ನೇಸರ ಆ.01: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆ-ಚಾರ್ಮಾಡಿ ತನಕ ನಡೆಯಲಿದ್ದು, 718 ಕೋಟಿ ರೂ. ಅನುದಾನ ಮಂಜೂರು ಗೊಂಡಿದೆ. ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಹಲವಾರು ಸಮೀಕ್ಷೆಗಳು ನಡೆದಿದ್ದು ಅಂತಿಮ ಹಂತದ ಖಾಸಗಿ ಆಸ್ತಿ ಜಾಗ ಗುರುತು ಹಾಗೂ ಸೆಂಟ್ರಲ್ ಲೈನ್ ಮಾರ್ಕಿಂಗ್ ಕೆಲಸ ಪ್ರಾರಂಭವಾಗಿದೆ. ಪುಂಜಾಲಕಟ್ಟೆಯಿಂದ ಗುರುವಾಯನಕರೆ ತನಕ ಸರ್ವೆಯಲ್ಲಿ ಗುರುತಿಸಿದ ಮಾರ್ಕಿನಿಂದ ಗ್ರಾಮೀಣ ಭಾಗಗಳಲ್ಲಿ, ಈಗ ಗುರುತಿಸಲಾಗುತ್ತಿರುವ ಸ್ಥಳಗಳ ಇಕ್ಕೆಲಗಳು ಸೇರಿ ಒಟ್ಟು 20ಮೀ. ನಗರ ಭಾಗಗಳ ಇಕ್ಕೆಲಗಳಲ್ಲಿ ಒಟ್ಟು 30 ಮೀ.ನಷ್ಟು ರಸ್ತೆ ವ್ಯಾಪ್ತಿ ಇರಲಿದೆ.
ಸೋಮವಾರ ಗುರುವಾಯನಕೆರೆ, ಬೆಳ್ತಂಗಡಿ ಸುತ್ತ ಮುತ್ತಲಿನ ಪ್ರದೇಶಗಳ ಮನೆ, ಕಟ್ಟಡ, ಕೃಷಿ ಪ್ರದೇಶಗಳ ಗುರುತು ಕಾರ್ಯ ನಡೆಯಿತು.
ಇದು ಬಹುತೇಕ ಅಂತಿಮ ಹಂತದ ಮಾರ್ಕಿಂಗ್ ಆಗಿದ್ದು, ಖಾಸಗಿ ಸ್ಥಳಗಳ ಮಾಲೀಕರಿಗೆ ನೋಟಿಸ್ ನೀಡಿ ಅದರ ಮೌಲ್ಯ ಗೊತ್ತುಪಡಿಸುವ ಕಾರ್ಯ ನಡೆಯಲಿದೆ.
ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ ಬಾರಿ ಮಾಡಿದ ಸಮೀಕ್ಷೆಗಳು ನಡೆದಿದ್ದು, ಸರಕಾರದ ಪರಿಷ್ಕೃತ ಆದೇಶದಂತೆ ಕೆಲವೊಂದು ಹೊಸ ಸಮೀಕ್ಷೆ ನಡೆಯುತ್ತಿವೆ. ಈ ಹಿಂದೆ ಈ ಪ್ರದೇಶದಲ್ಲಿ 35 ಕಿ.ಮೀ. ದೂರದ ರಸ್ತೆ ಗುರುತಿಸಲಾಗಿದ್ದು, ಹೆಚ್ಚು ನೇರಗೊಳ್ಳುವ ಕಾರಣ 33.1ಕಿ.ಮೀ.ಗೆ ಸೀಮಿತಗೊಳ್ಳಲಿದೆ. ಶೀಘ್ರವೇ ಟೆಂಡರ್ ಪೂರ್ಣಗೊಳ್ಳಲಿದ್ದು ನವೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.