ಅರಸಿನಮಕ್ಕಿ: ಪಂಚಾಯಿತಿನಿಂದ ನಡೆಸಲಾದ ಹಸಿ ಮೀನು ಮಾರಾಟದ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದೆ ತಮಗೆ ಮೋಸವಾಗಿದೆ ಎಂದು ಬಿಡ್‌ದಾರರು ಆರೋಪಿಸಿದರೆ. ಆದರೆ ತಾವು ನಿಯಮಾವಳಿ ಪ್ರಕಾರವೇ, ದಾಖಲೆಯೊಂದಿಗೆ ಈ ಪ್ರಕ್ರಿಯೆಯನ್ನು ನಡೆಸಿದ್ದೇವೆ ಎಂದು ಪಂಚಾಯತ್ ಅಧ್ಯಕ್ಷರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಘಟನೆ ಸೆಪ್ಟೆಂಬರ್ 30ರಂದು ಅರಸಿನಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಬಿಡ್‌ದಾರರ ಹಾಗೂ ಪಂಚಾಯತ್‌ನ ನಡುವಿನ ಸಂಘರ್ಷವು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಪ್ರಕರಣದ ವಿವರ:
ಹಸಿ ಮೀನು ಮಾರಾಟ ಹಕ್ಕಿಗಾಗಿ ಕಳೆದ ಮೂರು ತಿಂಗಳ ಹಿಂದೆ ಟೆಂಡರ್ ಪ್ರಕ್ರಿಯೆ ಕಾರ್ಯ ಆರಂಭಗೊಂಡಿದ್ದು ಆರಂಭದಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಮೊತ್ತಕ್ಕೆ ಟೆಂಡರ್ ಆರಂಭಗೊಂಡಿತು. ಈ ಸಂದರ್ಭದಲ್ಲಿ ಬಿಡ್‌ದಾರರು 50,000 ದಿಂದ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ಅಧ್ಯಕ್ಷ ನವೀನ್ ಕೆ., ಈ ವಿಷಯದ ಬಗ್ಗೆ ಪಂಚಾಯತ್ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು.
ನಂತರ ನಡೆದ ಸಭೆಯಲ್ಲಿಯೂ ಇದೇ ಮೊತ್ತವು ಕೇಳಿ ಬಂದಾಗ ಅಲ್ಲಿಯೂ ಬಿಡ್‌ದಾರರು ಹರಾಜು ಪ್ರಕ್ರಿಯೆ ನಡೆಸಲು ಸಾಧ್ಯವಾಗದಿದ್ದಾಗ. ಈ ಸಂದರ್ಭದಲ್ಲಿ ಅಧ್ಯಕ್ಷರು ಮುಂದಿನ ಕ್ರಮಕ್ಕಾಗಿ ಮುಚ್ಚಿದ ಕವರಿನಲ್ಲಿ ಬಿಡ್‌ದಾರರು 1.5 ಲಕ್ಷಕ್ಕಿಂತ ಹೆಚ್ಚು ಬಿಡ್ ಹಾಕಿ ಅದರಲ್ಲಿ ಯಾರು ಅತಿ ಹೆಚ್ಚು ಮೊತ್ತದ ಟೆಂಡರ್ ಮೊತ್ತವನ್ನು ಹಾಕಿರುತ್ತಾರೋ ಅವರಿಗೆ ಹಸಿ ಮೀನು ಮಾರುಕಟ್ಟೆಯ ಒಂದು ವರ್ಷದ ಹಕ್ಕನ್ನು ನೀಡಲಾಗುವುದು ಎಂದು ಹೇಳಿದರು. ಹಾಗೂ ಸೆಪ್ಟೆಂಬರ್ 30ರ ಸಂಜೆ 4:30ರ ಒಳಗಾಗಿ ಬಿಡ್ ನ ಮೊತ್ತವನ್ನು ನಮೂದಿಸಿ ಮುಚ್ಚಿದ ಕವರನ್ನು ಪಂಚಾಯತ್ ಗೆ ನೀಡಬೇಕಾಗಿದ್ದು. ಅದೇ ದಿನ ಸಂಜೆ 4:30ಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದರು. ಆ ಪ್ರಕಾರ ಸೆಪ್ಟೆಂಬರ್ 30ರಂದು ಸಂಜೆ 4:30ರ ನಂತರ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳೊಳಗೊಂಡ ತಂಡವು ಟೆಂಡರ್ ಪ್ರಕ್ರಿಯೆಯನ್ನು ಪಂಚಾಯತ್‌ನಲ್ಲಿ ಪೂರ್ಣಗೊಳಿಸಿ ಪವನ್ ಕುಮಾರ್ ಎಂಬಾತನಿಗೆ ಎರಡು ಲಕ್ಷದ ಐದು ಸಾವಿರಕ್ಕೆ ಮಾರುಕಟ್ಟೆ ಹಕ್ಕನ್ನು ಅಂತಿಮಗೊಳಿಸಿತ್ತು.
