ಬೆಕ್ಕಿಗೆ ಘಂಟೆ ಕಟ್ಟುವವರು ಯಾರು? ಬಹುಶಹ ಇಂದಿನ ಮಕ್ಕಳಿಗೆ ಇದು ಏನು ಎಂದು ಅರ್ಥವಾಗಲಾರದು. ಬೆಕ್ಕಿಗೆ ಘಂಟೆ ಕಟ್ಟುವುದಾದರೂ ಯಾಕೆ ಎನ್ನುವ ಪ್ರಶ್ನೆ ಹಲವರಲ್ಲಿ ಉದ್ಭವವಾಗಬಹುದು.
ನಮ್ಮ ಮನೆಗೆ ಮೂರು ಹೆಣ್ಣು ಬೆಕ್ಕುಗಳು ಅತಿಥಿಗಳಾಗಿ ಬಂದಿದ್ದಾವೆ. ಇತ್ತೀಚೆಗೆ ಈ ಮೂರು ಬೆಕ್ಕುಗಳು ತಲಾ ನಾಲ್ಕು ಮರಿಗಳನ್ನು ಹಾಕಿದವು. ಈಗ ನಾನು ಚಿಕ್ಕಂದಿನಲ್ಲಿ ಕಲಿತ ಮಗ್ಗಿಯ ಕಸರತ್ತು ಪ್ರಯೋಜನಕ್ಕೆ ಬಂತು ನೋಡಿ. ನಾಕೊಂದ್ಲಿ ನಾಕು… ಹೀಗೆ ನಾಕು ಮೂರ್ಲಿ ಹನ್ನೆರಡು. ಮುದ್ದಾದ ಮರಿಗಳನ್ನು ನೋಡಿ ನನ್ನ ಸಣ್ಣ ಮಗಳಿಗೆ ಸಂಭ್ರಮವೋ ಸಂಭ್ರಮ. ಮೂರು ತಾಯಿ ಬೆಕ್ಕುಗಳು ಹನ್ನೆರಡು ಮರಿಗಳು. ಒಮ್ಮೊಮ್ಮೆ ಈ ಮರಿಗಳಿಗೆ ತಮ್ಮ ತಾಯಿ ಯಾರು ಎಂಬುದು ಕನ್ಫ್ಯೂಷನ್. ಆದರೆ ತಾಯಿ ಬೆಕ್ಕುಗಳಿಗೆ ಮಾತ್ರ ಅವರವರ ಮಕ್ಕಳು ಯಾರೆಂದು ಕರೆಕ್ಟಾಗಿ ಗೊತ್ತಿದೆ…. ತಾಯಿಯೆಂದರೆ ಹಾಗೆಯೇ ಅಲ್ಲವೇ… ಒಂದು ಬೆಕ್ಕು ಟೆರೇಸಿನ ಮೇಲೆ ಇರುವ ಸಣ್ಣ ಕೊಠಡಿಯಲ್ಲಿ ಮನೆಮಾಡಿತ್ತು. ಇನ್ನೊಂದು ಬೆಕ್ಕು ಕಾರು ಶೆಡ್ಡಿನ ಮೂಲೆಯಲ್ಲಿ…ಮತ್ತೊಂದು ಬೆಕ್ಕು ನನ್ನ ಹಳೆಯ ಉಪಯೋಗಿಸದೆ ಇರುವ ಸ್ಕೂಟರ್ ಬಾಕ್ಸಿನಲ್ಲಿ …. ಹೀಗೆ ಮೂರು ಜನರು ಮನೆಯ ವ್ಯವಸ್ಥೆ ಅವರವರೇ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಸಂಜೆ ಮತ್ತು ರಾತ್ರಿ ಮಾತ್ರ ಇವರಿಗೆ ಊಟದ ವ್ಯವಸ್ಥೆ… ಮಧ್ಯಾಹ್ನದ ಭೋಜನ ನಿಷೇಧ… ಯಾಕೆಂದರೆ ಮಧ್ಯಾಹ್ನ ನಾವು ಯಾರು ಮನೆಯಲ್ಲಿ ಇರುವುದಿಲ್ಲ. ಊಟದ ಸಮಯದಲ್ಲಿ ಶಿಸ್ತು ಪಾಲನೆ ಗೆ ಇವರಿಗೆ ಒಂದು ಘಂಟೆ ಯ ವ್ಯವಸ್ಥೆಯಿದೆ. ನನ್ನ ಧರ್ಮಪತ್ನಿ ಇವರನ್ನು ಊಟಕ್ಕೆ ಕರೆಯಲು ಮಾಡಿಕೊಂಡ ವ್ಯವಸ್ಥೆ….. ಹಿಂದಿನ ಬಾಗಿಲಿನ ಚಿಲಕವನ್ನು ಜೋರಾಗಿ ಶಬ್ದ ಮಾಡುವುದು. ಇದು ಬೆಕ್ಕು ಗಳಿಗೆಲ್ಲ ಊಟದ ಕರೆಯ ಘಂಟೆ. ಮೂರು ಕುಟುಂಬದ ಸದಸ್ಯರು ಒಟ್ಟಾಗಿ ಊಟಕ್ಕೆ ಬರುವ ಗಮ್ಮತ್ತು ನೋಡಬೇಕು….. ತಾಯಂದಿರ ಲ್ಲಿಯೂ ಒಂದು ಶಿಸ್ತು ಇದೆ. ಮೊದಲು ಮಕ್ಕಳು ಊಟ ಮಾಡಬೇಕು ನಂತರ ತಾಯಂದಿರು. ಮರಿಗಳಲ್ಲಿ ಒಬ್ಬ ಬಡಕಲು ಮರಿ ಇದ್ದಾನೆ ಅವನಿಗೆ ಯಾವ ಘಂಟೆಯೂ ಕೇಳುವುದಿಲ್ಲ ಅವನಿಗೆ ಊಟವೂ ಬೇಡ ಅವನನ್ನು ನನ್ನ ಮಗಳು ಎತ್ತಿಕೊಂಡು ಬಂದು ಒತ್ತಾಯಪೂರ್ವಕವಾಗಿ ತಿನ್ನಿಸುವುದು. ಒಮ್ಮೆ ನನ್ನ ಪುಟ್ಟ ಮಗಳು ನನ್ನ ಬಳಿ ಬಂದು ” ಅಪ್ಪ ನಾಳೆ ಶಾರದಾ ಫ್ಯಾನ್ಸಿ ಯಿಂದ 12 ಘಂಟೆ ಗಳನ್ನು ತರಬೇಕು” ಎಂದಳು. ನಾನು ” ಯಾಕೆ ಪುಟ್ಟಿ “ಎಂದೆ.ಅದಕ್ಕೆ ಅವಳು… “ಪಪ್ಪಾ ಎಲ್ಲಾ ಮರಿಗಳ ಕುತ್ತಿಗೆಗೆ ಒಂದೊಂದು ಘಂಟೆ ಕಟ್ಟಬೇಕು ” ಎಂದಾಗ ನನಗೆ ನಗು ತಡೆಯಲಾಗಲಿಲ್ಲ. ಅಲ್ಲಮ್ಮ ಅಷ್ಟು ಚಿಕ್ಕ ಮಕ್ಕಳಿಗೆ ಘಂಟೆ ಕಟ್ಟುವುದಾದರೂ ಹೇಗೆ ಘಂಟೆ ಕಟ್ಟುವುದು ಯಾರು ಎಂದು ನಾನು ಕೇಳಿದೆ. ಅದಕ್ಕೆ ಅವಳು ನಗುತ್ತಾ “ಬೆಕ್ಕಿಗೆ ಘಂಟೆ ನಾನೇ ಕಟ್ಟುತ್ತೇನೆ ” ಎಂದಳು. ಆವಾಗ ನೆನಪಾಯಿತು ನೋಡಿ ಹಳೆಯ ಗಾದೆ ಬೆಕ್ಕಿಗೆ ಘಂಟೆ ಕಟ್ಟುವವರು ಯಾರು. ನನ್ನ ಅಧ್ಯಾಪಕರು ಹೇಳಿದ ಕಥೆ ನೆನಪಾಗುತ್ತದೆ. ಒಂದೂರಿನಲ್ಲಿ ನೂರಾರು