ಗೋಳಿತ್ತೊಟ್ಟು ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ, ಸಾಧನ ಸಮಾವೇಶ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ಇದರ ಗೋಳಿತ್ತೊಟ್ಟು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಧನ ಸಮಾವೇಶ ನ.11ರಂದು ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಕಾಂಚನ ಪೆರ್ಲ ಷಣ್ಮುಖ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಈಗ ಜನರ ಜೀವನಕ್ಕೆ ಬೆಳಕಾಗಿ ಎಲ್ಲೆಡೆ ಪ್ರಜ್ವಲಿಸುತ್ತಿದ್ದು, ಜಗತ್ತಿನ ಅಂಧಕಾರವನ್ನು ತೊಲಗಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆ ಖಾವಂದರ ದೂರದೃಷ್ಠಿಯ ಫಲವಾಗಿ ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿ ಮೂಡಿಬಂದಿದೆ, ಈ ಯೋಜನೆಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು ಆರ್ಥಿಕ ಸ್ವಾವಲಂಬನೆಯೊಂದಿಗೆ ಗೌರವಯುತ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಉಡುಪಿ ಕಛೇರಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್‌ರವರು ನೂತನ ಒಕ್ಕೂಟಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿ, ಖಾವಂದರು ಈ ಬಾರಿ ವಿಶೇಷವಾಗಿ ವಿಕಲಚೇತನರಿಗೆ ಮಾಶಾಸನ ನೀಡುವ ಜನಮಂಗಳ ಹಾಗೂ ಮನೆಯಿಲ್ಲದ ಬಡವರಿಗೆ ಮನೆ ನೀಡುವ ವಾತ್ಸಲ್ಯ ಯೋಜನೆಯನ್ನು ಜಾರಿ ತಂದಿದ್ದಾರೆ. ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ತಳಮಟ್ಟದ ಜನರಿಗೆ ತಲುಪಿಸುವ ಹೊಣೆಗಾರಿಕೆ ಒಕ್ಕೂಟದ ಪದಾಧಿಕಾರಿಗಳ ಮೇಲಿದೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ಟಿ.ನಾರಾಯಣ ಭಟ್ ಮಾತನಾಡಿ, ಯೋಜನೆಯಿಂದ ಇಂದು ಅನೇಕ ಮನೆಗಳಲ್ಲಿ ನೆಮ್ಮದಿ ಸಮೃದ್ಧಿ ತುಂಬಿದೆ, ಸುಸಂಸ್ಕೃತ ಗೌರವಯುತ ಬದುಕಿಗೆ ನಾಂದಿ ಹಾಡಿ ಜನರಲ್ಲಿ ಪರಸ್ಪರ ಸಹಕಾರ, ಮಾನವೀಯ ಮೌಲ್ಯಗಳು ಮೇಲೈಸುತ್ತಿದೆ. ಆರ್ಥಿಕ ಅಭಿವೃದ್ಧಿಗೆ ಪ್ರೇರಣೆಯಾಗಿ ಕೆಲಸ ಮಾಡುತ್ತಾ ಸದೃಢ ಸಮಾಜ ನಿರ್ಮಾಣದೊಂದಿಗೆ ಶಸಕ್ತ ನಾಡು ಕಟ್ಟುವಲ್ಲಿ ಶ್ರಮಿಸುತ್ತಿದೆ ಎಂದರು.
ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಪುತ್ತೂರು ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ಸಾಧನ ಸಂಘಗಳಿಗೆ ಅಭಿನಂದನೆ ಸಲ್ಲಿಸಿದರು.
ಗೋಳಿತೊಟ್ಟು ವಲಯ ಅಧ್ಯಕ್ಷ ವೀರೇಂದ್ರ ಪಾಲೆತಡ್ಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೋಳಿತೊಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಪಠೇರಿ, ಯೋಜನೆಯ ಬಿಸಿ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜನಜಾಗೃತಿಯ ಗೋಳಿತೊಟ್ಟು ವಲಯಾಧ್ಯಕ್ಷ ನೋಣಯ್ಯ ಅಂಬರ್ಜೆ, 1575 ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಆಲಂತಾಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ, ಶಾಲಾ ಮುಖ್ಯ ಶಿಕ್ಷಕಿ ಲವ್ಲೀ ಜೋಸ್ ಅತಿಥಿಗಳಾಗಿ ಮಾತನಾಡಿದರು. ಗೋಳಿತೊಟ್ಟು ಒಕ್ಕೂಟದ ಅಧ್ಯಕ್ಷೆ ಜಯಮಾಲ ಹಾಗೂ ಸಬಳೂರು ಒಕ್ಕೂಟದ ಅಧ್ಯಕ್ಷ ಗಣೇಶ್ ಎರ್ಮಡ್ಕ ಅನಿಸಿಕೆ ವ್ಯಕ್ತಪಡಿಸಿದರು. ವಲಯದ ಒಕ್ಕೂಟಗಳ ಅಧ್ಯಕ್ಷರುಗಳಾದ ಸಾಜು ಕೆ, ಲಲಿತಾ, ಪರಮೇಶ್ವರ, ವಿಶ್ವನಾಥ ಮೂಲ್ಯ, ಪದ್ಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಈ ಸಂದರ್ಭದಲ್ಲಿ ಸಮಾಜ ಸೇವಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಶೆಟ್ಟಿ ಹೊಸಮನೆ ಹಾಗೂ ಮಾಜಿ ಸೈನಿಕ ನಾರಾಯಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿದರು. ಶಾಂತಿನಗರ ಒಕ್ಕೂಟದ ಅಧ್ಯಕ್ಷ ಮಹೇಶ ಪಿ ವಂದಿಸಿದರು. ಯೋಜನೆಯ ಕಡಬ ವಲಯ ಮೇಲ್ವಿಚಾರ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು. ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಸುಜಾತ, ಸೇವಾ ಪ್ರತಿನಿಧಿಗಳು ಸಹಕರಿಸಿದರು.

Leave a Reply

error: Content is protected !!