ನೇಸರ ಡಿ.15: ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಇದೀಗ ನೆಲ್ಯಾಡಿ ಪೇಟೆಯ ರಸ್ತೆಯ ಎರಡೂ ಬದಿಯಲ್ಲಿ ತಲಾ ಮೂರು ಮೀಟರ್ ನಷ್ಟು ಮತ್ತೆ ಹೆಚ್ಚುವರಿ ಸ್ಥಳವನ್ನು ಅಳತೆಮಾಡಿ ಭೂಸ್ವಾಧೀನಕ್ಕೆ ಗುರುತು ಮಾಡಲಾಗಿದೆ.ಇದಕ್ಕೆ ವರ್ತಕರಿಂದ ತೀವ್ರವಾದ ವಿರೋಧ ವ್ಯಕ್ತವಾಗಿದ್ದು.ಸಂಸದ ನಳಿನ್‌ಕುಮಾರ್ ಕಟೀಲ್‌ರವರನ್ನು ಭೇಟಿ ಮಾಡಿ ಮತ್ತೆ ಭೂಸ್ವಾಧೀನ ಮಾಡದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಡಿ.15ರಂದು ನೆಲ್ಯಾಡಿಯ ಪೇಟೆಯಲ್ಲಿ ನಡೆದ ವರ್ತಕರ ಹಾಗೂ ಕಟ್ಟಡ ಮಾಲಕರ ಸಭೆಯಲ್ಲಿ ನಿರ್ಣಯಿಸಲಾಗಿದೆ.
ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು. ಪೇಟೆಯ ಎರಡೂ ಬದಿಯಲ್ಲಿ ಈ ಹಿಂದೆ ಮಾಡಲಾಗಿದ್ದ ಗುರುತಿನಂತೆ ಕಟ್ಟಡಗಳ ತೆರವು ಮಾಡಲಾಗಿತ್ತು. ಆದರೆ ಇದೀಗ ಹೆದ್ದಾರಿಯ ಎರಡೂ ಬದಿಯೂ ಹೆಚ್ಚುವರಿ ಭೂ ಸ್ವಾಧೀನಕ್ಕೆ ಅಳತೆ ಮಾಡಿ ಗುರುತು ಮಾಡಲಾಗುತ್ತಿದೆ. ಇದರಿಂದಾಗಿ ನೆಲ್ಯಾಡಿ ಪೇಟೆಯಲ್ಲಿರುವ ಬಹುತೇಕ ಕಟ್ಟಡಗಳಿಗೆ ಹಾನಿಯಾಗಲಿದೆ. ಈ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಕಟ್ಟಡ ಮಾಲಕರ ತುರ್ತು ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಿದರು.
ಈ ಹಿಂದೆ ಸಂಸದ ನಳಿನ್‌ಕುಮಾರ್ ಕಟೀಲ್‌ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತ್ತೆ ಹೆಚ್ಚುವರಿಯಾಗಿ ಭೂಸ್ವಾಧೀನ ಮಾಡುವುದಿಲ್ಲ ಎಂದು ದ.ಕ.ಜಿಲ್ಲಾಧಿಕಾರಿಯವರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿನ ಗುರುತಿನಂತೆ ವಾಣಿಜ್ಯ ಕಟ್ಟಡಗಳ ತುಂಡರಿಸಿ ನವೀಕರಣ ಮಾಡಲಾಗಿದೆ. ಆದರೆ ಇದೀಗ ಹೆಚ್ಚುವರಿ ಭೂ ಸ್ವಾಧೀನಕ್ಕೆ ಪೇಟೆಯಲ್ಲಿ ಮತ್ತೆ ಗುರುತು ಹಾಕಲಾಗಿದೆ. ಹೊಸ ಅಳತೆ ಪ್ರಕಾರ ಮತ್ತೆ ಕಟ್ಟಡ ತುಂಡರಿಸಿದಲ್ಲಿ ಸಂಪೂರ್ಣ ಕಟ್ಟಡಕ್ಕೆ ಹಾನಿಯಾಗಿ ಅಪಾರ ನಷ್ಟ, ಅಪಾಯವೂ ಆಗಲಿದೆ. ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಮತ್ತೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ ವರ್ತಕರು, ಕಟ್ಟಡ ಮಾಲಕರು ಈ ಸಂಬಂಧ ಅಳತೆ ಮಾಡಲು ಅಧಿಕಾರಿಗಳು ಬಂದಲ್ಲಿ ಅವರಿಗೆ ತಡೆಯೊಡ್ಡುವ ನಿರ್ಧಾರಕ್ಕೆ ಬಂದಿದ್ದಾರೆ.ಹೆಚ್ಚುವರಿ ಭೂಸ್ವಾಧೀನಕ್ಕೆ ಮುಂದಾಗಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಸಂಸದ ನಳಿನ್‌ಕುಮಾರ್ ಕಟೀಲ್‌ರವರನ್ನು ವರ್ತಕರ ನಿಯೋಗ ಭೇಟಿ ಮಾಡಿ ಮನವಿ ಮಾಡಲು ನಿರ್ಣಯಿಸಲಾಗಿದೆ. ಅಲ್ಲದೇ ಸಂಸದರು ನೆಲ್ಯಾಡಿಗೆ ಬಂದು ವೀಕ್ಷಣೆ ಮಾಡುವಂತೆಯೂ ಕೇಳಿಕೊಳ್ಳಲು ನಿರ್ಧರಿಸಲಾಗಿದೆ. ಸದ್ರಿ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲು ನಿರ್ಧರಿಸಲಾಗಿದೆ. ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಒ.ಜಿ.ನೈನಾನ್, ವರ್ತಕ ಸಂಘದ ಗೌರವಾಧ್ಯಕ್ಷ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಹಿರಿಯ ಉದ್ಯಮಿ ಕೆ.ಪಿ.ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರ್ತಕ ಹಾಗೂ ಕಟ್ಟಡ ಮಾಲಕರರಾದ ಎಂ.ಟಿ.ದಿನೇಶ್, ಸತೀಶ್ ಭಟ್ ದುರ್ಗಶ್ರೀ,ಶಿಬು ವರ್ಗೀಸ್,ಕೆ.ರಾಮಣ್ಣ ಗೌಡ ನೆಲ್ಯಾಡಿ,ಜಯಾನಂದ ಶಾರದಾ ಫ್ಯಾನ್ಸಿ,ನಾಝೀಮ್ ಸಾಹೇಬ್, ಕೆ.ಎಂ.ರಫೀಕ್, ಅಬ್ದುಲ್ ಮುತ್ತಾಲಿಬ್, ರಾಜಶೇಖರ ಶೆಟ್ಟಿ, ಜೋಸೆಫ್ ಟಿ.ಎಸ್., ಎಂ.ಉಮ್ಮರ್ ತಾಜ್, ಟಿಪ್ಪು ಸುಲ್ತಾನ್, ಜೇಮ್ಸ್ ಪಿ.ವಿ. ಜಯೇಶ್ ಕುಮಾರ್, ಎನ್.ಮಹಮ್ಮದ್ ಪುತ್ತು,ಮಹಮ್ಮದ್ ಹನೀಫ್ ಸಿಟಿ, ಇಸ್ಮಾಯಿಲ್ ಎನ್., ನೌಫಾಲ್ ಸಾಗರ್, ಬಿ.ಹುಸೈನ್ ಮಾಣಿ, ರವಿಚಂದ್ರ, ಮಿಥುನ್ ಜಿ.ಎಸ್.ಶಿವಕೃಪಾ, ಸಿದ್ದಿಕ್ ಜಮಾಲಿಯಾ. ಕೆ.ಇಬ್ರಾಹಿಂ, ಎಂ.ಖಾದರ್ ಆಲಿ, ಎನ್.ಸುಲೈಮಾನ್, ಚರಣ್ ಪೂವಾಜೆ, ಎಸ್.ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.