ಕಲ್ಲಂಡ ಪ್ರದೇಶದಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿದ ಯುವ ತೇಜಸ್ಸು ಟ್ರಸ್ಟ್

ಶೇರ್ ಮಾಡಿ

ನೇಸರ ಸೆ.14: ಬೆಳ್ತಂಗಡಿ ತಾಲೂಕಿನ ಮಿತ್ತ ಬಾಗಿಲು ಗ್ರಾಮದ ಕಲ್ಲಂಡ ಪರಿಸರದ ಜನರ ಬಹು ವರ್ಷದ ಸಂಪರ್ಕ ಸೇತುವೆಯ ಕನಸು ಯುವ ತೇಜಸ್ಸು ಟ್ರಸ್ಟ್ ನಿಂದ ಪೂರ್ಣಗೊಂಡಿದೆ.
ಕಲ್ಲಂಡ ಪ್ರದೇಶದಲ್ಲಿ ಹರಿಯುವ ನೇತ್ರಾವತಿ ನದಿ ಸಂಪರ್ಕದ ಏಳೂವರೆ ಹಳ್ಳಕ್ಕೆ ಭಾನುವಾರದವರೆಗೂ ಮಳೆಗಾಲದಲ್ಲಿ ಅಡಕೆ ಮರದ ಕಾಲು ಸಂಕವೇ ಪ್ರಮುಖ ಸಂಪರ್ಕವಾಗಿತ್ತು.

ಇಲ್ಲಿನ ಗುತ್ತು, ಕಡ್ತಿ ಕುಮೆರು, ಕಕ್ಕೆನೇಜಿ, ಮಕ್ಕಿ, ಪರ್ಲ ಮೊದಲಾದ ಪ್ರದೇಶದ ಸುಮಾರು 28 ಕುಟುಂಬಗಳ ಶಾಲಾ ಮಕ್ಕಳಿಗೆ, ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೂ ಅಡಕೆ ಮರದ ಈ ಕಾಲುಸಂಕವೇ ಆಧಾರವಾಗಿತ್ತು. ಮಳೆಗಾಲದಲ್ಲಿ ಸದಾ ತುಂಬಿಹರಿಯುವ ಏಳೂವರೆ ಹಳ್ಳವನ್ನು ದಾಟಲು ಸಾಧ್ಯವಿಲ್ಲ. ಇಲ್ಲಿನ ಶಾಲಾ ಮಕ್ಕಳ ಸಹಿತ ಪ್ರದೇಶದ ಜನರು ಹಳ್ಳದಿಂದ ಸುಮಾರು 10 ಮೀ.ಗಿಂತ ಎತ್ತರದಲ್ಲಿರುವ ಅಡಕೆ ಮರದ ಕಾಲು ಸಂಕವನ್ನು ದಾಟಿಯೇ ಮುಂದುವರಿಯ ಬೇಕಿತ್ತು. ಜನಾಕರ್ಷಕ ಎರ್ಮಾಯಿ ಜಲಪಾತಕ್ಕೆ ಬರುವ ಪ್ರವಾಸಿಗರು ಕೂಡ ಈ ಕಾಲು ಸಂಕವನ್ನು ದಾಟಿಯೇ ಪ್ರವೇಶಿಸಬೇಕು. ಕಾಲು ಸಂಕ ದಾಟುವಾಗ ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇದು ಇಲ್ಲಿನ ಮನೆ ಮಂದಿಯ ಆತಂಕಕ್ಕೂ ಕಾರಣವಾಗುತ್ತಿತ್ತು.
ಇಲ್ಲಿ ಸಂಪರ್ಕವನ್ನು ನಿರ್ಮಿಸಲು ಪ್ರದೇಶದ ಜನರು ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿಗಳನ್ನು ನೀಡಿದ್ದರು ಯಾವುದೇ ಪ್ರಯೋಜನವಿಲ್ಲದೆ ಪ್ರದೇಶ ಸಮಸ್ಯೆ ಮುಂದುವರೆದಿತ್ತು.

ನೆರವಿಗೆ ಬಂದ ಟ್ರಸ್ಟ್ :

ದ ಕ ಜಿಲ್ಲೆಯನ್ನು ಕಾಲುಸಂಕ ಮುಕ್ತ ಮಾಡಬೇಕೆಂಬ ಅಭಿಯಾನದಲ್ಲಿ ತೊಡಗಿರುವ ಜಿಲ್ಲೆಯ ಯುವ ತೇಜಸ್ಸು ಟ್ರಸ್ಟ್, ಕಲ್ಲಂಡ ಪ್ರದೇಶದಲ್ಲಿ ಸುಸಜ್ಜಿತ ಕಬ್ಬಿಣದ ಕಾಲು ಸಂಕವನ್ನು ಭಾನುವಾರ ನಿರ್ಮಿಸಿ ಕೊಟ್ಟಿದೆ.ಅಧಿಕ ಮೊತ್ತದ ಈ ಯೋಜನೆಯಿಂದ ಕಾಲು ಸಂಕ ದಾಟಿ ಹೋಗುತ್ತಿದ್ದ ಪ್ರದೇಶದ ಜನರ ಸಮಸ್ಯೆಗೆ ಮುಕ್ತಿ ದೊರಕಿದೆ.ಪ್ರತಿದಿನ ಶಾಲಾ ಮಕ್ಕಳು ಶಾಲೆಗೆ ಹೋಗುವ ಹಾಗೂ ಬರುವ ಸಮಯದಲ್ಲಿ ಕಾಲು ಸಂಕದ ಬಳಿ ಕಾದು ಕುಳಿತುಕೊಳ್ಳಬೇಕಾಗಿದ್ದ ಪೋಷಕರು ಈಗ ನಿರಾಳರಾಗಿದ್ದಾರೆ. ಎರ್ಮಾಯಿ ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಿದೆ.

