ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

ಶೇರ್ ಮಾಡಿ

ಆಲಂಕಾರು: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಆಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇಲ್ಲಿ ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದ ಆಲಂಕಾರು ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಸದಾನಂದ ಆಚಾರ್ಯರು ಮಾತನಾಡುತ್ತಾ “ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆಯನ್ನು ಮೂಡಿಸುತ್ತದೆ. ಯಾವಾಗ ಒಬ್ಬ ವ್ಯಕ್ತಿ ಸಣ್ಣ ಪ್ರಾಯದಲ್ಲೇ ಇಂಥಹ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾನೋ, ಆಗ ಅದು ಆತನ ಮುಂದಿನ ಜೀವನದಲ್ಲೂ ಪ್ರಭಾವವನ್ನು ಬೀರುತ್ತದೆ. ಈ ರೀತಿಯ ಮೌಲ್ಯಗಳನ್ನು ಕಲಿಸುವ ಈ ಶಿಬಿರವು ಯಶಸ್ವಿಯಾಗಲಿ” ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಭಾ ಇದರ ನಿರ್ದೇಶಕರಾದ ಕೃಷ್ಣ ಶೆಟ್ಟಿಯವರು ಮಾತನಾಡುತ್ತಾ “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಾಜಸೇವೆ, ವ್ಯಕ್ತಿತ್ವ ನಿರ್ಮಾಣದಂತಹ ವಿಷಯಗಳಿಗೆ ಆದ್ಯತೆಯನ್ನು ನೀಡುತ್ತದೆ. ಒಬ್ಬ ಸ್ವಯಂ ಸೇವಕನು ಇಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಖಂಡಿತವಾಗಿಯೂ ಸಾಧಿಸುತ್ತಾನೆ. ಅದಲ್ಲದೆ ಮುಂದೆ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಎನ್.ಎಸ್.ಎಸ್ ಸ್ವಯಂ ಸೇವಕ ಏರುತ್ತಾನೆ ಮತ್ತು ಯಶಸ್ವಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ ಎಂಬುದಕ್ಕೆ ಹಲವು ಸಾಕ್ಷಿಗಳನ್ನು ನಾವು ನೀಡಬಹುದು. ಹಾಗಾಗಿ ವಿದ್ಯಾರ್ಥಿಗಳೆಲ್ಲರೂ ಶ್ರಮದಾನ ಮೂಲಕ, ಸಮಾಜದೊಂದಿಗೆ ಬೆರೆಯುವ ಮೂಲಕ, ವಿಚಾರ ಗೋಷ್ಠಿಗಳ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ನಿರಂತರ ಸಾಗುವಂತಾಗಲಿ” ಎಂದು ಹೇಳಿದರು.

ವೇದಿಕೆಯಲ್ಲಿದ್ದ ಅತಿಥಿಗಳಾದ ಶ್ರೀ.ಭಾ.ಹಿ.ಪ್ರಾ.ಶಾಲೆಯ ಗೌರವಾಧ್ಯಕ್ಷರಾದ ಕೃಷ್ಣ ಕುಮಾರ್ ಅತ್ರಿಜಾಲು, ಶ್ರೀ.ಭಾ.ಹಿ.ಪ್ರಾ.ಶಾಲೆಯ ಕಾರ್ಯದರ್ಶಿಗಳಾದ ಇಂದುಶೇಖರ ಶೆಟ್ಟಿ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಣ್ಣ ಗೌಡ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ಪ್ರಶಾಂತ್ ರೈ ಮನವಳಿಕೆ ಶಿಬಿರಕ್ಕೆ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಬಿರದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಕೆ ಯವರು ಮಾತನಾಡುತ್ತಾ ” ರಾಷ್ಟ್ರೀಯ ಸೇವಾ ಯೋಜನೆಯು ನನಗಲ್ಲ, ನಿಮಗೆ ಎಂಬ ಧೇಯವಾಕ್ಯವನ್ನಿಟ್ಟುಕೊಂಡು ಮುನ್ನಡೆಯುವ ಸಂಸ್ಥೆ. ಯಾರೆಲ್ಲಾ ಈ ಎನ್.ಎಸ್.ಎಸ್ ನೊಂದಿಗೆ ಜೋಡಿಸಿಕೊಂಡಿದ್ದಾರೋ, ಅಂಥವರ ವ್ಯಕ್ತಿತ್ವದಲ್ಲಿ ಮಹತ್ತರವಾದ ಬೆಳವಣೆಗೆ ಆಗುತ್ತದೆ. ಈ ಬೆಳವಣಿಗೆಯ ಪ್ರಕಟ ಈ ಕ್ಷಣದಲ್ಲಿ ಆಗದಿದ್ದರೂ, ಮುಂದಿನ ಜೀವನದಲ್ಲಿ ನಿಖರವಾಗಿಯೂ ವ್ಯಕ್ತಿತ್ವದಲ್ಲಿ ಆಗಲಿದೆ. ಹಾಗಾಗಿ ಈ ಶಿಬಿರದ ಸದ್ಬಳಕೆ ಮಾಡಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಸರ್ವ ರೀತಿಯಲ್ಲಿ ಉನ್ನತೀಕರಿಸಿಕೊಳ್ಳಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಿಬಿರ ನಾಯಕ ಶರತ್‍ಚಂದ್ರ ಮತ್ತು ನಾಯಕಿ ಮೇಘ, ಶಿಬಿರಾಧಿಕಾರಿ ಶ್ರೀ ತಿಲಕಾಕ್ಷ ಕೆ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರಾದ ಶ್ರೀ ಗುಡ್ಡಪ್ಪ ಬಲ್ಯ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಮೀಕ್ಷಾ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು. ಶಿಬಿರಾಧಿಕಾರಿ ಶ್ರೀ ತಿಲಕಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಬಿರಾರ್ಥಿ ಅನನ್ಯಾ ವಂದಿಸಿದರು. ಕಾಲೇಜಿನ ಉಪನ್ಯಾಸಕರಾದ ಶ್ರೀ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!