ನೇಸರ ಡಿ10: ನೆಲ್ಯಾಡಿಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸ್ವ ಉದ್ಯೋಗ ಕಾರ್ಯಾಗಾರ
ನೆಲ್ಯಾಡಿಯ ವಿಶ್ವವಿದ್ಯಾಲಯ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಸ್ವ ಉದ್ಯೋಗದ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ದಿನಾಂಕ 8/12/2021ರಂದು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಜಿರೆಯ ರುಡ್ ಸೆಟ್ ಸಂಸ್ಥೆಯ ಹಿರಿಯ ಸಿಬ್ಬಂದಿ ಶ್ರೀಮತಿ ಅನಸೂಯ ಅವರು ಮಾತನಾಡಿ, ರುಡ್ ಸೆಟ್ ಸಂಸ್ಥೆಯಿಂದ ನೀಡಲಾಗುವ ಸ್ವ ಉದ್ಯೋಗ ತರಬೇತಿಯ ಮಾಹಿತಿಯನ್ನು ನೀಡಿದರು. ಹಾಗೇಯೇ ತರಬೇತಿಯನ್ನು ಪಡೆದುಕೊಂಡು ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮಿರುವ ಸಾಧಕರನ್ನು ಪರಿಚಯಿಸಿದರು. ಆರ್ಥಿಕ ಪರಿಸ್ಥಿತಿ, ಕೌಟುಂಬಿಕ ಹಿನ್ನೆಲೆ ಮತ್ತು ಶೈಕ್ಷಣಿಕ ಹಿನ್ನಲೆ ಇಲ್ಲದಿದ್ದರೂ, ಸ್ವ ಉದ್ಯೋಗದ ಮೂಲಕ ಉತ್ತಮ ಉದ್ಯಮಿಗಳಾಗಿ ಹೊರಹೊಮ್ಮಬಹುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಯೋಜಕರಾದ ಡಾ ಜಯರಾಜ್ ಎನ್ ಮಾತನಾಡಿ, ಸಮಾಜದಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಹೋಗಲಾಡಿಸಲು ಸ್ವಉದ್ಯೋಗದ ಅರಿವನ್ನು ಮೂಡಿಸುವ ಅಗತ್ಯತೆ ಇದೆ. ಪ್ರತಿಯೊಬ್ಬರು ಸ್ವಉದ್ಯೋಗದ ಮೂಲಕ ಯಶಸ್ವಿ ಉದ್ಯಮಿಗಳಾಗಿ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ದಿವ್ಯ ಕೆ. ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಮಾಡಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವಿದ್ಯಾರ್ಥಿನಿಯರಾದ ಅರ್ಪಿತಾ ಸ್ವಾಗತಿಸಿ, ಫಾತಿಮಾತ್ ರಾಹಿಲ ವಂದಿಸಿದರು. ಫಾತಿಮಾತ್ ಮುರ್ಶಿದಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.