ಇಲಿಗಳು ವಾಸವಾಗಿದ್ದ ವಂತೆ. ಆ ಇಲಿಗಳಿಗೆ ಒಬ್ಬ ಪೆರ್ಗು ಡೆ ರಾಜನಂತೆ(ಹೆಗ್ಗಣ ). ಇಲಿಗಳು ದಿನಾ ಪಕ್ಕದಲ್ಲಿರುವ ಒಂದು ದೊಡ್ಡ ಮನೆಗೆ ನುಗ್ಗಿ ಭೋಜನ ಮಾಡುತ್ತಿದ್ದವಂತೆ. ಅಲ್ಲಿನ ಉಗ್ರಾಣದಲ್ಲಿ ಇರುವ ಆಹಾರ ಧಾನ್ಯ ಪದಾರ್ಥಗಳನ್ನು ಇಷ್ಟಬಂದಂತೆ ತಿಂದು ಹಾಳು ಮಾಡಿ ಹಾಯಾಗಿದ್ದ ವಂತೆ ಒಂದು ದಿವಸ ಆ ಮನೆಯ ಯಜಮಾನ ಇಲಿಗಳ ಉಪದ್ರವ ತಡೆಯಲು ಒಂದು ದೊಡ್ಡ ಬೆಕ್ಕುತಂದ.. ಈ ಬೆಕ್ಕು ಒಂದೊಂದೇ ಇಲಿಗಳನ್ನು ಹಿಡಿದು ತಿನ್ನಲು ಆರಂಭಿಸಿತು ಇದರಿಂದ ಭಯಗೊಂಡ ಇಲಿಗಳೆಲ್ಲ ಒಂದು ಸಭೆ ಸೇರಿದವು. ಪೆರ್ಗುಡೆ ರಾಜನು ಇಲಿಗಳ ದೂರನ್ನು ಆಲಿಸಿದನು ಒಂದು ಸೊಂಡಿಲಿಯು ಎದ್ದು ನಿಂತು ಕೈ ಕಟ್ಟಿ ಸೊಂಟ ಬಗ್ಗಿಸಿ ವಿನಮ್ರನಾಗಿ ದೈನ್ಯತೆಯಿಂದ “ಮಹಾರಾಜರಿಗೆ ಜಯವಾಗಲಿ ನಮಗೆ ಈಗೀಗ ಆಹಾರ ಸೇವನೆಗೆ ಬಹುದೊಡ್ಡ ಸಮಸ್ಯೆಯಾಗಿದೆ ಸ್ವಾಮಿ ನಮ್ಮ ಆಹಾರದ ಮನೆಯ ಯಜಮಾನ ಒಂದು ದೊಡ್ಡ ಬೆಕ್ಕನ್ನು ತಂದಿದ್ದಾರೆ ಅದು ನಮ್ಮ ಕುಟುಂಬದವರನ್ನು ಒಬ್ಬೊಬ್ಬರನ್ನಾಗಿ ತಿಂದು ಮುಗಿಸುತ್ತಿದೆ ” ಎಂದಿತು. ಎಲ್ಲರೂ ಹೌದು ಹೌದು ಹೌದು ಎಂದು ಧ್ವನಿಗೂಡಿಸಿದರು. ಪೆರ್ಗುಡೆ ಮಹಾರಾಜನಿಗೆ ಏನು ಮಾಡುವುದೆಂದು ದಿಕ್ಕು ತೋಚದಂತಾಯಿತು.ಇದಕ್ಕೆ ಏನು ಪರಿಹಾರ ಒಬ್ಬೊಬ್ಬರೇ ಸಲಹೆ ಕೊಡಿ ಎಂದ ಮಹಾರಾಜ. ಅಲ್ಲಿಯೇ ಮೂಲೆಯಲ್ಲಿ ಕುಳಿತಿದ್ದ ಕಿಚ್ಚೆಲಿ ಎದ್ದು ನಿಂತು ಎರಡು ಕೈಜೋಡಿಸಿ ಕಣ್ಣುಮಿಟುಕಿಸಿ ಬಾಲ ಮೇಲಕ್ಕೆತ್ತಿ ಮೀಸೆ ನೇವರಿಸಿ ಮುಂದಿನ ಎರಡು ಕೋರೆ ಹಲ್ಲನ್ನು