
ಮಂಚಿ: ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ, ಲಯನ್ಸ್ ಕ್ಲಬ್ ಕೊಳ್ನಾಡು, ಸಾಲೆತ್ತೂರು ಹಾಗೂ ಜೆಸಿಐ ಜೋಡುಮಾರ್ಗ ನೇತ್ರಾವತಿ ಇವರ ಸಹಯೋಗದಲ್ಲಿ ಮಂಚಿ ಪ್ರೌಢಶಾಲೆಯ ಸಭಾಂಗಣದಲ್ಲಿ ಒಂದು ದಿನದ ಸಭಾ ಕೌಶಲ್ಯ ತರಬೇತಿ ಕಾರ್ಯಾಗಾರ ಹಾಗೂ ನಿವೃತ್ತ ಯೋಧರಿಗೆ ಗೌರವ ಸನ್ಮಾನ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಉಪನ್ಯಾಸಕರಾದ ಡಾ.ನಾಗವೇಣಿ ಮಂಚಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, “ಬಾಲ್ಯದಲ್ಲಿ ಶಿಕ್ಷಕರು ಕಟ್ಟಿಕೊಡುವ ಜೀವನ ಮೌಲ್ಯಗಳು ನಮ್ಮ ಬದುಕನ್ನು ರೂಪಿಸಬಲ್ಲವು. ನಾಲ್ಕು ಗೋಡೆಯೊಳಗಿನ ಪಾಠದ ಉಪದೇಶಗಳ ಬದಲಾಗಿ ತೋರುವ ಪ್ರೋತ್ಸಾಹ, ಸೌಜನ್ಯತೆ, ಪ್ರೀತಿ, ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಬಲ್ಲವು. ಪಾಠ ಪುಸ್ತಕಗಳಿಂದ ಹೆಚ್ಚು ಒಲವು ಕೊಡುತ್ತಿದ್ದ ಚಂದಮಾಮ ದ ಕಥೆಗಳು ಹೆಚ್ಚು ಆಕರ್ಷಿತಗೊಳಿಸಿ ನಮ್ಮನ್ನು ಓದುಗಾರರನ್ನಾಗಿಸಿತು. ಬಾಯಿಪಾಠದ ಗೀಳಿನಿಂದ ಹೊರಬಂದು ಮನನ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಿದ್ದರಿಂದ ಬರಹಗಾರರಾಗಲು ಸಾಧ್ಯವಾಯಿತು.” ಎಂದರು.
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ, ಮಂಚಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಗಣೇಶ್ ಕಾಮತ್ ಪುಚ್ಚೆಕೆರೆ ಮತ್ತು ದಿನೇಶ್ ಎಸ್ ಇರಾ ಇವರನ್ನು ಸನ್ಮಾನಿಸಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿ ಮಂಗಳೂರಿನ ಪ್ರಖ್ಯಾತ ಕಂಪನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಶೇಖ್ ಮೊಯ್ದೀನ್ ಕೆ.ಎಂ. ಮಾತನಾಡಿ, “ಹೈಸ್ಕೂಲ್ ಜೀವನ ಸುಂದರ ಅನುಭವ, ಭವಿಷ್ಯದ ಎಲ್ಲಾ ಹಂತಗಳಿಗೆ ಪಂಚಾಂಗವೆನ್ನಬಹುದಾದ ಆ ಕಾಲದಲ್ಲಿ ನಾವು ಬೆಳೆಸುವ ಸಂಸ್ಕಾರಗಳು ನಮ್ಮ ಜೀವನಕ್ಕೆ ಮೆಟ್ಟಿಲಾಗುತ್ತವೆ. ನಿರ್ದಿಷ್ಟ ಗುರಿಯೊಂದಿಗೆ ಸಾಧಿಸುವ ಛಲವನ್ನು ಹೊಂದಿ ಮುನ್ನಡೆಯಬೇಕಾದದ್ದು ಯುವ ಸಮುದಾಯದ ಧ್ಯೇಯವಾಗಬೇಕು.” ಎಂದರು.

ಲಯನ್ಸ್ ಕ್ಲಬ್ ಎಂಪವರ್ ಯೂತ್ ನ ಜಿಲ್ಲಾ ಸಹ ಸಂಯೋಜಕಿ ಡಾ. ಸ್ನೇಹಾ ಎಂ, ಮಂಚಿ ಕೊಳ್ನಾಡು ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯನಿ ಶ್ರೀಮತಿ ಸುಶೀಲ ವಿಟ್ಲ, ಮಂಚಿ ಪ್ರೌಢಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಕೊಟ್ಟಾರಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು.
ಸಭಾ ಕೌಶಲ್ಯ ತರಬೇತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಡಾ.ರಾಘವೇಂದ್ರ ಹೊಳ್ಳ ಎನ್.,ಇವರು ಭಾಗವಹಿಸಿ ಮಾರ್ಗದರ್ಶನ ನೀಡಿದರು. ನೆರೆದಿದ್ದ ಸುಮಾರು 60 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಂಡರು. ಒಂದು ದಿನ ಪೂರ್ತಿಯಾಗಿ ನಡೆದ ಈ ಕಾರ್ಯಗಾರವು ವಿದ್ಯಾರ್ಥಿಗಳಲ್ಲಿ ಸಭಾ ಕೌಶಲ್ಯವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.ಇದೇ ಸಂದರ್ಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ಸಭಾಧ್ಯಕ್ಷತೆಯನ್ನು ಅಲಂಕರಿಸಿದ ಮಂಚಿ ಕೊಳ್ನಾಡು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ ಹಿರಿಯ ವಿದ್ಯಾರ್ಥಿಗಳ ಸಂಘದ ಧ್ಯೇಯೋದ್ದೇಶಗಳನ್ನು ಸ್ಪಷ್ಟಪಡಿಸಿದರು.
ಜೆಸಿಐ ಜೋಡುಮಾರ್ಗ ನೇತ್ರಾವತಿ ಇದರ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಜಯಪ್ರಕಾಶ್ ರೈ ಮೇರಾವು ವಂದಿಸಿದರು. ಯಕ್ಷಗಾನ ಕಲಾವಿದ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಪುಷ್ಪರಾಜ್ ಕಾರ್ಯಕ್ರಮ ನಿರ್ವಹಿಸಿದರು.




