ಉಜಿರೆ ಎಸ್ ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರಮಟ್ಟದ ಕೆಮ್ ಶೋಧನಾ-2022 ಕಾರ್ಯಕ್ರಮ

ಶೇರ್ ಮಾಡಿ

ನೇಸರ ಜು.27: ಯುವ ವಿಜ್ಞಾನಿಗಳ ವಿನೂತನ ಆವಿಷ್ಕಾರದ ಅನ್ವೇಷಣೆಗಳು ಪರಿಸರಕ್ಕೆ ಪೂರಕವಾಗಿರಬೇಕು. ಇಂತಹ ಸಂಶೋಧನೆ ಪ್ರತಿಯೊಬ್ಬ ಯುವ ವಿಜ್ಞಾನಿಯ ಗುರಿಯಾಗಿರಬೇಕು. ಹೊಸ ಆವಿಷ್ಕಾರ ಮನೋಭಾವ ಹೊತ್ತವರ ಅನ್ವೇಷಣೆ ಸಾಮಾಜಿಕ ಮನ್ನಣೆ ಪಡೆಯುವಂತಿದ್ದು ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶ ಹೊಂದಿರಬೇಕು ಎಂದು ಎನ್ ಐ ಟಿ ಕೆ ಸುರತ್ಕಲ್ ನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ನಿಕಟ ಪೂರ್ವ ಮುಖ್ಯಸ್ಥ ಡಾ.ಅರುಣ್ ಎಂ.ಇಸಳೂರ್ ಹೇಳಿದರು.

ಅವರು ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗ ಆಯೋಜಿಸಿದ್ದ ಕೆಮ್ ಶೋಧನಾ-2022 ರಾಷ್ಟ್ರಮಟ್ಟದ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿನೂತನ ಆವಿಷ್ಕಾರದ ಜತೆ ಕ್ರಿಯಾಶೀಲತೆ, ಉದ್ಯಮಶೀಲತೆ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸೂಕ್ಷ್ಮವಾದ ಗಮನಿಸುವಿಕೆಯಿಂದ ಗುಣಗಳು ವೃದ್ಧಿಯಾಗುತ್ತವೆ ಎಂದರು.

ಎಸ್ ಡಿ ಎಂ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಉದಯ ಚಂದ್ರ ಪಿ‌ ಎನ್. ಮಾತನಾಡಿ ಕ್ರಿಯಾಶೀಲ ಆವಿಷ್ಕಾರದ ನಂತರ ಅದನ್ನು ಅಭಿವೃದ್ಧಿಪಡಿಸುವ ಹಂತ ನಿರ್ಣಾಯಕ. ಈ ಹಂತದಲ್ಲಿ ನಿರ್ದಿಷ್ಟ ಚೌಕಟ್ಟಿನ ಹೊರಗೆ ನಿಂತು ಯೋಚಿಸಬೇಕು. ಬೌದ್ಧಿಕ ತಿಳವಳಿಕೆ ಮೌಲ್ಯಯುತವಾಗಿದ್ದಾಗ ಸಂಶೋಧನೆ ಸಮಾಜದ ಪರವಾಗಿರುತ್ತದೆ ಎಂದರು.

ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ, ಸಂಯೋಜಕರಾದ ಡಾ.ನೆಫೀಸತ್, ಡಾ.ನವೀನ್ ಕುಮಾರ್, ವಿದ್ಯಾರ್ಥಿ ಸಂಯೋಜಕರಾದ ಫ್ಲೋರಿಯಾ ಫೆರ್ನಾಂಡಿಸ್ ಹಾಗೂ ಆದಿತ್ಯ ಬಲ್ಲಾಳ್ ಉಪಸ್ಥಿತರಿದ್ದರು. ಧನ್ಯ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!