ಪ್ರದರ್ಶಿಸಿ ನಗು ಬೀರುತ್ತಾ “ಪೆರ್ಗುಡೆ ಮಹಾರಾಜರು ದೀರ್ಘಾಯು ವಾಗಲಿ. ಮಹಾರಾಜರೇ ನನ್ನದೊಂದು ಪ್ರಾರ್ಥನೆ ನಾನೊಬ್ಬ ಬಡ ಕಿಚ್ಛೆಲಿ ನನ್ನಿಂದ ಏನೂ ಮಾಡಲಾಗದು ಆದರೆ ನೀವು ಪೆರ್ಗುಡೆ ಸಂತಾನದವರು ನಿಮ್ಮಲ್ಲಿ ಬಹಳ ದೊಡ್ಡ ಗಾತ್ರದ ಬಲಶಾಲಿ ಗಳಿದ್ದಾರೆ ದೊಡ್ಡದೊಡ್ಡ ಬಾಳೆಗಿಡಗಳ ಬುಡವನ್ನು ಜೀಸಿಬಿ ಯಲ್ಲಿ ಅಗೆ ದಂತೆ ಅಗೆದು ದೊಡ್ಡ ದೊಡ್ಡ ಮಾಟೆ (ಬಿಲ ) ಮಾಡುವ ಬಲವಂತರು.ಮರಗೆಣಸಿನ ಬುಡದಿಂದಲೇ ಮಾಟೆ ಮಾಡಿ ಇಡೀ ಗೆಣಸನ್ನು ಅಲ್ಲಿಯೇ ತಿಂದು ಗಿಡದ ಬುಡವನ್ನು ನುಂಗಿ ನೀರು ಕುಡಿದು ತೇಗುವ ಶೂರರು….. ಬಚ್ಚಲು ಮನೆಯಲ್ಲಿ ಬಟ್ಟಿ ಬಟ್ಟಿ ಮಣ್ಣು ಅಗೆದು ಹಾಕಿ ಬಿಸಿ ನೀರಿನ ಮಂಡೆಯನ್ನು ತೂತು ಮಾಡುವ ಸಾಹಸಭೀಮರು ಇರುವಾಗ ಅಂತಹ ಹತ್ತು ಜನರನ್ನು ಕಳುಹಿಸಿ ಆ ಬೆಕ್ಕಿನ ಸೊಂಟ ಮುರಿದುಅದರ ಸೊಕ್ಕನ್ನು ಅಡಗಿಸಬಾರದೆ ಪ್ರಭು… ಎಂದಾಗ…. ಪಕ್ಕದಲ್ಲಿದ್ದ ಪೆರ್ಗುಡೆ ಸಂತಾನದ ಸದಸ್ಯ ನಡುಗುತ್ತ ಕಷ್ಟದಿಂದ ಎದ್ದುನಿಂತು “ಮಹಾಪ್ರಭುಗಳಿಗೆ ಶುಭವಾಗಲಿ ಮಾನ್ಯ ಕಿಚ್ಛೆಲಿ ಹೇಳಿದಂತೆ ಪೆರ್ಗುಡೆ ಸಂತಾನದವರಾದ ನಾವೆಲ್ಲರೂ ವೀರರು ಧೀರರು ಶೂರರು ಸರಿ ಆದರೆ ಈ ಕಿಚ್ಛೆಲಿಯ ಸಂತಾನದವರೇನು ಕಡಿಮೆಯವರಲ್ಲ. ಇವರ ಪ್ರತಾಪವನ್ನು ನೋಡಿದರೆ… ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಮೇಲ್ಮಟ್ಟಕ್ಕೆ ತರುವ ಶಕ್ತಿ ಇವರಲ್ಲಿದೆ.