ಆದರೆ ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಿ ಬಿಡ್‌ದಾರರ ಸಮ್ಮುಖದಲ್ಲಿ ನಡೆಯದೇ ಪಂಚಾಯತ್ ಅಧಿಕಾರಿ ಹಾಗೂ ಆಡಳಿತ ಮಂಡಳಿ ಮಾತ್ರ ಸೀಮಿತವಾಗಿ ನಡೆದಿರುವುದು ಉಳಿದ ಬಿಡ್‌ದಾರಿಗೆ ಅನುಮಾನವನ್ನು ಹುಟ್ಟು ಹಾಕಿದೆ. ಹಾಗೂ ಪಂಚಾಯತ್‌ನ ಈ ನಡೆಗೆ 7 ಬಿಡ್‌ದಾರರು ಆಕ್ಷೇಪವೆತ್ತಿದ್ದಾರೆ. ಆದರೆ ಪಂಚಾಯತ್ ಅಧ್ಯಕ್ಷರು ಮಾತ್ರ ತಾವು ನಡೆಸಿದ ಪ್ರಕ್ರಿಯೇ ಸರಿ ಇದೆ ಅದಕ್ಕೆ ಬೇಕಾದಂತಹ ದಾಖಲೆಗಳು ನಮ್ಮಲ್ಲಿವೆ ಎಂದು ಮಾಧ್ಯಮಕ್ಕೆ ತಿಳಿಸಿದರು.
ಹರಾಜು ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ ಬಿಡ್‌ದಾರನ ಮಾತು:
ಸೆಪ್ಟೆಂಬರ್ 30ರಂದು ಸಂಜೆ ಅರ್ಜಿ ಸಲ್ಲಿಸಲು ಹೋದವ ನಾನು. ನನ್ನ ನಂತರ ಪಂಚಾಯಿತಿ ಒಳಗೆ ಅರ್ಜಿ ಸಲ್ಲಿಸಲು ಯಾರು ಬಂದಿರಲಿಲ್ಲ. ಈ ಸಂದರ್ಭದಲ್ಲಿ ಪಿಡಿಒ ಅವರಲ್ಲಿ ಒಟ್ಟು ಎಷ್ಟು ಬಿಡ್‌ದಾರರ ಹೆಸರುಗಳಿವೆ ಎಂದು ವಿಚಾರಿಸಿದೆ, ಆಗ ಅವರು 7 ಅರ್ಜಿದಾರರ ಹೆಸರನ್ನು ತೋರಿಸಿದ್ದರು. ನೀವು ನಿಗದಿಪಡಿಸಿದ ಸಮಯವಾಗುತ್ತಾ ಬಂತಲ್ಲ ಇನ್ನು ಅರ್ಜಿ ಸಲ್ಲಿಸಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದೆ, ಇದಕ್ಕವರು ಇನ್ನು ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ ಎಂದರು. ಅದು ಅಲ್ಲದೆ ಇಲ್ಲಿ ನಿಲ್ಲಬೇಡಿ ಕೆಳಗೆ ಹೋಗಿ ನಾವು ಪಂಚಾಯತ್ ವತಿಯಿಂದಲೇ ಹರಾಜು ಪ್ರಕ್ರಿಯೆ ಮಾಡುತ್ತೇವೆ ಎಂದರು. ನಾವೇ ಈ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಲಿದ್ದೇವೆ ಎಂದರು. ಅರ್ಜಿದಾರರಾದ ನಮ್ಮ ಸಮ್ಮುಖದಲ್ಲಿ ಮುಚ್ಚಿದ ಕವರನ್ನು ಏಕೆ ತೆರೆಯಲಿಲ್ಲ. ಅಂತಿಮ ಹಂತದಲ್ಲಿ ಏಳೇ ಇದ್ದ ಅರ್ಜಿಗಳು ಒಮ್ಮಿಂದೊಮ್ಮೆಗೆ 10 ಅರ್ಜಿಗಳಾಗಲು ಹೇಗೆ ಸಾಧ್ಯ. ಅದು ಅಲ್ಲದೆ ಹರಾಜು ಪ್ರಕ್ರಿಯೆಯಲ್ಲಿ ಟೆಂಡರ್ ವಹಿಸಿಕೊಂಡವನ ಹೆಸರು ಆ ಏಳು ಅರ್ಜಿಗಳಲ್ಲಿ ಇರಲೇ ಇಲ್ಲ. ಅಂತಿಮ ಕ್ಷಣದಲ್ಲಿ ಅದು ಹೇಗೆ ಬಂತು ಎನ್ನುವುದು ಅನುಮಾನ. ವಿಡಿಯೋ ಚಿತ್ರೀಕರಣದ ಬದಲು ಸ್ಥಳದಲ್ಲಿದ್ದ ನಮ್ಮ ಎದುರೇ ಪ್ರಕ್ರಿಯೆ ನಡೆಸಬಹುದಿತ್ತಲ್ಲ? ಹರಾಜು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪಂಚಾಯತ್ ಅಧಿಕಾರಿಗಳು ಮತ್ತು ಆಡಳಿತ ಸಮಿತಿ ನಡೆಸದೆ ಇರುವುದಕ್ಕೆ ಕಾರಣವೇನೆಂಬುದು ಬಹಿಂಗಪಡಿಸಲಿ. ಕಾನೂನಿನಲ್ಲಿ ಈ ರೀತಿಯ ಪ್ರಕ್ರಿಯೆಗೆ ಅವಕಾಶವಿದೆಯೇ? ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ಮೌಖಿಕ ದೂರು ನೀಡಿದ್ದೇವೆ.
ಸೆಪ್ಟೆಂಬರ್ 30ರಂದು ಬಿಡ್‌ದಾರರ ಎದುರು ಬಹಿರಂಗವಾಗಿ ಏಲಂ ಪ್ರಕ್ರಿಯೆ ನಡೆಯದೆ ಇದ್ದದ್ದು ಗೊಂದಲಕ್ಕೆ ಕಾರಣವಾಯಿತು. ಆಡಳಿತ ಮಂಡಳಿಯ ಅಂತಿಮ ನಿರ್ಧಾರದಿಂದ ಹೀಗಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಇನ್ನೊಮ್ಮೆ ಬಹಿರಂಗ ಏಲಂ ಪ್ರಕ್ರಿಯೆಯನ್ನು ನಡೆಸಿಯೇ ಹಸಿ ಮೀನು ಮಾರಾಟದ ಹಕ್ಕನ್ನು ಅರ್ಹರಾದವರಿಗೆ ನೀಡಲಿದ್ದೇವೆ. ರವಿ ನಿಂಗಣ್ಣನವರ್, ಪಿಡಿಒ ಗ್ರಾಮ ಪಂಚಾಯತ್ ಅರಸಿನಮಕ್ಕಿ.