ನೇಸರ ಆ.05: ಕಡಬ: ಟಿವಿ ಮಾಧ್ಯಮ ಹಾಗೂ ಸಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇಂದು ನಮ್ಮಲ್ಲಿ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಅಭ್ಯಾಸ ತೀರಾ ಕಡಿಮೆಯಾಗಿದೆ ಎಂದು ಉದ್ಯಮಿ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಹೇಳಿದರು.
ಅವರು ಕಡಬ ಸರಸ್ವತಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ತಾಲೂಕಿನ ಐವತ್ತು ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಮಾಡಿ ಮಾತನಾಡಿದರು. ನಮ್ಮ ಜ್ಞಾನ ಹೆಚ್ಚಾಗಬೇಕಾದರೆ ಪುಸ್ತಕ, ಪತ್ರಿಕೆಗಳನ್ನು ಓದಲೇ ಬೇಕು, ಆದರೆ ಇಂದಿನ ಕಾಲಘಟ್ಟದಲ್ಲಿ ನಮ್ಮಲ್ಲಿ ಓದುವ ಅಭ್ಯಾಸ ಕಡಿಮೆಯಾಗಿದೆ. ಈ ವಿಚಾರವನ್ನು ಕಿರಿಯರಿಗೆ ಅರಿವು ಮೂಡಿಸಬೇಕಾದ ಹಿರಿಯರು ಕೂಡ ಟಿವಿ, ಸಾಮಾಜಿಕ ಜಾಲತಣಗಳಲ್ಲಿ ಬ್ಯುಸಿಯಾಗಿ ಯುವ ಜನಾಂಗಕ್ಕೆ ತಿಳಿಹೇಳುವ ನೈತಿಕತೆಯನ್ನು ಕಳೆದುಕೊಂಡಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಅಭ್ಯುದಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ಮಾತನಾಡಿ ಕನ್ನಡ ಸಾಹಿತ್ಯವನ್ನು ಬೆಳೆಸಬೇಕಾದರೆ ನಮ್ಮ ಕರ್ತವ್ಯವನ್ನು ಹೆಚ್ಚಿಸಬೇಕು, ಕನ್ನಡ ಭಾಷೆ ಎಲ್ಲಾ ಭಾಷೆಗಳಲ್ಲಿ ಸಮ್ಮಿಳಿತವಾಗಿ ವಿಶಾಲ ಪರಿಜ್ಞಾನವನ್ನು ಬೆಳೆಸಿಕೊಂಡಿದೆ, ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಸಂಸ್ಕೃತಿಯ ಬೆಳವಣಿಗೆಯಲ್ಲಿ ನಾವೆಲ್ಲಾ ಕೈಜೋಡಿಸಬೆಕಾಗಿದೆ ಎಂದರು.
ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಉಡುಪಿಯ ನರಸಿಂಹ ರಾವ್ ಕಲ್ಸಂಕ ಮಾತನಾಡಿ ಉಚಿತವಾಗಿ ನೀಡಿರುವ ಪುಸ್ತಗಳು ಓದುವ ಮೂಲಕ ಸದ್ಬಳಕೆಯಾಗಬೇಕು ದಿನದ ೨೪ ಗಂಟೆಯಲ್ಲಿ ಕನಿಷ್ಟ ೨೫ ನಿಮಿಷವಾದರೂ ಓದಿಗೆ ಮೀಸಲಿಡಬೇಕು ಎಂದರು.
ಕಡಬ ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಅತಿಥಿಯಾಗಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೀತಾರಾಮ ರೈ ಸವಣೂರು ಹಾಗೂ ನರಸಿಂಹ ರಾವ್ ಕಲ್ಸಂಕ ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲುಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿ ಟಿ.ನಾರಾಯಣ ಭಟ್ ರಾಮಕುಂಜ ಸನ್ಮಾನಿತರ ಪರಿಚಯಿಸಿದರು. ವೇದಿಕೆಯಲ್ಲಿ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಕಾರ್ಯದರ್ಶಿ ಪಿ.ವಸಂತ್ ಕುಮಾರ್, ಸಾಹಿತ್ಯ ಪರಿಷತ್ ಸದಸ್ಯರಾದ ಯಶವಂತ್ ರೈ ಮರ್ಧಾಳ, ರಮೇಶ್ ಪ್ರಭು ಉಡುಪಿ, ನಾರ್ಣಪ್ಪ ನಾಯ್ಕ್, ವೆಂಕಟ್ರಮಣ ನೆಲ್ಯಾಡಿ ಉಪಸ್ಥಿತರಿದ್ದರು.
ಸಾಹಿತ್ಯ ಪರಿಷತ್‌ನ ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತ್ತಾಯ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ನಾಯಕ್ ವಂದಿಸಿದರು. ಸರಸ್ವತಿ ವಿದ್ಯಾಲಯದ ಶಿಕ್ಷಕಿ ಹೇಮಲತಾ ಕೆ. ಕಾರ್ಯಕ್ರಮ ನಿರೂಪಿಸಿದರು.