ಹೇಗೆಂದರೆ ನೋಡಿ ಶೆಡ್ಡಿನಲ್ಲಿ ನಿಲ್ಲಿಸಿದ ಕಾರಿನ ಒಳಗೆ ನಮಗೆ ನುಗ್ಗಲಾಗುವುದಿಲ್ಲ. ಆದರೆ ಈ ಕಿಚ್ಛೆಲಿಯ ಸಂತಾನದವರು ಹೇಗಾದರೂ ಮಾಡಿ ಕಾರಿನೊಳಗೆ ನುಗ್ಗಿ ಸಿಕ್ಕಸಿಕ್ಕ ವಯರನ್ನು ತುಂಡು ಮಾಡಿ ತಿಂದು ಸರ್ವನಾಶ ಮಾಡಿ ಗ್ಯಾರೇಜ್ ನವರಿಗೆ ಉದ್ಯೋಗ ಒದಗಿಸುವ ಜೊತೆಗೆ ಬಿಡಿಭಾಗ ಮಾರಾಟ ವಿಭಾಗದವರ ವ್ಯಾಪಾರವನ್ನು ಪರೋಕ್ಷವಾಗಿ ಹೆಚ್ಚಿಸಿ ಕಾರಿನ ಮಾಲಕನಿಗೆ ಆರ್ಥಿಕ ನಷ್ಟ ಉಂಟಾದರೂ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸುವ ಕೆಲಸ ಮಾಡುವ ಸಾಧನೆಯೇನು ಕಡಿಮೆಯೇ…. ಹಾಗಾಗಿ ಕಿಚ್ಛೆಲಿಯ ಪರಾಕ್ರಮವೇನು ಕಡಿಮೆಯಲ್ಲ” ಎಂದು ಹೇಳಿತು
ಅಲ್ಲಿಯೇ ಕುಳಿತಿದ್ದ ಸೊಂಡಿಲಿ ಕಿಸಕ್ಕನೆ ನೆಗಾಡಿತು😂 “ಮಹಾರಾಜರೆ ಇಲ್ಲಿ ಬಲಪ್ರಯೋಗ ಮಾಡಿ ಪ್ರಯೋಜನವಾಗಲಾರದು ಬದಲಾಗಿ ಉಪಾಯದಿಂದ ಕೆಲಸ ಮಾಡಬೇಕು.. ಏನೆಂದರೆ ಪಕ್ಕದಲ್ಲಿರುವ ಶೆಟ್ರ ಅಂಗಡಿಯಿಂದ ಒಂದು ಪ್ಯಾಕೆಟ್ ಇಲಿಪಾಷಾಣ ತಂದು ಬೆಕ್ಕಿಗೆ ಹಾಕಿದರೆ ಹೇಗೆ…..ತಿಂದು ಸಾಯಲಿ ಎಂದಾಗ… ಎಲ್ಲರೂ ಬೇಡ ಬೇಡ ಬೇಡ.. ಇಲಿಪಾಷಾಣವನ್ನು ಎಲ್ಲಿಯಾದರೂ ತಪ್ಪಿ ನಮ್ಮ ಕುಟುಂಬದವರೇ ತಿಂದು ಬಿಟ್ಟರೆ??… ಅದು ಬೇಡ ಎಂದಾಗ ಸೊಂಡಿಲಿ ತೆಪ್ಪಗೆ ಕೂತಿತು. ಹೀಗೆಲ್ಲಾ ಚರ್ಚೆ ನಡೆದು… ಕೊನೆಗೆ ಪ್ರಾಯದ ಹಿರಿಯ ಪೆರ್ಗುಡೆ ಯೊಂದು ಎದ್ದು ನಿಂತು “ಮಹಾರಾಜರೇ ನನ್ನದೊಂದು ಸಲಹೆ ಏನೆಂದರೆ ಪಕ್ಕದಲ್ಲಿರುವ ಫ್ಯಾನ್ಸಿ ಅಂಗಡಿಯಿಂದ ನಾವು ಒಂದು ಘಂಟೆ ಕದ್ದುತಂದು.. ಆ ಘಂಟೆ ಯನ್ನು ಆ ಬೆಕ್ಕಿನ ಕುತ್ತಿಗೆಗೆ ಕಟ್ಟೋಣ.. ಆವಾಗ ಬೆಕ್ಕು ಎಷ್ಟೇ ಅಡಗಿ ಕೂತರು ಘಂಟೆ ಶಬ್ದ ಮಾಡುವುದರಿಂದ ನಮಗೆ ಬೆಕ್ಕು ಬರುವುದು ತಿಳಿಯುತ್ತದೆ ನಾವು ಓಡಿ ತಪ್ಪಿಸಿಕೊಳ್ಳಬಹುದು ಎಂದಿತು.