ನೆಲ್ಯಾಡಿ: ಶಿರಾಡಿ ಹಾಗೂ ಶಿಶಿಲ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಹೆಬ್ಬಲಸು ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಸಲಾಗಿದ್ದ ವಾಹನವನ್ನು ಖಡಕ್ ಹಾಗೂ ಅತ್ಯಂತ ಅನುಭವಿ ಅಧಿಕಾರಿಯಾದ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಮಧುಸೂದನ್ ರವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಮಡಿಕೇರಿಯ ಸಿದ್ದಾಪುರದಲ್ಲಿ ಮುಟ್ಟುಗೋಲು ಹಾಕಿದ ಘಟನೆ ನಡೆದಿದೆ.
2021 ಆಗಸ್ಟ್ 18ರಂದು ಶಿರಾಡಿ ಪ್ರದೇಶದಿಂದ 3 ಹೆಬ್ಬಲಸು ಮರ ಕಳವಾದ ಬಗ್ಗೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳಾದ ಕೋಲ್ಪೆಯ ರಜಾಕ್, ಸಿದ್ದೀಕ್, ಷರೀಫ್ ರನ್ನು ಬಂಧಿಸಲಾಗಿತ್ತು.
ಕೃತ್ಯಕ್ಕೆ ಬಳಸಿದ ಪಿಕ್ ಅಪ್ ವಾಹನ ಪತ್ತೆಯಾಗಿರಲಿಲ್ಲ, ಇದೀಗ ವಾಹನವು ಮಡಿಕೇರಿಯ ಸಿದ್ದಾಪುರದಲ್ಲಿ ಇರುವ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ರವರ ಮಾರ್ಗದರ್ಶನದಂತೆ ಅಧಿಕಾರಿಗಳು ಅಲ್ಲಿಗೆ ತೆರಳಿ ತಿತಿಮತಿ ವಲಯದ ವಲಯಾರಣ್ಯಾಧಿಕಾರಿ ಅಶೋಕ ಹಾಗೂ ಸಿಬ್ಬಂದಿಗಳ ಸಹಾಯ ಪಡೆದು ಕಳ್ಳತನಕ್ಕೆ ಬಳಸಿದ್ದ ಪಿಕಪ್ ಅನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಶಿರಾಡಿ ಉಪವಲಯ ಅರಣ್ಯಾಧಿಕಾರಿ ಧೀರಜ್, ಶಿರಾಡಿ ಅರಣ್ಯ ರಕ್ಷಕ ಸುನಿಲ್ ನಾಯ್ಕ, ಕೊಕ್ಕಡ ಅರಣ್ಯ ರಕ್ಷಕ ಪ್ರಶಾಂತ್ ಮಾಳಗಿ, ರೆಖ್ಯ ಅರಣ್ಯ ರಕ್ಷಕ ನಿಂಗಪ್ಪ ಅವಾರಿ ಪಾಲ್ಗೊಂಡಿದ್ದರು.