ನೇಸರ ಆ.22: ಅರಸಿನಮಕ್ಕಿಯ ಚೈತನ್ಯಮಿತ್ರ ಕಲಾವೃಂದ(ರಿ.) ಆಶ್ರಯದಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀಕೃಷ್ಣ ಪೂಜೆಯ ನಂತರ ಸಂಜೆಯವರೆಗೆ ವಿವಿಧ ಆಟೋಟ ಸ್ಪರ್ಧೆಗಳು ಜರಗಿದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತುಳು ಚಿತ್ರರಂಗದ ಯುವ ನಿರ್ದೇಶಕ ವೀರೇಂದ್ರ ಶೆಟ್ಟಿಯವರು ಚಿತ್ರರಂಗವೂ ಸೇರಿದಂತೆ ಸಂಘಟನೆ, ಸಂಸ್ಥೆಗಳಲ್ಲಿ ಪ್ರಾರಂಭದಲ್ಲಿರುವ ಉತ್ಸಾಹ ನಂತರದ ವರ್ಷಗಳಲ್ಲಿರುವುದಿಲ್ಲ. ಸಂಘಟನೆಗಳು ಪ್ರಾರಂಭಗೊಂಡ ಮೂರು ನಾಲ್ಕು ವರ್ಷಗಳಲ್ಲೆ ನಾನಾ ಕಾರಣಗಳಿಂದ ನೆಲಕಚ್ಚುತ್ತವೆ ಅಥವಾ ಕಳೆಗುಂದುತ್ತವೆ. ಆದರೆ ಅರಸಿನಮಕ್ಕಿಯ ಚೈತನ್ಯಮಿತ್ರ ಕಲಾವೃಂದ 19 ವರ್ಷವನ್ನು ಪೂರೈಸಿ ಜನಮನ ಗೆದ್ದು ಮಾದರಿಯಾಗಿ ಕೆಲಸ ಮಾಡುತ್ತಿದೆ. ಈ ಸಂಘಟನೆಯ ಸದಸ್ಯರು ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ಗುರುತಿಸಿಕೊಂಡಿರುವುದು ಅಭಿನಂದನೀಯ ಎಂದರು. ತುಳುಚಿತ್ರರಂಗ ಇತರೆ ಭಾಷಾಚಿತ್ರರಂಗಕ್ಕೆ ಸರಿಸಾಟಿಯಾಗಿ ಬೆಳೆಯುತ್ತಿದೆ. ತನ್ನ ನಿರ್ದೇಶನದ ‘ಚಾಲಿಪೋಲಿಲು’, ‘ಮಗನೇ ಮಹಿಷ’ ಸಿನಿಮಾ ಹಿಟ್ ಆಗಿದ್ದು ಮುಂದೆ ‘ಸೇಲೆ ದುಗ್ಗಮ್ಮ’ ಸಿನಿಮಾ ನಿರ್ದೇಶಿಸುತ್ತಿರುವುದಾಗಿ ಹೇಳಿ ಪ್ರತಿಭಾವಂತ ಯುವಜನತೆ ಸಿನಿಮಾ ಕ್ಷೇತ್ರಕ್ಕೂ ಕಾಲಿಡಬೇಕೆಂದು ಸಲಹೆ ನೀಡಿದರು.
ಯುವ ವಾಗ್ಮಿ ಪೃಥ್ವೀಶ್ ಧರ್ಮಸ್ಥಳ ಧಾರ್ಮಿಕ ಉಪನ್ಯಾಸವನ್ನು ನೀಡಿ ಶ್ರೀಕೃಷ್ಣನ ಆದರ್ಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸುವಂತೆ ಕರೆ ನೀಡಿ ಸ್ವಾರ್ಥ ರಹಿತ ಕಾರ್ಯಕ್ರಮಗಳು ಉತ್ತಮ ಸಮಾಜವನ್ನು ರೂಪಿಸುತ್ತವೆ. ಸಮಾಜ ಕಟ್ಟುವ ಕಾರ್ಯದಲ್ಲಿ ಸಂಘಟಿತರಾಗಬೇಕು ಎಂದರು.
ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷರಾದ ನವೀನ್ ರೆಖ್ಯ ಮಾತನಾಡಿ, ಚೈತನ್ಯಮಿತ್ರ ಕಲಾವೃಂದದ ಜೊತೆ ಗುರುತಿಸಿಕೊಂಡು ಓರ್ವ ಕಾರ್ಯಕರ್ತನಂತೆ ಕೆಲಸ ಮಾಡಿರುವುದೂ ತಾನಿಂದು ಪಂಚಾಯತ್ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ. ಯುವಜನತೆ ಇಂತಹ ಸಂಘಟನೆಗಳಲ್ಲಿ ತೊಡಗುವುದರಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ, ಸಮಾಜಕ್ಕೂ ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.
ಚೈತನ್ಯಮಿತ್ರ ಕಲಾವೃಂದದ ಅಧ್ಯಕ್ಷ ವೃಷಾಂಕ್ ಖಾಡಿಲ್ಕರ್ ಅಧ್ಯಕ್ಷತೆಯನ್ನು ವಹಿಸಿ ಸಮಾಜದ ಸಹಕಾರವನ್ನು ಕೊಂಡಾಡಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸೀತಾರಾಮ ಗೌಡ, ಉದ್ಯಮಿ ಸುಧೀರ್ ಕುಮಾರ್ ಎಂ.ಎಸ್.ಉಪಸ್ಥಿತರಿದ್ದರು. ಸಮಾರಂಭದಲ್ಲಿ ಚಿತ್ರನಿರ್ದೇಶಕ ವೀರೇಂದ್ರ ಶೆಟ್ಟಿ, ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀರಂಗ ದಾಮ್ಲೆ(ಸೇವಾ ಕ್ಷೇತ್ರ), ಗಣೇಶ್ ಕೆ. ಸಾಲಿಯಾನ್ (ಸಿ.ಆರ್.ಪಿ.ಎಫ್. ನಿವೃತ್ತ ಯೋಧ), ಮಹಾದೇವ ಮರಾಠೆ (ಸಂಸ್ಕೃತ ವಿದ್ವಾನ್), ಸಂಜೀವ ನಾಯ್ಕ್ (ನಿವೃತ್ತ ಮುಖ್ಯೋಪಾಧ್ಯಾಯರು), ಕೃಷ್ಣಪ್ಪ ಗೌಡ (ಹಿರಿಯ ಭಜನಾ ಪಟು), ಎ.ಎನ್. ಮನ್ಮಥ ಆಚಾರ್ (ವಾಸ್ತು ಶಿಲ್ಪಿ)ರವರನ್ನು ಸನ್ಮಾನಿಸಲಾಯಿತು. ವರದಶಂಕರ ದಾಮ್ಲೆ ಸನ್ಮಾನಿತರನ್ನು ಪರಿಚಯಿಸಿದರು. ಧನ್ಯಶ್ರೀ ಹೊಸ್ತೋಟ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ನೀತಾ ರಾಧೇಶ್ ಪ್ರಾರ್ಥಿಸಿದರು. ಕೋಶಾಧಿಕಾರಿ ಗಣೇಶ್ ಹೊಸ್ತೋಟ ಸ್ವಾಗತಿಸಿ, ಶಶೀಂದ್ರ ಆಚಾರ್ಯ ವಂದಿಸಿದರು. ರೇಣುಕಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಶಾಸಕ ಹರೀಶ್ ಪೂಂಜರವರು ಕಾರ್ಯಕ್ರಮಕ್ಕೆ ಭೇಟಿ ನೀಡಿದರು.
ಜಯರಾಮ್ ಗೌಡ, ನವೀನ್ ರೈ, ಶ್ರೀಕಾಂತ್ ಕಾಂತ್ರೇಲು, ಮುರಳೀಧರ ಶೆಟ್ಟಿಗಾರ್, ಶಿವರಾಮ್ ಗೌಡ, ದಯಾನಂದ ಉಡ್ಯೇರೆ, ಗಣೇಶ್ ಪಲಸ್ತಡ್ಕ, ಅಭಿನಯ ಭಟ್, ಚಂದ್ರಶೇಖರ ಗೌಡ, ಸುದರ್ಶನ್ ಗೌಡ, ಗುರುರಾಜ್ ಭಟ್, ಸರೋಜಿನಿ ನಾಯ್ಕ್, ಶಕುಂತಳಾ ಆಚಾರ್, ಮಂಜುಳಾ ಕಾರಂತ್, ರವೀಂದ್ರ ಆಚಾರ್ ಮೊದಲಾದವರು ಸಹಕರಿಸಿದರು.