ಮುಂಡಾಜೆ,ಕಲ್ಮಂಜ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಹಸಿರು ತಪಸ್ಸು ಸಂಘಟನೆಯ ಮನವಿ, ಸಭೆ

ಶೇರ್ ಮಾಡಿ

ನೇಸರ ಆ.09: ಪ್ಲಾಸ್ಟಿಕ್ ನಿಷೇಧದ ಕುರಿತು ಸರಕಾರದ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸುತ್ತಿದ್ದರು ಅವು ಅನುಷ್ಠಾನಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಡಾಜೆಯ ಹಸಿರು ತಪಸ್ಸು ಸಂಘಟನೆ ಮುಂಡಾಜೆ ಹಾಗೂ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇಟೆ ಹಾಗೂ ಇನ್ನಿತರ ಪರಿಸರಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದೆ.
ಈ ಬಗ್ಗೆ ಸೋಮವಾರ ಮುಂಡಾಜೆ ಗ್ರಾಪಂ ಸಭಾಭವನದಲ್ಲಿ ವರ್ತಕರ ಹಾಗೂ ಊರವರ ಸಭೆಯು ಪಂಚಾಯಿತಿ ಅಧ್ಯಕ್ಷ ರಂಜಿನಿ ರವಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಬಳಸಲು ಸೂಚನೆ ನೀಡಲಾಯಿತು. ಈ ಬಗ್ಗೆ ಈಗಾಗಲೇ ಬಟ್ಟೆಯನ್ನು ಖರೀದಿಸಿದ್ದು ಸ್ವಸಹಾಯ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಅದರಿಂದ ಚೀಲಗಳನ್ನು ತಯಾರಿಸುವುದು, ಅದನ್ನು ವರ್ತಕರು ಖರೀದಿಸಬೇಕೆಂದು ಸಭೆಯಲ್ಲಿ ತಿಳಿಸಲಾಯಿತು.
ಗ್ರಾಮದಲ್ಲಿ ತ್ಯಾಜ್ಯ ಘಟಕ ಇಲ್ಲದ ಕಾರಣ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದ್ದು ಶೀಘ್ರ ತ್ಯಾಜ್ಯ ಘಟಕ ನಿರ್ಮಿಸುವ ಬಗ್ಗೆ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದ ಪೇಟೆ ಪ್ರದೇಶದ ಅಂಗಡಿಗಳಿಗೆ ಪಂಚಾಯಿತಿ ನಿಯೋಗ ತೆರಳಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಬಗ್ಗೆ ನಿರ್ಣಯಿಸಲಾಯಿತು.
ಮುಂಡಾಜೆ-ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ತೆರಳುವ ರಸ್ತೆ ಬದಿ ಅತಿ ಹೆಚ್ಚಿನ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಬಿದ್ದಿದ್ದು ಇದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮದ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತೆ ಕಾರ್ಯಕ್ರಮ ನೆರವೇರಿಸಿ ಈ ಕಸವನ್ನು ವಿಲೇವಾರಿ ಮಾಡಲಾಗುವುದೆಂದು ಪಿಡಿಒ ಭರವಸೆ ನೀಡಿದರು.
ಹಸಿರು ತಪಸ್ಸು ಸಂಘಟನೆಯ ಸತೀಶ್ ಭಟ್, ನಾರಾಯಣ ಫಡಕೆ, ಸಚಿನ್ ಭಿಡೆ, ಗಜಾನನ ವಝೆ, ಶಶಾಂಕ ಮರಾಠೆ, ವಾಸುದೇವ ತಾಮನ್ಕರ್, ಶಿವಣ್ಣ, ವರ್ತಕರ ಸಂಘದ ವಿ.ಜೆ.ಅಬ್ರಹಾಂ, ವಿಶ್ವನಾಥ ನಾಯ್ಕ್, ಸೀತಾರಾಮ ಶೆಟ್ಟಿ, ವಿಘ್ನೇಶ್ ಪ್ರಭು, ಬಾಲಚಂದ್ರ ನಾಯಕ್ ಚಂದ್ರಶೇಖರ, ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ನಾಮದೇವ ರಾವ್, ಬಾಬು ಪೂಜಾರಿ, ಸೆಬಾಸ್ಟಿಯನ್, ವಿಷ್ಣು ಪಟವರ್ಧನ್,ಗ್ರಾಪಂ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು.

“ಮುಂಡಾಜೆ ಗ್ರಾಮದ ಎರಡು, ಮೂರು ಸ್ಥಳಗಳಲ್ಲಿ ಈ ಹಿಂದೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸ್ಥಳ ಗುರುತಿಸಿದಾಗ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ, ಈಗ ಹೊಸದಾಗಿ ಜಾಗ ಗುರುತಿಸಲಾಗಿದೆ. ಇದರ ಕಡತ ತಾಲೂಕು ಕಚೇರಿಯಲ್ಲಿದ್ದು ಆದೇಶ ಬಂದ ತಕ್ಷಣ ಕೆಲಸ ಆರಂಭವಾಗಲಿದೆ. ಅನುದಾನ ಈಗಾಗಲೇ ಮಂಜೂರಾಗಿದೆ. ಕಸ ವಿಲೇವಾರಿಗೆ ಬೇಕಾದ ವಾಹನವನ್ನು ಕೂಡ ಖರೀದಿ ಮಾಡಲಾಗಿದೆ”
ರಂಜಿನಿ ರವಿ, ಅಧ್ಯಕ್ಷರು, ಗ್ರಾ.ಪಂ.ಮುಂಡಾಜೆ.

Leave a Reply

error: Content is protected !!