ಯುವ ತೇಜಸ್ಸು ಟ್ರಸ್ಟ್ :

ಯುವ ಜನಾಂಗವನ್ನೇ ಸೇತುವೆಯನ್ನಾಗಿಸಿಕೊಂಡು ಸಮಾಜದ ಅಸಹಾಯಕರ ಕಷ್ಟಗಳಿಗೆ ಸಹಾಯ ನೀಡುವ ಯುವ ತೇಜಸ್ಸು ಟ್ರಸ್ಟ್ ಜನಮನ್ನಣೆಗೆ ಪಾತ್ರವಾಗಿದೆ.ದಕ, ಮಡಿಕೇರಿ, ಕಾಸರಗೋಡು, ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಪ್ರಾಕೃತಿಕ ವಿಕೋಪ ಗಳಿಂದ ಹಾನಿಯಾಗುವ ಪ್ರದೇಶಗಳಲ್ಲಿ ಶ್ರಮದಾನಗಳನ್ನು ನಡೆಸುವ ಜತೆ ಸಾಕಷ್ಟು ಜನ ಸೇವೆಯನ್ನು ನೀಡುತ್ತಿದೆ. ಈ ಸಾಮಾಜಿಕ ಸೇವೆಗೆ ದೇಶ ವಿದೇಶಗಳಲ್ಲಿರುವವರು, ಊರಿನ ಪರೋಪಕಾರಿ ಬಂಧುಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ಸಂಸ್ಥೆಯು ದಕ ಜಿಲ್ಲೆಯಲ್ಲಿರುವ ಅಪಾಯಕಾರಿ ಮರದ ಕಾಲು ಸಂಕಗಳಿಗೆ ಮುಕ್ತಿ ನೀಡಿ ಸುಸಜ್ಜಿತ ಕಬ್ಬಿಣದ ಸೇತುವೆಗಳ ನಿರ್ಮಾಣಕ್ಕೆ ಮುಂದಾಗಿದೆ. ತಂಡದಲ್ಲಿ 20 ಪದಾಧಿಕಾರಿಗಳು 3,000ದಷ್ಟು ಮಂದಿ ದಾನಿಗಳು ಹಾಗೂ ಕೆಲಸಗಳಿಗೆ ಸಹಕಾರ ನೀಡುವವರು ಇದ್ದಾರೆ. ನೇರ ಸಂಪರ್ಕದೊಂದಿಗೆ ಸಮಸ್ಯೆಗಳನ್ನು ತಿಳಿಸುವವರಿಗೆ ಮೊದಲ ಆದ್ಯತೆ ಮೇರೆಗೆ ಸಹಕರಿಸಲಾಗುತ್ತಿದೆ.

See also  ನಿಯೋಜಿತ ಸಿ ಎಂ ಗಾಗಿ ಸರಕಾರವು ಖರೀದಿಸಿದ ನೂತನ ಕಾರು ಯಾವುದು? ಬೆಲೆ ಏನು?

“ಕಲ್ಲಂಡ ಪ್ರದೇಶದಲ್ಲಿ ಅನೇಕ ಅಭಿವೃದ್ಧಿಗಳ ಅಗತ್ಯವಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರಕಾರದ ಇಲಾಖೆಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ನಮಗೆ ಅತಿ ಅಗತ್ಯವಾಗಿ ಬೇಕಿದ್ದ ಕಿರು ಸೇತುವೆಯನ್ನು ಯುವ ತೇಜಸ್ಸು ಟ್ರಸ್ಟ್ ನಿರ್ಮಿಸಿ ಕೊಟ್ಟಿದೆ. ಇದರಿಂದ ನಮ್ಮ ಪ್ರದೇಶಕ್ಕೆ ಸಂಪರ್ಕದ ಅನುಕೂಲವಾಗಿದೆ. ಬಹು ವರ್ಷದ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಟ್ರಸ್ಟ್ ನ ಕೆಲಸ ಪ್ರದೇಶದ ಜನರಿಂದ ಅಭಿನಂದನೆಗೊಳಗಾಗಿದೆ” -ವೆಂಕಪ್ಪ ಗೌಡ ಸ್ಥಳೀಯರು ಕಲ್ಲಂಡ

Leave a Reply

Your email address will not be published. Required fields are marked *

error: Content is protected !!