ನೇಸರ ಡಿ15.ಉಪ್ಪಿನಂಗಡಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿರುವ ಮೂವರು ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕಾರ್ಯಕರ್ತರು ರಾತ್ರಿ ವೇಳೆ ಠಾಣೆಗೆ ಮುತ್ತಿಗೆ ಯತ್ನ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಡಿ.14ರಂದು ರಾತ್ರಿ ನಡೆದಿದೆ.ಈ ಮಧ್ಯೆ, ಉಪ್ಪಿನಂಗಡಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪೊಲೀಸರ ವಶದಲ್ಲಿರುವ ಪಿಎಫ್ಐ ಮುಖಂಡರ ಪೈಕಿ ಓರ್ವನನ್ನು ಮಾತುಕತೆ ಬಳಿಕ ಪೊಲೀಸರು ಬಿಡುಗಡೆಗೊಳಿಸಿದ್ದರೂ,ಉಳಿದಿಬ್ಬರನ್ನೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ರಾತ್ರಿ ವೇಳೆ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಲು ಯತ್ನ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.ಕೆಲ ದಿನಗಳ ಹಿಂದೆ ಇಲ್ಲಿನ ಹಳೆಗೇಟು ಬಳಿ ನಡೆದಿದ್ದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಿಎಫ್ಐ ಮುಖಂಡರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕಾರ್ಯಕರ್ತರು ಬೆಳಿಗ್ಗಿನಿಂದಲೇ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.ಈ ಸಂಬಂಧ ಪೊಲೀಸರೊಂದಿಗೆ ನಡೆದ ಮಾತುಕತೆ ಬಳಿಕ ಓರ್ವನನ್ನು ಬಿಡುಗಡೆಗೊಳಿಸಲಾಗಿತ್ತು.ಆದರೆ ಉಳಿದ ಇಬ್ಬರನ್ನೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ಮತ್ತೆ ಪ್ರತಿಭಟನೆಗಿಳಿದಾಗ ಲಾಠಿ ಚಾರ್ಜ್ ನಡೆದಿದೆ ಎಂದು ವರದಿಯಾಗಿದೆ.ಸದ್ಯ ಉಪ್ಪಿನಂಗಡಿ ಗಲಭೆ ಪೀಡಿತ ಪ್ರದೇಶದ ರೀತಿಯಲ್ಲಿದ್ದು ನಾಗರಿಕರು ಆತಂಕಿತರಾಗಿದ್ದಾರೆ.