ಕೊಕ್ಕಡ: ಪಟ್ರಮೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆ ಹಾಗೂ ಗ್ರಂಥಾಲಯ ಸಪ್ತಾಹ ಆಚರಣೆಯು ನವೆಂಬರ್ 18ರಂದು ನಡೆಯಿತು.
ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಸುಜಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತ್ ಅಧ್ಯಕ್ಷ ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಕ್ಕಡ ವಲಯದ ಅಂಗನವಾಡಿ ಮೇಲ್ವಿಚಾರಕಿ ವಿನೋದ, ಆರೋಗ್ಯ ಇಲಾಖಾ ಸಿಬ್ಬಂದಿ ಆಶಾಲತಾ, ಪೋಲೀಸ್ ಇಲಾಖಾ ಸಿಬ್ಬಂದಿ ಹುಲಿರಾಜ್, ಪಿ.ಡಿ.ಒ ರಿತೇಶ್ ಪುತ್ರನ್ ಮಕ್ಕಳಿಗೆ ಆಯಾಯ ಇಲಾಖೆಯ ಬಗ್ಗೆ ಮಾಹಿತಿ ನೀಡಿ, ಮಕ್ಕಳಲ್ಲಿ ಚರ್ಚಿಸಿದರು.
ಈ ಸಂದರ್ಭ ಪಂಚಾಯತ್ ಕಾರ್ಯದರ್ಶಿ ಅಮ್ಮಿ ಬಿ.ಪಿ ಹಾಗೂ ಗ್ರಂಥ ಪಾಲಕಿ ವಿದ್ಯಾ ಸರಸ್ವತಿ ಉಪಸ್ಥಿತರಿದ್ದರು.
ಪಟ್ರಮೆ ‘ಬಿ’ ಶಾಲೆ ವಿದ್ಯಾರ್ಥಿನಿ ಜಯಸುಧಾ ಸ್ವಾಗತಿಸಿದರು. ಪಟ್ರಮೆ ‘ಎ’ ಶಾಲೆ ವಿದ್ಯಾರ್ಥಿನಿ ಧನುಶ್ರೀ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀರಾಮ ಶಾಲೆ ವಿದ್ಯಾರ್ಥಿ ವಿಕ್ರಮ್ ಎಂ. ಕನ್ನಡ ಹಾಡು ಹಾಡಿದರು. ಸೂರ್ಯತ್ತಾವು ಶಾಲೆ ವಿದ್ಯಾರ್ಥಿನಿ ನಿಶಾ ವಂದಿಸಿದರು.ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭ ಬಹುಮಾನವನ್ನು ನೀಡಲಾಯಿತು. ಸೂರ್ಯತ್ತಾವು ಹಾಗೂ ಪಟ್ರಮೆ ಬಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ರೈ, ಮನೋಜ್, ಮೀನ ಕುಮಾರಿ, ಗಿರಿಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.