ಆಧುನಿಕ ಬದುಕಿನಲ್ಲಿ ಎಲ್ಲವೂ ಯಾಂತ್ರಿಕೃತವಾಗಿದೆ ಯಕ್ಷಗಾನವು ಕಾಲಮಿತಿಯಾಗಿದೆ -ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ

ಶೇರ್ ಮಾಡಿ

ನೆಲ್ಯಾಡಿ: ಆಧುನಿಕ ಬದುಕಿನಲ್ಲಿ ಎಲ್ಲವೂ ಯಾಂತ್ರಿಕೃತವಾಗಿದೆ ಯಕ್ಷಗಾನವು ಕಾಲಮಿತಿಯಾಗಿದೆ. ಸಾಮಾಜಿಕ ಬದುಕಿನಲ್ಲಿ ಆನಂದ ಕೊಡುವ ಕಲೆ ಯಕ್ಷಗಾನ. ಹಿಂದೆ ಕಲಾವಿದರ ಬದುಕು ಬಹಳ ಕಷ್ಟದಲ್ಲಿತ್ತು. ಆದರೆ ಇಂದು ಯಕ್ಷದ್ರುವ ಪಟ್ಲದಂತಹ ಸಂಸ್ಥೆಗಳ ಮೂಲಕ ಕಲಾವಿದರಿಗೆ ಸಹಾಯ ಹಸ್ತ ದೊರೆಯುವಂತಾಗಿದೆ ಎಂದು ವಜ್ರದೇಹಿ ಮಠ ಗುರುಪುರ ಕೈಕಂಬದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದ ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾ ಕೇಂದ್ರದ 5ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷ ಗುರು ಪ್ರಶಾಂತ್ ಶೆಟ್ಟಿ ಅವರ ಶಿಷ್ಯ ವೃಂದ ಹಾಗೂ ಜಿಲ್ಲೆಯ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ವಿಶ್ವಾಮಿತ್ರ ಮೇನಕೆ, ದಕ್ಷ ಯಜ್ಞ ಮತ್ತು ಹಾಸ್ಯ ವೈಭವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ.
ಇಂದು ಪ್ರಶಸ್ತಿಗಳು ಕಲಾವಿದರನ್ನು ಅರಸಿಕೊಂಡು ಬರುವಂತಾಗಿದೆ. ಯಕ್ಷಗಾನ ಕಲೆಯು ಅತ್ಯಂತ ಶ್ರೀಮಂತವಾದ ಕಲೆಗಳಲ್ಲಿ ಒಂದಾಗಿದೆ ಎಂದು ನುಡಿದರು.

ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾ ಕೇಂದ್ರದ 5ನೇ ವರುಷದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಉದ್ಯಮಿ ಹೇಮಂತ್ ರೈ ಮನವಳಿಕೆ ಅವರು ಮಾನವ ಒಂದು ಸಮಾಜದ ಜೀವಿ ಮಾನವ ಸಂಘ ಜೀವಿ ಅಂತ ಹೇಳುತ್ತೇವೆ ಮಾನವ ಸಮಾಜ ಜೀವಿ ಹೇಗೆ ಆಗುತ್ತಾನೆ ಅಂತ ಹೇಳಿದ್ರೆ ತನ್ನ ಧರ್ಮವನ್ನು, ತನ್ನ ಸಂಸ್ಕೃತಿಯನ್ನು ಆ ಸಂಸ್ಕೃತಿಗೆ ಜೋಡಿಕೊಂಡಿರತಕ್ಕಂತ ಕಲೆಗಳನ್ನ ಸನ್ಮಾನಿಸುತ್ತಾ ಅದರೊಟ್ಟಿಗೆ ಜೋಡಿಸ್ತಾ ಆ ಒಂದು ಸಮಾಜದ ಅಂಗವಾಗಿ ಬೆಳೆದಿರುವಂತಹ ಸಂದರ್ಭದಲ್ಲಿ ಆತ ಸಮಾಜ ಜೀವಿಯಾಗುತ್ತಾನೆ, ಸಮಾಜವನ್ನು ಬಿಟ್ಟು ತಾನೊಬ್ಬನೇ ಬದುಕಬೇಕೆಂಬುದು ಹಂಬಲ ಯಾರಿಗಾದರೂ ಇದ್ರೆ ಅದು ಬಹಳ ಕೆಟ್ಟ ಹಂಬಲ ಹಾಗೂ ಅದು ಅಸಾಧ್ಯವಾದದ್ದು ನಮ್ಮ ಕಲೆ ನಮ್ಮ ಸಂಸ್ಕೃತಿ ನಮ್ಮ ಆಚರಣೆ ನಮ್ಮ ಧರ್ಮ ಇದೆಲ್ಲವನ್ನು ಸೇರಿಸಿಕೊಂಡು ಅದರೊಂದಿಗೆ ಮುನ್ನಡೆಯುತ್ತ ನಾವೆಲ್ಲರೂ ಒಂದುಗೂಡಿ ಒಟ್ಟಿಗೆ ಕೆಲಸ ಆಗುತ್ತದೆ. ನಮ್ಮ ಕಲೆ ನಮ್ಮನ್ನು ಮುಂದೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂಬುದು ನಮಗೆಲ್ಲರಿಗೂ ಕೂಡ ತಿಳಿದಿರುವ ವಿಚಾರ. ಈ ಒಂದು ನಿಟ್ಟಿನಲ್ಲಿ ನಮ್ಮ ಪ್ರಶಾಂತ ಶೆಟ್ಟಿ ಯವರ ತಂಡ ಇಲ್ಲಿನ ಮಕ್ಕಳನ್ನು ಸೇರಿಸಿಕೊಂಡು ಒಂದು ಯಕ್ಷಗಾನ ತರಬೇತಿ ಶಾಲೆಯನ್ನು ಮಾಡಿ ಅದರ ಮೂಲಕ ಯಕ್ಷ ಕಲಾವಿದರನ್ನು ಹುಟ್ಟುವ ಹಾಕುವಂಥ ಅದ್ಭುತವಾದ ಕೆಲಸವನ್ನು ಮಾಡಿರುವುದು ಎಲ್ಲರೂ ಮೆಚ್ಚುವಂತದ್ದು. ಇಂದು ಪಾಲಕರಿಗೆ ವಿದ್ಯಾರ್ಥಿಗಳ ಅಂಕ ಗಳಿಕೆ ಒಂದೇ ಆಗಿರುತ್ತದೆ. ಆ ರೀತಿಯ ವಿದ್ಯೆಯಿಂದ ಯಾವುದೇ ಸಂಸ್ಕೃತಿ ಆಚಾರ, ವಿಚಾರಗಳು ಬೆಳೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮಲ್ಲಿರುವ ಗುರಿಯನ್ನು, ಶಕ್ತಿಯನ್ನು ಬಲಪಡಿಸಿಕೊಂಡು ಆ ಮೂಲಕ ಕೆಲಸ ಮಾಡಿ ತಮ್ಮ ಶಕ್ತಿ ಏನು ಎಂಬುದನ್ನು ತಿಳಿದುಕೊಳ್ಳಬೇಕು ಆ ಮೂಲಕ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.

