ನೇಸರ ಆ.05: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಇವರಿಂದ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆಗೊಂಡಿತು.
ಇಂಟರ್ಯಾಕ್ಟ್ ಕ್ಲಬ್ ನ ನೂತನ ಸಮಿತಿಯನ್ನು ಉದ್ಟಾಟಿಸಿ, ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೊಟೇರಿಯನ್ ಮನೋರಮಾ ಭಟ್ ಮಾತನಾಡುತ್ತಾ ಸಮಾಜಕ್ಕೆ ಏನಾದರೂ ಸೇವೆಯನ್ನು ಸಲ್ಲಿಸಬೇಕು, ಕೊಡುಗೆಯನ್ನು ನೀಡಬೇಕು ಎಂಬ ಧ್ಯೇಯ ರೋಟರಿ ಕ್ಲಬ್ಬಿನದು. ಇಂಟರ್ಯಾಕ್ಟ್ ಕ್ಲಬ್ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅಂತಹ ಸಾಮಾಜಿಕ ಜವಾಬ್ದಾರಿಯ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂಟರ್ಯಾಕ್ಟ್ ಕ್ಲಬ್ ವೇದಿಕೆಯನ್ನೊದಗಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜಿರೆಯ ಬಿ.ಸೋಮಶೇಖರ ಶೆಟ್ಟಿಯವರು ಮಾತನಾಡುತ್ತಾ, ಶಿಕ್ಷಣದ ಮೂಲಕ ಮಕ್ಕಳು ಸಂಸ್ಕಾರವಂತರಾಗಬೇಕು ಎಂದು ಶುಭಹಾರೈಸಿದರು. ಅತಿಥಿಗಳಾಗಿ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ, ರೋಟೇರಿಯನ್ ವಿದ್ಯಾಕುಮಾರ್ ಕಾಂಚೋಡು, ರೋಟರಿ ಕ್ಲಬ್ಬಿನ ಯುವ ಸೇವಾ ವಿಭಾಗದ ಚೇರ್ಮನ್ ರೊ. ಶ್ರವಣ್ ಕಾಂತಾಜೆಯವರು ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಎಲ್ಲಾ ಶಿಕ್ಷಕ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಇಂಟರ್ಯಾಕ್ಟ್ ಕ್ಲಬ್ಬಿನ ಮಾರ್ಗದರ್ಶಿ ಶಿಕ್ಷಕರಾದ ಜಗದೀಶ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿ ನಾಯಕ ಸಯ್ಯದ್ ತಾಹಿರ್ ಸ್ವಾಗತಿಸಿ, ಸ್ವಸ್ತಿಕ್ ವಂದಿಸಿದರು, ಕಮರುನ್ನೀಸ ಮತ್ತು ಶಾರಿಯಾ ಖಾನಂ ಕಾರ್ಯಕ್ರಮ ನಿರೂಪಿಸಿದರು.