36 ಕಿಮೀ.ದುರ್ಗಮ ಹಾದಿ ಕ್ರಮಿಸಿ ಜೀವ ಕಾಪಾಡಿದ ‘ಯೋಗ ಕ್ಷೇಮ’ ತಂಡ

ಶೇರ್ ಮಾಡಿ

ನೇಸರ ಜು.30: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಯೋಗಕ್ಷೇಮ ತಂಡ ಸುಮಾರು 36 ಕಿಮೀ. ದುರ್ಗಮ ಪ್ರದೇಶವನ್ನು ಕ್ರಮಿಸಿ ರೋಗಿಯೊಬ್ಬರ ಜೀವವನ್ನು ಉಳಿಸಿದೆ.

ಈ ಆಸ್ಪತ್ರೆಯು ಕಳೆದ ಏಳು ವರ್ಷಗಳಿಂದ ‘ಶ್ರೀ ಕೃಷ್ಣ ಯೋಗಕ್ಷೇಮ-ನಿಮ್ಮ ಮನೆ ಬಾಗಿಲಿಗೆ’ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವುದರ ಜತೆ ಅಗತ್ಯ ಸಂದರ್ಭ ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ಮಾಡುತ್ತದೆ.
ಕಳೆದ ಕೆಲವು ದಿನಗಳ ಹಿಂದೆ ಸರಿಯಾದ ವೈದ್ಯಕೀಯ, ವಾಹನ ವ್ಯವಸ್ಥೆ ಇಲ್ಲದ ತಾಲೂಕಿನ ಶಿಶಿಲದ ದುರ್ಗಮ ಪ್ರದೇಶ ಒಂದರಿಂದ ಈ ತಂಡಕ್ಕೆ ರಾತ್ರಿ ಹೊತ್ತು ಕರೆಯೊಂದು ಬಂದಿತ್ತು. ಅದರಂತೆ 36 ಕಿಮೀ. ದೂರವನ್ನು ದುರ್ಗಮ ರಸ್ತೆಯಲ್ಲಿ ಆಂಬುಲೆನ್ಸ್ ಮೂಲಕ ತಲುಪಿದ ತಂಡ, ಮುಂದಿನ ಒಂದು ಕಿಮೀ ದೂರವನ್ನು ರಾತ್ರಿಯ ಕತ್ತಲಲ್ಲಿ ಕಾಲ್ನಡಿಗೆ ಮೂಲಕ ಕ್ರಮಿಸಿ ರೋಗಿಯ ಆರೈಕೆ ಮಾಡಿದೆ.

ರೋಗಿಯು ಹೈಪೋಗ್ಲೆಸಿಮಿಯ ಮತ್ತು ಹೈಪೋಕ್ಸೆಮಿಯದಿಂದ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಯೋಗ ಕ್ಷೇಮಕ್ಕೆ ಕರೆ ಮಾಡಲಾಗಿತ್ತು. ಅದರಂತೆ ಸ್ಥಳಕ್ಕೆ ತೆರಳಿದ ತಂಡ ಅಗತ್ಯ ಚಿಕಿತ್ಸೆಗಳನ್ನು ನೀಡಿ ರೋಗಿಯ ಜೀವವನ್ನು ಕಾಪಾಡಿದೆ.ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮುರಳಿ ಕೃಷ್ಣ ಇರ್ವತ್ರಾಯ ಹಾಗೂ ಡಾ. ವಂದನಾ ಇರ್ವತ್ರಾಯ ಅವರ ನಿರ್ದೇಶನದಂತೆ ಸ್ಥಾನೀಯ ವೈದ್ಯಾಧಿಕಾರಿ ಡಾ.ಅಲ್ಬಿನ್ ಜೋಸೆಫ್ ಯೋಗಕ್ಷೇಮ ಸಮನ್ವಯಾಧಿಕಾರಿ ಹೈದರ್ ಆಲಿ, ದಾದಿ ರಮ್ಯಾ ಹಾಗೂ ಇತರರ ತಂಡ ಈ ಸೇವೆಯಲ್ಲಿ ಭಾಗಿಯಾಗಿತ್ತು.

ಯೋಗಕ್ಷೇಮ

ಅದೆಷ್ಟೋ ಮಂದಿಗೆ, ದುರ್ಗಮ ಗುಡ್ಡಗಾಡು ಪ್ರದೇಶದ ಜನರಿಗೆ ಅನಾರೋಗ್ಯ ಕಂಡು ಬಂದ ಕೂಡಲೇ ಆಸ್ಪತ್ರೆ ತಲುಪಲು ಸಾಧ್ಯವಾಗುವುದಿಲ್ಲ ಕಾರಣ ಸರಿಯಾದ ರಸ್ತೆ,ವಾಹನ ವ್ಯವಸ್ಥೆ ಇಲ್ಲದಿರುವುದು. ಇದರಿಂದ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭಿಸದೆ ಪ್ರಾಣಾಪಾಯ ಸ್ಥಿತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ತುರ್ತು ಸ್ಪಂದನೆ ಮೂಲಕ ಮನೆ ಬಾಗಿಲಿಗೆ ವೈದ್ಯರ ತಂಡದ ಸೇವೆ ನೀಡುವ ‘ಯೋಗಕ್ಷೇಮ’ ಯೋಜನೆಯನ್ನು ಶ್ರೀ ಕೃಷ್ಣ ಆಸ್ಪತ್ರೆಯಿಂದ ಆರಂಭಿಸಲಾಗಿದ್ದು ಇದು ಅನೇಕ ಜನರ ಪ್ರಾಣವನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.

Leave a Reply

error: Content is protected !!