ಶಬರೀಶ ಯಕ್ಷಗಾನ ಕಲಾವೃಂದದ ಅಧ್ಯಕ್ಷರಾದ ಗುಡ್ಡಪ್ಪ ಗೌಡ ಇವರು ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಯಕ್ಷಗಾನಕ್ಕೆ ಯಾವುದೇ ಜಾತಿ ಧರ್ಮ ಬೇದ ಭಾವ ಇಲ್ಲ. ಮನುಷ್ಯನ ಮತ್ತು ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವ ಕಲೆ ಯಕ್ಷಗಾನ. ಯಕ್ಷಗಾನವು ಕನ್ನಡ ಭಾಷಾ ಪ್ರೌಢಿಮೆ ಯನ್ನು ಬೆಳೆಸುತ್ತದೆ ಎಂದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ ಕೌಕ್ರಾಡಿ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ರವರು ಯಕ್ಷಗಾನದಿಂದ ಶಾರೀರಿಕ ವ್ಯಾಯಾಮವಲ್ಲದೆ ಮಾನಸಿಕ ಸ್ಥಿರತೆ, ಜ್ಞಾನ ಲಭ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯಕ್ಷಕಲಾ ಪೋಷಕರು ಉದ್ಯಮಿಗಳು ಬೆಂಗಳೂರಿನ ಆರ್ ಕೆ ಭಟ್ ರವರು ಮಾತನಾಡಿ ಯಕ್ಷಗಾನ ಕಲಾವಿದರಿಗೆ ಸ್ವಾರ್ಥ ಇಲ್ಲ, ಅವರು ತನ್ನ ಊರಿನ ಹೆಸರನ್ನು ಬೆಳಗಿಸುತ್ತಾರೆ. ಇಂದು ವಿದ್ಯಾರ್ಥಿಗಳಿಗೆ ಕೇವಲ ಅಂಕಗಳೇ ಮುಖ್ಯವಾಗಿದೆ. ಕಲೆಗಳ ಬಗ್ಗೆ ಆಚಾರ ವಿಚಾರಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಯಕ್ಷಗಾನ ಕಲಿಕೆಯಿಂದ ಹೆಚ್ಚಿನ ಜ್ಞಾನಾರ್ಜನೆ ಆಗೋದಲ್ಲದೆ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಆನಂದ ಶೆಟ್ಟಿ ದೋಂತಿಲ್ಲ, ಯಕ್ಷಗಾನ ಕಲಾ ಸಾಧಕ ಜೋಸೆಫ್ ಡಿ’ಸೋಜ, ತುಳು ಸಾಹಿತ್ಯ ಅಕಾಡೆಮಿ ದ.ಕ ಸದಸ್ಯರಾದ ದಿನೇಶ್ ರೈ ಕಡಬ, ಶಬರೀಶ ಕಲಾ ಕೇಂದ್ರದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಯಕ್ಷ ಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಶಬರೀಶ ಕಲಾ ಕೇಂದ್ರದ ಕಾರ್ಯದರ್ಶಿ ಶ್ರೀಧರ ನೂಜಿನ್ನಾಯ, ಶಬರೀಶ ಕಲಾ ಕೇಂದ್ರದ ಕೋಶಾಧಿಕಾರಿ ಗಣೇಶ್ ಗೌಡ ಉಪಸ್ಥಿತರಿದ್ದರು.

ಅಭಿನಂದನೆ :
ಯಕ್ಷಗಾನ ಕಲಾ ಸಾಧಕ ಜೋಸೆಫ್ ಡಿಸೋಜ ನೆಲ್ಯಾಡಿ ದಂಪತಿಗಳನ್ನು ಹಾಗೂ ನೆಲ್ಯಾಡಿ ಶಬರೀಶ ಕಲಾ ಕೇಂದ್ರದ ಪೂರ್ವಧ್ಯಕ್ಷರಾದ ಸುಧೀರ್ ಕೆ ಎಸ್ ದಂಪತಿಗಳನ್ನು ಗೌರವಿಸಲಾಯಿತು.
ಸಹಾಯ ಹಸ್ತ:
ಪ್ರಶಾಂತ್ ಶೆಟ್ಟಿ ರವರ ಮಾತೃಶ್ರೀ ದಿ. ಯಮುನಾ ಶೆಟ್ಟಿ ಸ್ಮಾರಕವಾಗಿ ಯಕ್ಷಗಾನ ಪ್ರಸಂಗ ಕರ್ತರಾದ ಗಣೇಶ್ ಕೆಲಕ್ಕಾಡಿ ಯವರಿಗೆ ನಗದು ರೂಪದಲ್ಲಿ ಸಹಾಯ ಹಸ್ತ ನೀಡಲಾಯಿತು.
ಪ್ರೋತ್ಸಾಹ:
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಬರಿ ಕಲಾ ಕೇಂದ್ರ ನೆಲ್ಯಾಡಿಯ ವಿದ್ಯಾರ್ಥಿನಿ ಶ್ರೀ ರಕ್ಷಾ, ಅನುಪಮಾ, ಭವಿಷ್ಯ ರಿಗೆ ನಗದು ಪ್ರೋತ್ಸಾಹವನ್ನು ನೀಡಿ ಗೌರವಿಸಲಾಯಿತು.

ಸನ್ಮಾನಿತರ ಪರಿಚಯವನ್ನು ನೆಲ್ಯಾಡಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆನಂದ ಅಜಿಲ ರವರು ವಾಚಿಸಿದರು. ಶಬರೀಶ ಕಲಾ ಕೇಂದ್ರದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ ಕೆ ಪ್ರಾರ್ಥಿಸಿದರು. ಶಬರೀಶ ಕಲಾ ಕೇಂದ್ರದ ಕಾರ್ಯದರ್ಶಿ ಶ್ರೀಧರ ನೂಜಿನ್ನಾಯ ವಂದಿಸಿದರು, ಸುಧೀರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!