ನೇಸರ ಆ.09: ಬೆಳ್ತಂಗಡಿ ತಾಲೂಕಿನ ದಿಡುಪೆ, ಚಾರ್ಮಾಡಿ ಘಾಟಿ ಸೇರಿದಂತೆ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ಉಗಮ ಪ್ರದೇಶದಲ್ಲಿ ಸೋಮವಾರ ಭಾರಿ ಮಳೆಯಾದ ಕಾರಣ ಎರಡು ನದಿಗಳಲ್ಲಿ ಸಾಮಾನ್ಯ ಪ್ರವಾಹದ ಸ್ಥಿತಿ ಉಂಟಾಯಿತು.
ಸಂಜೆ 3.30ರ ಸುಮಾರಿಗೆ ನದಿಗಳ ನೀರು ಏರತೊಡಗಿದಂತೆ ಇಲ್ಲಿನ ಮಲವಂತಿಗೆ, ಮಿತ್ತ ಬಾಗಿಲು, ಕಡಿರುದ್ಯಾವರ, ಚಾರ್ಮಾಡಿ ಮುಂಡಾಜೆ,ಕಲ್ಮಂಜ ಮೊದಲಾದ ಗ್ರಾಮಗಳ ಜನರಲ್ಲಿ ಭೀತಿ ಆವರಿಸಿ 2019ರ ಆ.9ರ ನೆನಪು ಮರುಕಳಿಸತೊಡಗಿತು. ಆದರೆ ಸಂಜೆ 6ರ ಸುಮಾರಿಗೆ ನದಿಗಳ ನೀರು ಇಳಿಯ ತೊಡಗಿದ ಕಾರಣ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.
ನೀರು ತೋಟಗಳಿಗೆ ನುಗ್ಗಿ ನದಿಗಳು ಹರಿಯುವ ಪ್ರದೇಶಗಳ ತೋಟ ಗದ್ದೆಗಳು ಜಲಾವೃತವಾದವು. ಕೆಲವೆಡೆ ತೋಟದಲ್ಲಿರುವ ಪಂಪು ಶೆಡ್ಡುಗಳು ಮುಳುಗಿವೆ. ಕೆಲವು ಕಡೆ ಕಡಿಮೆ ಎತ್ತರದ ಸೇತುವೆಗಳ ಸಂಪರ್ಕ ಕಡಿತಗೊಂಡಿದೆ.ನೆರಿಯ ಹೊಳೆಯಲ್ಲಿ ಭಾರಿ ನೀರು ಹರಿದಿದ್ದು, ಅಣಿಯೂರು- ಕಾಟಾಜೆ- ಪರ್ಪಳ ರಸ್ತೆ ಸಂಪರ್ಕ ಕಡಿತಗೊಂಡಿತು. ಮಿತ್ತಬಾಗಿಲಿನ ಕೊಪ್ಪದ ಗಂಡಿ ಸೇತುವೆ ಮುಳುಗಡೆಗೊಂಡಿತು. ಕಿಂಡಿ ಅಣೆಕಟ್ಟುಗಳಲ್ಲಿ ಅಪಾರ ಪ್ರಮಾಣದ ಮರಮಟ್ಟು ತುಂಬಿದ್ದು ನದಿಗಳ ನೀರಿನ ಮಟ್ಟ ಯಥಾ ಸ್ಥಿತಿಗೆ ಬಂದ ಬಳಿಕವಷ್ಟೇ ಸಂಪೂರ್ಣ ಚಿತ್ರಣ ದೊರೆಯಲಿದೆ.
ನೀರು ನುಗ್ಗಿದ ತೋಟಗಳಲ್ಲಿ ಸಾಕಷ್ಟು ತ್ಯಾಜ್ಯವು ಬಂದು ಬಿದ್ದಿದೆ. ಉಳಿದಂತೆ ಮಳೆಯ ಪರಿಣಾಮ ಮುಂಡಾಜೆ ಗ್ರಾಮದ ಮಿತ್ತೊಟ್ಟು ಸೇಸಪ್ಪ ಪೂಜಾರಿ ಎಂಬವರ ಮನೆಯ ಗೋಡೆ,ನೆರಿಯ ಗ್ರಾಮದ ಗಂಡಿ ಬಾಗಿಲಿನ ನೆರಿಯ ಕಾಡು ಜೋಸೆಫ್ ಮೇನಾಚೆರಿಯವರ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದು ಹಾನಿ ಉಂಟಾಗಿದೆ.