ನೇಸರ ನ28: ರಕ್ತದಾನ ಶ್ರೇಷ್ಠ ಕಾರ್ಯ. ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಇನ್ನೂ ತಪ್ಪು ಕಲ್ಪನೆಗಳಿವೆ. ಸಂಘ -ಸಂಸ್ಥೆಗಳು ಹೆಚ್ಚು ಹೆಚ್ಚು ಶಿಬಿರಗಳನ್ನು ಆಯೋಜಿಸಿ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಬೇಕಾಗಿದೆ ಎಂದು ಪುತ್ತೂರಿನ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಹೇಳಿದ್ದಾರೆ. ಅವರು ಹತ್ಯಡ್ಕ ಗ್ರಾಮದ ಕುಂಟಾಲಪಳಿಕೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಕಪಿಲ ಕೇಸರಿ ಯುವಕ ಮಂಡಲ ಕುಂಟಾಲಪಳಿಕೆ ನೇತೃತ್ವದಲ್ಲಿ ಚೈತನ್ಯಮಿತ್ರ ಕಲಾವೃಂದ ಮತ್ತು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇವರ ಸಹಯೋಗದಲ್ಲಿ ನ 28 ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವಂತರಾಗಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ರಕ್ತದಾನ ಮಾಡಲು ಅರ್ಹರು. ಮೊದಲು ರಕ್ತದಾನಕ್ಕೆ 18ರಿಂದ 60ರ ವಯೋಮಿತಿ ಇತ್ತು, ಇತ್ತೀಚೆಗೆ ಆರೋಗ್ಯವಂತರಾಗಿರುವ 65 ವಯಸ್ಸಿನವರೂ ರಕ್ತದಾನ ಮಾಡಬಹುದಾಗಿದೆ ಎಂದು ಕಂಡುಕೊಳ್ಳಲಾಗಿದೆ. ರಕ್ತ ನೀಡಿದರೆ 24 ಗಂಟೆಗಳಲ್ಲಿ ಆ ರಕ್ತವನ್ನು ಮರುಸೃಷ್ಟಿಸಿಕೊಳ್ಳುವ ವ್ಯವಸ್ಥೆ ದೇಹದಲ್ಲಿರುತ್ತದೆ. ಹಾಗಾಗಿ ರಕ್ತದಾನಿಗಳಾಗಲು ಯಾರೂ ಹಿಂಜರಿಯಬಾರದು ಎಂದರು.ಕಾಯಿಲೆ ಇದ್ದವರು,ಗರ್ಭಿಣಿಯರು,ಬಾಣಂತಿಯರು, ಮಹಿಳೆಯರು ಋತುಸ್ರಾವದ ಸಂದರ್ಭ ರಕ್ತದಾನ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹತ್ಯಡ್ಕ ಸಿ.ಎ.ಬ್ಯಾಂಕ್ ನ ನಿರ್ದೇಶಕ ಧರ್ಮರಾಜ್ ಅಡ್ಕಾಡಿ ರಕ್ತದಾನ ಪುಣ್ಯದ ಕೆಲಸ ಎಂದರು. ಹತ್ಯಡ್ಕ ಪ್ರಾ.ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ ಕಪಿಲಕೇಸರಿ ಮತ್ತು ಚೈತನ್ಯಮಿತ್ರ ಕಲಾವೃಂದದ ಸಮಾಜಮುಖಿ ಕೆಲಸಗಳು ಶ್ಲಾಘನೀಯ ಎಂದರು. ಅಶೋಕ್ ಭಿಡೆ ದರ್ಭೆತಡ್ಕ, ವೃಷಾಂಕ್ ಖಾಡಿಲ್ಕರ್ ಮಾತನಾಡಿದರು. ಕಾರ್ಯದರ್ಶಿ ಸುಮಂತ್ ಅಳಕೆ ಉಪಸ್ಥಿತರಿದ್ದರು. ಶಿಬಿರದಲ್ಲಿ 46 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಶ್ರೇಯಸ್ ಪಾಳಂದೆ ಧಾರ್ಮಿಕ ಸ್ತುತಿಯೊಂದಿಗೆ ವೃಕ್ಷವರ್ಧನ್ ಹೆಬ್ಬಾರ್ ಸ್ವಾಗತಿಸಿದರು. ರಾಜೇಶ್ ಬೊಳ್ಳೋಡಿ ವಂದಿಸಿದರು. ಶ್ರೀವತ್ಸ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು.