ನೆಲ್ಯಾಡಿ : ನೆಲ್ಯಾಡಿಯ ಸಾಫಿಯೆನ್ಸಿಯಾ ಬೆಥನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕನ್ನಡ ಸಂಘ ಇದರ ಸಹಯೋಗದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.
ರಾಷ್ಟ್ರ ಕವಿ ಕುವೆಂಪುರವರು ರಚಿಸಿದ ನಾಡ ಗೀತೆ, ಹುಯಿಳಗೊಳ ನಾರಾಯಣ ರಾವ್ ರವರ ಉದಯವಾಗಲಿ ನಮ್ಮ ಕನ್ನಡ ನಾಡು, ಕುವೆಂಪುರವರು ರಚಿಸಿದ ಬಾರಿಸು ಕನ್ನಡ ಡಿಂಡಿಮವ, ಡಿ.ಎಸ್ ಕರ್ಕಿ ರವರ ಹಚ್ಚೇವು ಕನ್ನಡದ ದೀಪ, ಚೆನ್ನವೀರ ಕಣವಿರವರ ವಿಶ್ವ ವಿನೂತನ, ಡಾ.ರಾಜ್ ಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿ ಕನ್ನಡ ಪ್ರೇಮವನ್ನು ಮೂಡಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲರಾದ ವಂದನಿಯ ಧರ್ಮಗುರುಗಳಾದ ಜಿಜನ್ ಅಬ್ರಹಾಂ ರವರು ಸಂಕಲ್ಪ ವಿಧಿ ಬೋಧಿಸಿದರು. ನಂತರ ಮಾತನಾಡಿ “ಕನ್ನಡಿಗರು ಎನ್ನುವುದು ನಮ್ಮ ಹೆಮ್ಮೆ, ಎಲ್ಲರೂ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು, ಕೋಟಿ ಕಂಠ ಗಾಯನ ನಮ್ಮಲ್ಲಿ ಕನ್ನಡವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿ” ಎಂದು ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಹಾಗೂ ಕನ್ನಡ ಸಂಘದ ಸಂಯೋಜಕರಾದ ಉಪನ್ಯಾಸಕ ವಿಶ್ವನಾಥ್ ಎಸ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಯೋಜಕರಾದ ಉಪನ್ಯಾಸಕಿ ಶ್ರೀಮತಿ ರಕ್ಷಾ ಜೈನ್ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಸಾಯಿದೃತಿ ವಿ. ಶೆಟ್ಟಿ ನಿರೂಪಿಸಿ ವಿದ್ಯಾರ್ಥಿ ಸಂಯುಕ್ತ್ ಜೈನ್ ಎಲ್ಲರನ್ನು ವಂದಿಸಿದರು.