ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಕಳಸದ ಹಿರೇಬೈಲ್‌ನ ಶ್ರೇಯಾಂಸ್ ಜೈನ್ ಅವರು ವಿಭಿನ್ನವಾಗಿ ತಮ್ಮ ಭಕ್ತಿ ಸ್ವರೂಪವನ್ನು ಅರ್ಪಿಸಿದ್ದಾರೆ.
ಜಾನುವಾರು ಪ್ರಿಯ ಶ್ರೇಯಾಂಸ್ ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಕೋವಿಡ್ ಸಂದರ್ಭ
ಶ್ರೇಯಾಂಸ್ ಜೈನ್ ಹೈನುಗಾರಿಕೆಯತ್ತ ಆಸಕ್ತಿ ಬೆಳೆಸಿ ಕೊಂಡು ಗಿರ್ ತಳಿಯ ಹಸುವನ್ನು ಸಾಕಿದರು. ಇದರ ಮೊದಲ ಕರುವನ್ನು ಧರ್ಮಸ್ಥಳದ ಮಂಜುನಾಥ ಸನ್ನಿಧಿಗೆ ಅರ್ಪಿಸಲು ಅವರು ನಿಶ್ಚಯಿಸಿದ್ದರು. ಅದರಂತೆ ಕರು ಭೀಷ್ಮನೊಂದಿಗೆ ಜಿಗಣಿಯಿಂದ ಧರ್ಮಸ್ಥಳಕ್ಕೆ 36 ದಿನಗಳಲ್ಲಿ 360 ಕಿ.ಮೀ. ಕಾಲ್ನಡಿಗೆಯಲ್ಲೇ ಕ್ರಮಿಸಿ ಬಂದು ಅರ್ಪಿಸಿದ್ದಾರೆ.
ದಾರಿ ಮಧ್ಯೆ ಸಿಕ್ಕ ಜನರ ಪ್ರೀತಿಯಿಂದಲೇ ಅವರ ಹಾಗೂ ಆಕಳಿಗೆ ಹೊಟ್ಟೆ ತುಂಬಿದೆ. ಹೀಗಾಗಿ ಅವರಿಗೆ ಕೇವಲ 1,000 ರೂ. ನಷ್ಟು ವೆಚ್ಚ ತಗಲಿದೆ ಎಂದು ಶ್ರೇಯಾಂಸ್ ಹೇಳಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಹಳೇ ವಿದ್ಯಾರ್ಥಿಯಾಗಿದ್ದು, ಸಿದ್ಧವನ ಗುರುಕುಲದಲ್ಲಿ ಶಿಕ್ಷಣ ಪಡೆದಿದ್ದರು.