ನೇಸರ ಸೆ.17:ನೂಜಿಬಾಳ್ತಿಲ ಬೆಥನಿ ಕಾಲೇಜಿನ ಸಂಚಾಲಕ, ಶಿಕ್ಷಣ ಪ್ರೇಮಿ ರೇ.ಫಾ.ಝಕರಿಯಾಸ್ ನಂದಿಯಾಟ್ ರವರು ಹಲವು ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಕನಸಿನ ಕಾರ್ಯಕ್ರಮ ಸದ್ಭಾವನಾ ದಿನಾಚರಣೆಯು ಸರ್ವಧರ್ಮೀಯರೊಂದಿಗೆ ಸೆ.17 ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಎಲ್ಲಾ ಧರ್ಮದ ಅಚರಣೆ, ವಿಚಾರಗಳನ್ನು ಎಲ್ಲಾ ಧರ್ಮದವರು ಅರ್ಥ ಮಾಡಿಕೊಂಡು ಸಮಾಜಮುಖಿಯಾಗಿ, ಮೌಲಾಧಾರಿತವಾಗಿ ಅರ್ಥ ಮಾಡಿಕೊಂಡಾಗ ಧರ್ಮ ಹಾಗೂ ಧಾರ್ಮಿಕ ಮೌಲ್ಯಗಳು ಧರ್ಮಗಳ ಆಚರಣೆಯ ಮೂಲಕ ಧರ್ಮಕ್ಕೆ ಹಿಂತಿರುಗಬಹುದು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮೂಡಿ ಬಂದಿದೆ. ಆಚರಣೆಗಳನ್ನು ಹೃದಯವಂತಿಕೆಯಿಂದ ನೋಡುವಂತೆ ಆಗಬೇಕು. ಬದುಕೆಂಬುದು ನಿಂತ ನೀರಾಗಬಾರದು, ಅದು ಸದಾ ಹರಿಯುತ್ತಿರಬೇಕು. ನಾವೆಲ್ಲರೂ ಭಾರತೀಯರು. ನಮ್ಮಲ್ಲಿ ಸಹೋದರ ಸಹೋದರಿಯ ಭಾವನೆ ಮೂಡಬೇಕು. ಅತ್ಯಂತ ಪರಂಪರೆಯುಳ್ಳ, ಪ್ರಪಂಚಕ್ಕೆ ಮಾದರಿಯಾದ ಭಾರತ ದೇಶದಲ್ಲಿ ನಾವಿದ್ದೇವೆ. ಧರ್ಮಗಳು ನಮಗೆ ಪರಿಪೂರ್ಣತೆಯನ್ನು ನೀಡುತ್ತದೆ. ಜಾತಿ ಭೇದ ಮರೆತು ಸಹಬಾಳ್ವೆಯಿಂದ ನಡೆಸಬೇಕು ಎಂದು ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಪರಮಪೂಜ್ಯ ಡಾ.ಗೀವರ್ಗೀಸ್ ಮಾರ್ ಮಕಾರಿಯಸ್ ಬಿಷಪ್ ಸದ್ಭಾವನ ಸಮಾವೇಶವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸದಾನಂದ ಗೌಡ ಸಾಂತ್ಯಡ್ಕ ಹಿಂದೂ ಧರ್ಮದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾದ ಗೌರಿ ಗಣೇಶ ಉತ್ಸವದ ವಿಚಾರಧಾರೆಯೊಂದಿಗೆ ಮಾತನಾಡುತ್ತಾ ಧರ್ಮ ಎಂದರೆ ಸಮಾಜದಲ್ಲಿ ಹಸಿದವನಿಗೆ ಅನ್ನ ನೀಡುವುದೇ ಧರ್ಮ, ತುಳಿತಕ್ಕೆ ಒಳಗಾದವನಿಗೆ ಸಹಾಯ ನೀಡುವುದೇ ಧರ್ಮ. ಸಮಾಜದಲ್ಲಿ ಅತ್ಯುತ್ತಮ ಕೆಲಸ ಮಾಡಿದರೆ ಮಾನವನಾಗುತ್ತಾನೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾರಾದರೂ ಒಂದು ಬುದ್ಧಿ ಮಾತು ಹೇಳಿದರೆ ಅದನ್ನು ಆಲೋಚಿಸಿ ತಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಕಿವಿಮಾತು ಹೇಳಿದರು.
ಬದ್ರಿಯಾ ಜುಮ್ಮಾ ಮಸೀದಿ ನೆಲ್ಯಾಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಇರ್ಷಾದ್ ಮಾತನಾಡಿ ನಾವುಗಳು ನಮ್ಮ ನಮ್ಮ ಧರ್ಮವನ್ನು ಅನುಕರಣೆ ಮಾಡಬೇಕು. ತನ್ನ ನಾಲಿಗೆ ಹಾಗೂ ಕೈಯಿಂದ ಯಾರಿಗೂ ತೊಂದರೆ ಕೊಡದೇ ಇರುವವನೇ ನಿಜವಾದ ಮುಸಲ್ಮಾನ. ಮನುಷ್ಯನ ಮುಂದೆ ಮನುಷ್ಯ ಆಗದಿದ್ದರೆ ಆತ ಮನುಷ್ಯನೇ ಅಲ್ಲ. ನಾವೆಲ್ಲ ಧರ್ಮದ ಚೌಕಟ್ಟನ್ನು ಅನುಕರಣೆ ಮಾಡಬೇಕು ಎಂದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರು ನಾವು ಯಾವ ದೇವರಿಗೂ ಪ್ರಾರ್ಥಿಸಿದರೂ ಅದು ಕೊನೆಗೆ ಮುಟ್ಟುವುದು ಒಬ್ಬನಿಗೆ. ಹೊಸ ಜಗತ್ತಿಗೆ ನಾಗರಿಕತೆಯನ್ನು ತಯಾರು ಮಾಡುವುದು ಶಿಕ್ಷಕರ ಕೆಲಸ ಎಂದು ಹೇಳಿ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕರಾದ ರೇ.ಫಾ.ಝಕರಿಯಾಸ್ ನಂದಿಯಾಟ್, ರೆಂಜಿಲಾಡಿ ಬೀಡಿನ ತಮ್ಮಯ್ಯ ಬಲ್ಲಾಳ್, ನಿವೃತ್ತ ಶಿಕ್ಷಕ ಜನಾರ್ದನ ಪಾಣೆಮಜಲು, ರೇ. ಫಾ.ವಿ.ಸಿ.ಮಾಣಿ ಕೂರ್ ಎಪಿಸ್ಕೂಪ, ರೇ.ಫಾ.ತೋಮಸ್ ಕುಯಿನಾಪುರತ್ತ್, ರೇ.ಫಾ.ಮ್ಯಾಥ್ಯೂ ಕೊಯಿನಾಪುರತ್ತ್ ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ:
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮೀನಾಡಿ ಸರಕಾರಿ ಶಾಲೆಯ ಶಿಕ್ಷಕ ಗೋವಿಂದ ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಶಿಕ್ಷಕಿಯರು ಪ್ರಾರ್ಥಿಸಿದರು, ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್., ಸ್ವಾಗತಿಸಿ. ಶಾಲಾ ಮುಖ್ಯೋಪಾಧ್ಯರಾದ ಸುಬ್ರಹ್ಮಣ್ಯ ಭಟ್ ವಂದಿಸಿದರು. ಶಿಕ್ಷಕರಾದ ತೋಮಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಸಹಭೋಜನ ನೀಡಲಾಯಿತು.