ಲೋಕಾರ್ಪಣೆಗೆ ಸಿದ್ದಗೊಂಡ ಕೊಕ್ಕಡದ ನೂತನ ಅಂಬೇಡ್ಕರ್ ಭವನ; ದಶಕಗಳ ಕಾಲದ ಬೇಡಿಕೆ ಈಡೇರಿಕೆ ಸನ್ನಿಹಿತ

ಶೇರ್ ಮಾಡಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶಿಫಾರಸಿನಂತೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 50 ಲಕ್ಷರೂ ಹಾಗೂ ತಾಲೂಕು ಪಂಚಾಯತ್‌ನಿಂದ 10 ಲಕ್ಷ ರೂ ಅನುದಾನ ಮಂಜೂರು

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಹೋಬಳಿ ಕೇಂದ್ರವಾದ ಕೊಕ್ಕಡ ಗ್ರಾಮದಲ್ಲಿ ಏಕಕಾಲಕ್ಕೆ 500 ಜನರ ಸಾಮರ್ಥ್ಯವನ್ನು ಹೊಂದಿರುವ ಸಿದ್ದಗೊಂಡ ಅಂಬೇಡ್ಕರ್ ಭವನ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ಕೊಕ್ಕಡದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವ ಭವನವೊಂದು ನಿರ್ಮಾಣವಾದಂತಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶಿಫಾರಸಿನಂತೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 50 ಲಕ್ಷರೂ ಹಾಗೂ ತಾಲೂಕು ಪಂಚಾಯತ್‌ನಿಂದ 10 ಲಕ್ಷ ರೂ ಅನುದಾನ ಮಂಜೂರುಗೊಂಡು, ಜಿಲ್ಲಾ ಪಂಚಾಯತ್ ಇಂಜಿನಿಯರ್ ಸುಜಿತ್ ಕುಮಾರ್ ಮೂಲಕ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಭವಿಷ್ಯದಲ್ಲಿ ಇದೇ ಕಟ್ಟಡವನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋಗಲು ಅನುಕೂಲವಾಗುವ ರೀತಿಯಲ್ಲಿಯೇ ಇದಕ್ಕೆ ಅಡಿಪಾಯ ಹಾಕಿದ್ದು, ಮುಂದಿನ ತಿಂಗಳೇ ಲೋಕಾರ್ಪಣೆ ಗೊಳ್ಳಲು ಬರದಿಂದಲೇ ಕೆಲಸ ಕಾರ್ಯಗಳು ನಡೆಯುತ್ತಿದೆ.

ದಶಕಗಳ ಕಾಲದ ಬೇಡಿಕೆ ಈಡೇರಿಕೆ
ಕೊಕ್ಕಡದಲ್ಲೊಂದು ಸುಸಜ್ಜಿತ ಅಂಬೇಡ್ಕರ್ ಭವನ ಬೇಕೆನ್ನುವುದು ಕಳೆದ 10 ವರ್ಷಗಳ ಹಿಂದಿನಿಂದಲೂ ಇಲ್ಲಿ ಕೇಳಿ ಬರುತ್ತಿದ್ದ ಬೇಡಿಕೆ. ಈಗಾಗಲೇ ಇಲ್ಲೊಂದು ಅಂಬೇಡ್ಕರ್ ಭವನವಿದ್ದು ಕೇವಲ 150 ಜನ ಸಾಮರ್ಥ್ಯವನ್ನು ಹೊಂದಿದ್ದು ಅಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ಕಷ್ಟವಾಗುತ್ತಿತ್ತು. ಇದೀಗ ಇದರ ಪಕ್ಕದಲ್ಲೇ, ಅಂದರೆ ಕೊಕ್ಕಡ ಮುಖ್ಯರಸ್ತೆಯಿಂದ 200ಮೀ ದೂರದಲ್ಲಿ 10 ಸೆಂಟ್ಸ್ ಜಾಗದಲ್ಲಿ 2927ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ವೇದಿಕೆ, ಹಾಲ್ ಸಹಿತ 4 ಕೊಠಡಿ, ಶೌಚಾಲಯ, ಇಂಟರ್ ಲಾಕ್ ಯುಕ್ತ ಹೊರಾಂಗಣ, ನೀರಿನ ವ್ಯವಸ್ಥೆ, ಹೀಗೆ ಹಾಗೂ ಸಂಪೂರ್ಣ ಸಕಲ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮಕ್ಕೆ ಈ ಭವನ ಪ್ರಯೋಜನವಾಗಲಿದೆ. ಹಾಗೂ ಇದರೊಂದಿಗೆ ಇದನ್ನು ಸಂಪರ್ಕಿಸುವ 200ಮೀ ರಸ್ತೆಯನ್ನೂ ಸರ್ವಋತು ರಸ್ತೆಯಾಗಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

ಮುಂದೆ ಸಾರ್ವಜನಿಕರಿಗೆ ಆಗುವ ಅನುಕೂಲತೆಗಳು
ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗೆ ಮದುವೆ, ನಿಶ್ಚಿತಾರ್ಥ, ಸಮಾರಂಭ ಹೀಗೆ ಅನೇಕ ಕಾರ್ಯಕ್ರಮಗಳು ಜನ ಹಿತ ದೃಷ್ಟಿಯಿಂದ ಕಾರ್ಯಕ್ರಮ ನಡೆಸಲು ಅನುಕೂಲ ಆಗಲಿದೆ. ಸರಕಾರಿ ಮಟ್ಟದ ಬೃಹತ್ ಕಾರ್ಯಕ್ರಮಗಳಿಗೆ ಇನ್ನು ಮುಂದೆ ಸ್ಥಳದ ಪ್ರಶ್ನೆ ಉದ್ಭವಿಸುವುದಿಲ್ಲ. ಎಲ್ಲಾ ಸಮುದಾಯದವರು ಒಂದೇ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇದು ಸಹಕಾರಿ. ಇಲಾಖೆಗಳ ವತಿಯಿಂದ ಆಗಾಗ್ಗೆ ನಡೆಯುವ ಶಿಬಿರಗಳಿಗೂ ಈ ಭವನದ ನಿರ್ಮಾಣದಿಂದ ಸಹಕಾರಿ.

ಇಡೀ ಕೊಕ್ಕಡದ ಜನತೆಯನ್ನು ಒಂದೇ ಸೂರಿನಡಿ ಒಟ್ಟು ಸೇರಿಸಿ ಕಾರ್ಯಕ್ರಮ ನಡೆಸಲು ಸುಸಜ್ಜಿತ ಕಟ್ಟಡವಿರಲಿಲ್ಲ. ಗ್ರಾಮಸ್ಥರ ದಶಕದ ಬೇಡಿಕೆಗೆ ಈಡೇರಿ ಮುಂದಿನ ತಿಂಗಳೇ ಇದನ್ನು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡುವಲ್ಲಿ ಕೆಲಸ ಕಾರ್ಯಗಳು ಕಾರ್ಯಪ್ರವೃತ್ತವಾಗುತ್ತಿದೆ.

Leave a Reply

error: Content is protected !!