ನೇಸರ ಡಿ3: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಭೀತಿಯಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆ,ಕಾಲೇಜು ಹೋಗುವ ಮಕ್ಕಳಿದ್ದರೆ ಅಂಥ ಮನೆಯವರು ಕಡ್ಡಾಯ ಎರಡು ಡೋಸ್ ಲಸಿಕೆ ಪಡೆದಿರಬೇಕೆಂದು ಸೂಚಿಸಲಾಗಿದೆ.ಅಲ್ಲದೆ,ಜನವರಿ 15 ರ ವರೆಗೆ ಶಾಲೆ, ಕಾಲೇಜುಗಳಲ್ಲಿ ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಮದುವೆ ಸಮಾರಂಭಗಳಲ್ಲಿ 500 ಜನರು ಮಾತ್ರವೇ ಪಾಲ್ಗೊಳ್ಳಲು ಆವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿ ಓಮಿಕ್ರಾನ್ ವೈರಸ್ ಸೋಂಕು ಪತ್ತೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಹಿರಿಯ ಸಚಿವರ ಜೊತೆಗೆ ತುರ್ತು ಸಭೆಯನ್ನು ನಡೆಸಲಾಗಿದ್ದು ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಸಭೆಯ ಬಳಿಕ ಸಚಿವ ಅಶೋಕ್, ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಶಾಲೆಯ ಆವರಣವನ್ನು ಪ್ರವೇಶಿಸಲು ಕಡ್ಡಾಯವಾಗಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿರಬೇಕು.ಇನ್ನು ಪೋಷಕರು ಎರಡು ಡೋಸ್ ಲಸಿಕೆ ಪಡೆದಿದ್ರೆ ಮಾತ್ರವೇ ಮಕ್ಕಳಿಗೆ ಶಾಲೆ, ಕಾಲೇಜುಗಳಿಗೆ ಪ್ರವೇಶ ನೀಡುವಂತೆ ಸೂಚಿಸಲಾಗಿದೆ. ಶಾಲೆಗಳಲ್ಲಿ ಯಾವುದೇ ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ. ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್, ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು ಎಂದು ಆದೇಶಿಸಲಾಗಿದೆ.
ರಾಜ್ಯದಲ್ಲಿ ನಿತ್ಯವೂ ಒಂದು ಲಕ್ಷ ಟೆಸ್ಟ್ ಗಳನ್ನು ಮಾಡಲು ನಿರ್ಧರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಸಿಜನ್ ಬೆಡ್ ಗಳನ್ನು ಹೆಚ್ಚಳ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮತ್ತೆ ಕಂಟ್ರೋಲ್ ರೂಮ್ ಆರಂಭಿಸಿ ಔಷಧಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಶೋಕ್ ತಿಳಿಸಿದ್ದಾರೆ.
ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ನೆಗೆಟಿವ್ ವರದಿ ಬಂದರೆ ಮಾತ್ರ ಮನೆಗೆ ಬಿಡಲಾಗುವುದು. ಒಂದು ವೇಳೆ ಕೋವಿಡ್ ದೃಢವಾದರೆ ಆಸ್ಪತ್ರೆಗೆ ಕಳುಹಿಸಲಾಗುವುದು. ಗುಣಮುಖರಾಗಿ ನೆಗೆಟಿವ್ ಬಂದ ಬಳಿಕವೇ ಮನೆಗೆ ಕಳುಹಿಸಲಾಗುವುದು. ವಿಮಾನ ನಿಲ್ದಾಣಗಳಲ್ಲಿ ತುರ್ತು ಆರ್ ಟಿಪಿಸಿಆರ್ ಪರೀಕ್ಷೆಗೆ ರೂ. 3,000 ನಿಗದಿ ಮಾಡಲಾಗಿದೆ. 3 ರಿಂದ 4 ಗಂಟೆಯೊಳಗೆ ಫಲಿತಾಂಶ ಸಿಗುತ್ತದೆ. ಬೇರೆ ರಾಜ್ಯಗಳಲ್ಲಿ ಇದರ ಬೆಲೆ ₹4,000 ಕ್ಕೂ ಮೇಲಿದೆ.
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲಾಗುವುದು. ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಅಧಿವೇಶನ ನಡೆಸಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.