಿದರೆ ಪರಿಪೂರ್ಣತೆ ದೊರಕುತ್ತದೆ. ಅಂಗನವಾಡಿಗಳ ಅಭಿವೃದ್ಧಿ ಕೆಲಸಗಳನ್ನು ಉದ್ಯೋಗ ಖಾತರಿ, ಶಾಸಕರ ಹಾಗೂ ಇಲಾಖೆಯ ಅನುದಾನದಲ್ಲಿ ನಡೆಸಲಾಗುವುದು ಎಂದು ಶಾಸಕರು ಹೇಳಿದರು. ಮಿತ್ತ ಬಾಗಿಲು ಶಾಲೆಗೆ ಶೌಚಾಲಯ ನಿರ್ಮಾಣ ಹಾಗೂ ಛಾವಣಿ ದುರಸ್ತಿ ಕೆಲಸವನ್ನು 5 ಲಕ್ಷ ರೂ. ವೆಚ್ಚದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ಪರ್ಯಾಯ ವ್ಯವಸ್ಥೆ
ಮಲವಂತಿಗೆ ಗ್ರಾಮದ ಸುಂದರ ಪೂಜಾರಿ ಎಂಬವರ ಮನೆಯು ಗುಡ್ಡ ಕುಸಿತದ ಪರಿಣಾಮ ಅಪಾಯದ ಸ್ಥಿತಿಯಲ್ಲಿದೆ. ಈಗಾಗಲೇ ಮನೆ ಮಂದಿಯನ್ನು ಸ್ಥಳಾಂತರಿಸಲಾಗಿದ್ದು ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯಿಂದ ಇವರಿಗೆ ಜಾಗ ಗುರುತಿಸಿ ಸಂಪೂರ್ಣ ಮನೆ ಹಾನಿ ಪರಿಹಾರ ಒದಗಿಸಿ ಮನೆ ನಿರ್ಮಿಸಲು ಸೂಚಿಸಲಾಗುವುದು ಎಂದು ಹೇಳಿದರು.

ಕಾಳಜಿ ಕೇಂದ್ರ
ಮಿತ್ತಬಾಗಿಲು, ಕುಕ್ಕಾವು, ಚಾರ್ಮಾಡಿ ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದ್ದು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸದ್ಯ ಮಳೆ ಕಡಿಮೆಯಾಗಿರುವುದರಿಂದ ಯಾರಿಗೂ ಇವುಗಳ ಅಗತ್ಯ ಕಂಡು ಬಂದಿಲ್ಲ. ಆದರೆ ಅಗತ್ಯ ಸಂದರ್ಭ ಕಂಡು ಬಂದರೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸಜ್ಜಾಗಿವೆ ಎಂದರು.

ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್, ಮಲವಂತಿಗೆ ಗ್ರಾಪಂ ಉಪಾಧ್ಯಕ್ಷ ಡಿ.ದಿನೇಶ್ ಗೌಡ, ಮಿತ್ತ ಬಾಗಿಲು ಗ್ರಾಪಂ ಉಪಾಧ್ಯಕ್ಷ ವಿನಯ ಚಂದ್ರ ಸೇನೆರಬೆಟ್ಟು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ಪೂಜಾರಿ, ಮುಖ್ಯೋಪಾಧ್ಯಾಯ ರಮೇಶ್ ಪೈಲಾರು, ಇಂದಿರಾ ಪ್ರಮುಖರಾದ ಪ್ರಮೋದ ದಿಡುಪೆ ತೀಕ್ಷಿತ್ ಕೆ. ಗೌಡ, ಕೇಶವ ಫಡಕೆ,ಕಿರಣ್ ಫಡಕೆ, ಗ್ರಾಪಂ ಸದಸ್ಯರು ಹಾಗೂ ಸ್ಥಳೀಯರು ಇದ್ದರು.

Leave a Reply

error: Content is protected !!