ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ದೈವದೇವರ ಆರಾಧನೆ ಜೊತೆಗೆ ದೀಪಾವಳಿಯ ವಿಶೇಷ ಆಚರಣೆ

ಶೇರ್ ಮಾಡಿ

ಕೊಕ್ಕಡ: ದೀಪಾವಳಿ ಅಮಾವಾಸ್ಯೆಯಂದು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಎಲ್ಲಾ ದೇವಸ್ಥಾನದಲ್ಲಿ ಮರ ಸ್ಥಾಪಿಸುವ ಮೂಲಕ ಬಲಿಂದ್ರನನ್ನು ಪೂಜಿಸಲಾಗುತ್ತದೆ.
ಎಲ್ಲಾ ದೇವಾಲಯಗಳಲ್ಲೂ ಹೊಂಗಾರೆ (ಪೊಂಗಾರೆ) ಮರವನ್ನೇ ಆಯ್ದುಕೊಂಡು ಬಲೀಂದ್ರನನ್ನು ಸ್ಥಾಪಿಸಲಾಗುತ್ತದೆ. ಪುರಾಣಗಳಲ್ಲಿ ಈ ಮರಕ್ಕೆ ಸಂಜೀವಿನಿ ಮರ ಎನ್ನುವ ಉಲ್ಲೇಖವಿದೆ ಎಂದು ಹೇಳಲಾಗುತ್ತಿದೆ. ಈ ಮರದ ಮೇಲ್ಭಾಗದಲ್ಲಿ ಮರದ ಅಟ್ಟೆಗಳನ್ನು ಕೂಡಿಸು ಚಿಹ್ನೆಯ ಆಕಾರದಲ್ಲಿ ಒಂದರ ಮೇಲೊಂದರಂತೆ ಜೋಡಿಸಿಕೊಂಡು ಇಡಲಾಗುತ್ತದೆ.
ಇಂತಿಷ್ಟೇ ಅಳತೆಯ ಮರ ಹಾಗೂ ಇಂತಿಷ್ಟೇ ಅಟ್ಟೆಗಳನ್ನು ಆಯಾಯ ದೇವಸ್ಥಾನದ ಸಂಪ್ರದಾಯದಂತೆ ಹೊಂದಿಸಿಕೊಳ್ಳಲಾಗುತ್ತದೆ.
ಅಮಾವಾಸ್ಯೆ ದಿನ ಸಂಜೆ ದೇವಸ್ಥಾನದಲ್ಲಿ ಮರ ಹಾಕಿದರೆ, ಊರಿನ ಎಲ್ಲಾ ಮನೆಯವರು ಮರುದಿವಸ ಅಂದರೆ ಪಾಡ್ಯ ದಿನ ಮರ ಹಾಕುವುದು ಪದ್ಧತಿ. ಕೆಲವೊಂದು ಮನೆಗಳಲ್ಲಿ ಮರು ದಿವಸವು ಅಮಾವಾಸ್ಯೆ ಇದ್ದರೆ ಬಲಿಂದ್ರ (ಮರ) ಸ್ಥಾಪಿಸುವುದಿಲ್ಲ. ಬದಲಾಗಿ ಅಮಾವಾಸ್ಯೆ ಮುಗಿದ ಮರದಿವಸ ಬಲಿಂದ್ರನನ್ನು ಸ್ಥಾಪಿಸಲಾಗುತ್ತದೆ.

ಇದು ಆಯಾಯ ಮನೆತನದಲ್ಲಿ ಹಿಂದಿನ ಕಾಲದಿಂದ ನಡೆದುಕೊಂಡ ಬಂದಂತಹ ಸಂಪ್ರದಾಯದ ಪ್ರಕಾರವೇ ಇಂದಿಗೂ ಮುಂದುವರಿದುಕೊಂಡು ಹೋಗುತ್ತಿದೆ.
ವಿಶೇಷವೆಂದರೆ ತಂತ್ರ ಸಮುಚ್ಚಯ ಗ್ರಂಥದ ಆಧಾರ ಪ್ರಕಾರ ನಡೆಸಲ್ಪಡುವ ದೇವಾಲಯಗಳು ಈ ದೀಪಾವಳಿಯ ಅಮಾವಾಸ್ಯೆಯ ದಿನದಂದು ನಿತ್ಯ ಬಲಿ ಹಾಗೂ ಉತ್ಸವ ಬಲಿಗಳನ್ನು ಆರಂಭಿಸುತ್ತಾರೆ. ಈ ಅಮಾವಾಸ್ಯೆಯ ದಿನ ಆರಂಭಗೊಂಡ ನಿತ್ಯ ಬಲಿ ಹಾಗೂ ಉತ್ಸವ ಬಲಿಗಳು ನಿರಂತರವಾಗಿ ಪತ್ತನಾಜೆಯವರೆಗೆ ನಡೆದುಕೊಂಡು ಬರುತ್ತದೆ. ಕೆಲವೊಂದು ದೇವಸ್ಥಾನಗಳಲ್ಲಿ ಮಿಥುನ ಸಂಕ್ರಮಣದಂದು ಕೊನೆಗೊಳ್ಳುತ್ತದೆ.
ಅಮಾವಾಸ್ಯೆ ದಿನ ದೇವಸ್ಥಾನಗಳಲ್ಲಿ ಮರ ಹಾಕಿ ಸ್ಥಾಪಿಸಿದರೆ ಮರು ದಿವಸ ಅಂದರೆ ಪಾಡ್ಯದ ದಿನ ದೇವಸ್ಥಾನದಲ್ಲಿರುವ ಎಲ್ಲಾ ದೈವಗಳಿಗೂ ಪರ್ವಗಳನ್ನು ನೀಡುವುದು ಒಂದು ವಿಶೇಷ ಆಚರಣೆ.
ಆದರೆ ಈ ಬಾರಿ ಅಮಾವಾಸ್ಯೆಯ ಮರುದಿನ ಗ್ರಹಣವಿರುವ ಕಾರಣ ಗ್ರಹಣದ ಮರು ದಿವಸ ದೇವಸ್ಥಾನಗಳಲ್ಲಿ ಪರ್ವಗಳನ್ನು ನೀಡಲಾಗುತ್ತದೆ. ದೀಪಾವಳಿ ಅಮಾವಾಸ್ಯೆಯಿಂದ ಉತ್ಥಾನದ್ವಾದಶಿ ತನಕ ತುಳಸಿ ಪೂಜೆ ಹಾಗೂ ಬಲಿ ಪಾಡ್ಯಮಿ ದಿನದಂದು ಗೋಪೂಜೆ ದೀಪಾವಳಿ ಆಚರಣೆ ವಿಶೇಷಗಳಲ್ಲೊಂದು.

ಹೀಗೆ ಗ್ರಾಮೀಣ ಭಾಗಗಳಲ್ಲಿ ದೈವದೇವರ ಆರಾಧನೆ ಜೊತೆಗೆ ದೀಪಾವಳಿಯು ಮನೆಮಂದಿಗೆಲ್ಲ ದೊಡ್ಡ ಹಬ್ಬವಾಗಿ ಪರಿಗಣನೆಗೆ ಬರುತ್ತದೆ.

See also  ಜೇಸಿಐ ಉಪ್ಪಿನಂಗಡಿ ವತಿಯಿಂದ "ಅರಣ್ಯ ಬೆಳೆಸೋಣ ಪ್ರಕೃತಿ ಉಳಿಸೋಣ" ಕಾರ್ಯಕ್ರಮಕ್ಕೆ ಚಾಲನೆ

Leave a Reply

Your email address will not be published. Required fields are marked *

error: Content is protected !!