ಎಲ್ಲರೂ ಹೌದು ಹೌದು ಹೌದು ಎಂದರು. ಪೆರ್ಗುಡೆ ಮಹಾರಾಜನಿಗೆ ಬಹಳ ಆನಂದವಾಯಿತು. ಇದು ಸರಿಯಾದ ಸಲಹೆ ಅತ್ಯುತ್ತಮವಾದ ಸಲಹೆ ನನಗೆ ಬಹಳ ಸಂತೋಷವಾಯಿತು… ತಗೋ ಉಡುಗೊರೆ…. ಎಂದುತಾನು ಹಿಂದಿನ ರಾತ್ರಿ ಅಗೆದು ತಂದ ಒಂದು ಕೆಸುವಿನ ಗೆಡ್ಡೆಯನ್ನು ಉಡುಗೊರೆಯಾಗಿ ನೀಡಿತು. ಸಭೆಯಲ್ಲಿ ಎಲ್ಲರೂ ಶಾಂತವಾದರೂ ಪೆರ್ಗುಡೆ ಮಹಾರಾಜ ಮಾತನಾಡಲಾರಂಭಿಸಿತು ಇದು ಬಹಳ ಉತ್ತಮವಾದ ಸಲಹೆ… ಈಗ ಹೇಳಿ ನಿಮ್ಮಲ್ಲಿ ಯಾರು ಬೆಕ್ಕಿನ ಕುತ್ತಿಗೆಗೆ ಘಂಟೆ ಕಟ್ಟಲು ಸಿದ್ಧರಿದ್ದೀರಿ… ಎಂದಾಗ ಸಭೆಯಲ್ಲಿ ಗುಸುಗುಸು ಆರಂಭವಾಯಿತು. ಕಿಚ್ಛೆಲಿಯ ಸಂತಾನಾದವರೆಲ್ಲ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಲಾರಂಭಿಸಿದರು. ಸೊಂಡಿಲಿಯ ಸಂತಾನಾದವರೂ ಮೆಲ್ಲಮೆಲ್ಲನೆ ಕದ ಲಲಾರಂಭಿಸಿದರು. ಕೊನೆಗೆ ಉಳಿದ ಪೆರ್ಗುಡೆ ಸಂತಾನದವರು ಮಾಯವಾದರು…. ಅಂತಿಮವಾಗಿ ಮಹಾರಾಜನ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು…”ಬೆಕ್ಕಿಗೆ ಘಂಟೆ ಕಟ್ಟುವವರು ಯಾರು”?
Superb 👌👌👌
Thank U
ಈ ಕಥೆ ತುಂಬಾ ಚನ್ನಾಗಿದೆ.ಇಂಥ ಕಥೆಗಳನ್ನು ಓದಲು ನನಿಗೆ ತುಂಬಾ ಆಸಕ್ತಿ ಯಾಕೆಂದರೆ ಅದು ಹಾಸ್ಯಮಾಯಾವಾಗಿರುತೆ.ಮತ್ತೆ ನಮ್ಮ ಜೀವನದ ನೋವುಗಳನ್ನು ಆ ಕ್ಷಣದಲ್ಲಿ ಮರೆತು ಹೋಗುತ್ತವೆ….ಇಂಥ ಕಥೆಗಳ ಪುಸ್ತಕ ಇದ್ದಾರೆ ಕೋಡಿ ಸರ್ .
Thank U