ನೇಸರ ಆ.24: ಏಷ್ಯಾ ಖಂಡದಲ್ಲಿ ರಬ್ಬರ್ ಖರೀದಿ, ಮಾರಾಟ ವ್ಯವಹಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಉಜಿರೆ ರಬ್ಬರ್ ಸೊಸೈಟಿ ತನ್ನ ಗ್ರಾಹಕರ ಅನುಕೂಲಕ್ಕಾಗಿ ರಬ್ಬರ್ ಹಾಲನ್ನು(ಲ್ಯಾಟೆಕ್ಸ್) ಸಂಗ್ರಹಿಸುವ ನೂತನ ಯೋಜನೆ ಆರಂಭಿಸಿದ್ದು ಇದರ ಮಾರಾಟಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಇಂದಿನ ದಿನಗಳಲ್ಲಿ ಕಂಡು ಬರುವ ಕಾರ್ಮಿಕರ, ಯಂತ್ರೋಪಕರಣಗಳ ಸಮಸ್ಯೆ ಇತ್ಯಾದಿಗಳಿಂದ ಕಂಗಾಲಾಗುತ್ತಿರುವ ರಬ್ಬರ್ ಕೃಷಿಕರಿಗೆ ಶೀಟುಗಳನ್ನು ಮಾಡಲು ಕಷ್ಟವಾಗುತ್ತಿದೆ.ಇಂತಹ ರೈತರ ಅನುಕೂಲಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ತನ್ನ ಸದಸ್ಯರ ಮನೆ ಬಾಗಿಲಿಗೆ ಹಾಲು ಸಂಗ್ರಹಕ್ಕೆ ಬೇಕಾದ ಡ್ರಮ್, ರಾಸಾಯನಿಕ ಇತ್ಯಾದಿಗಳನ್ನು ಸಂಘವು ಪೂರೈಸಿ, ಸಂಗ್ರಹವಾದ ಹಾಲನ್ನು ಸಾಂದ್ರತೆಯ ಆಧಾರದಲ್ಲಿ ದರ ನಿಗದಿಪಡಿಸಿ ಖರೀದಿಸುತ್ತದೆ.
ಪ್ರಥಮ ಮಾರಾಟ
ರಬ್ಬರ್ ಸೊಸೈಟಿಯ ಈ ಯೋಜನೆಯಿಂದ ಸಂಗ್ರಹಗೊಂಡ ಹಾಲನ್ನು ಕಂಪೆನಿಗಳಿಗೆ ಮಾರಾಟ ಮಾಡುತ್ತದೆ. ಇದರ ಪ್ರಥಮ ಮಾರಾಟ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ನಿರ್ದೇಶಕ ಸೋಮನಾಥ ಬಂಗೇರ, ಸಿಇಒ ರಾಜು ಶೆಟ್ಟಿ ಉಪಸ್ಥಿತರಿದ್ದರು.
“ರಬ್ಬರ್ ಹಾಲು ಖರೀದಿ ಕುರಿತು ಮಹಾಸಭೆಯಲ್ಲಿ ಸದಸ್ಯರು ಬೇಡಿಕೆ ಇಟ್ಟಿದ್ದರು. ಅವರ ಅನುಕೂಲಕ್ಕಾಗಿ ಮನೆಯಿಂದಲೇ ರಬ್ಬರ್ ಹಾಲು ಖರೀದಿಸುವ ಯೋಜನೆ ರೂಪಿಸಲಾಗಿದೆ. ಯಾವ ಕಂಪನಿ ಅತ್ಯಧಿಕ ದರ ನೀಡುತ್ತದೆಯೋ ಆ ಕಂಪೆನಿಗೆ ರಬ್ಬರ್ ಹಾಲನ್ನು ಮಾರಾಟ ಮಾಡಲಾಗುತ್ತದೆ” – ಶ್ರೀಧರ ಜಿ ಭಿಡೆ, ಅಧ್ಯಕ್ಷರು.