ರೆಖ್ಯದಲ್ಲಿ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭೆ-ನಾವು ಬದಲಾದರೆ ಸಮಾಜದಲ್ಲಿ ಪರಿವರ್ತನೆ : ಕತ್ತಲ್ ಸಾರ್

ಶೇರ್ ಮಾಡಿ

ನೇಸರ ಡಿ.14: ಪ್ರತಿಯೊಬ್ಬರು ಸಮಾಜ ಬದಲಾಗಬೇಕು ಎನ್ನುತ್ತಾರೆ. ಸಮಾಜ ಎಂದರೆ ಇನ್ಯಾರೋ ಅಲ್ಲ. ನಾವೇ ಆಗಿದ್ದೇವೆ. ಪ್ರಸ್ತುತ ಹಿಂದು ಸಮಾಜಕ್ಕೆ ಎದುರಾಗಿರುವ ಎಲ್ಲ ಗಂಡಾಂತರಗಳನ್ನು, ಸವಾಲುಗಳನ್ನು ಎದುರಿಸಲು ನಮ್ಮೊಳಗೆ ಪರಿವರ್ತನೆ ತರಬೇಕಾದ ಅಗತ್ಯವಿದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು. ವಿಶ್ವ ಹಿಂದೂ ಪರಿಷತ್ ಭಜರಂಗದಳ ರೆಖ್ಯಾ ಘಟಕ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸವಿರುವ ಸುಸಂಸ್ಕೃತ ಹಿಂದು ಸಮಾಜದೊಳಗೆ ಕೆಲವು ಮೌಲ್ಯಗಳ ಬಗ್ಗೆ ನಿರ್ಲಕ್ಷ್ಯ ತಳೆದಿರುವುದೇ ಇಂದಿನ ಸಮಸ್ಯೆಗಳಿಗೆ ಕಾರಣ. ಮನೆಯೇ ಮೊದಲ ಪಾಠಶಾಲೆ. ತಂದೆ -ತಾಯಿಯೇ ಸಂಸ್ಕಾರ, ಸಂಸ್ಕೃತಿ ಮರೆತಂತೆ ವರ್ತಿಸಿದರೆ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ಮಕ್ಕಳಿಗೆ ಶಾಲೆಯ ಹೊರತಾದ ಭಜನಾ ಸಂಸ್ಕಾರ, ಯೋಗ, ಪ್ರಾಣಾಯಾಮಗಳನ್ನು ಕಲಿಸಬೇಕು. ಸಭ್ಯ ಉಡುಪು ಧರಿಸಲು ತಿಳಿಹೇಳಬೇಕು. ಪಾಶ್ಚಾತ್ಯ ರೀತಿಯ ದೀಪ ಆರಿಸುವ, ಕೊಳೆತ ವಸ್ತುಗಳ ಕೇಕ್ ತಿನ್ನಿಸಿ ಹುಟ್ಟುಹಬ್ಬ ಆಚರಣೆ ಮಾಡುವುದಕ್ಕಿಂತ ದೀಪ ಬೆಳಗುವ ಹುಟ್ಟುಹಬ್ಬ ಆಚರಣೆ ಮಾಡಿರಿ. ಹಿಂದು ಧರ್ಮವನ್ನು ಪಾಶ್ಚಾತ್ಯರೇ ಕೊಂಡಾಡುತ್ತಿರುವಾಗ ನಾವಿಲ್ಲಿ ಮೆಹೆಂದಿ, ಮದುವೆಯಂತಹ ಶಾಸ್ತ್ರೋಕ್ತ ಕಾರ್ಯಕ್ರಮಗಳಲ್ಲಿ ಡಿಜೆ, ಮದ್ಯಗಳ ಸಮಾರಾಧನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಶಾಸಕ ಹರೀಶ್ ಪೂಂಜ ಮಾತನಾಡಿ, ಇಂದು ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ವಿಹಿಂಪ, ಬಜರಂಗದಳ ಸಮರ್ಥವಾಗಿ ಎದುರಿಸಿ ಹಿಂದುಗಳಲ್ಲಿ ಜಾಗೃತಿ ಬೆಳೆಸುತ್ತಿದೆ. ಅಯೋಧ್ಯೆಯ ರಾಮ ಮಂದಿರ, ದತ್ತಪೀಠ, ತಿರುಪತಿಯ ರಕ್ಷಣೆ ಈ ಎರಡೂ ಸಂಘಟನೆಗಳ ಹೋರಾಟದ ಫಲ ಎಂದರು. ಬಜರಂಗದಳ ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು ಹಿಂದು ಹೆಣ್ಮಕ್ಕಳನ್ನು ಲವ್ ಜಿಹಾದ್ ಮೂಲಕ ಮತಾಂತರ ನಡೆಸುವ, ಉಗ್ರ ಸಂಘಟನೆಗಳಿಗೆ ನೇಮಿಸುವ ವಿಚಾರಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಜಾಗೃತಿಗೆ ಕರೆ ನೀಡಿದರು. ಅಧ್ಯಕ್ಷರಾದ ಪುನೀತ್ ಎಂಜಿರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಜನಾ ಮಂದಿರದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಗುಡ್ರಾಮಲ್ಲೇಶ್ವರ ದೇವಳದ ಆಡಳಿತ ಮೊಕ್ತೇಸರ ಕೈಕುರೆ ಮಂಜುನಾಥ ಗೌಡ, ಶೀನಪ್ಪ ರೈ, ವಿಹಿಂಪ ಮುಖಂಡ ದಿನೇಶ್ ಚಾರ್ಮಾಡಿ ಮೊದಲಾದವರು ಉಪಸ್ಥಿತರಿದ್ದರು. ಪಂ.ಅಧ್ಯಕ್ಷ ನವೀನ್ ರೆಖ್ಯ, ಬೇಬಿಕಿರಣ್, ರಮೇಶ, ಚೇತನ್ ಮೊದಲಾದವರು ಸಹಕರಿಸಿದರು.

ಜಾಹೀರಾತು

Leave a Reply

error: Content is protected !!