ಮುಂಡಾಜೆ: ಕಾವ್ಯಾಂಜಲಿ ಕಾರ್ಯಕ್ರಮ ; ಮನೆ ಮನೆಗಳಲ್ಲಿ ಸಾಹಿತ್ಯ ಕಾರ್ಯಕ್ರಮ ಜರಗಲಿ

ಶೇರ್ ಮಾಡಿ

ಮುಂಡಾಜೆ : “ಸುಪ್ತ ಪ್ರತಿಭೆಗಳ ಅವಕಾಶಕ್ಕಾಗಿ ಹಾಗೂ ಅವರ ಭವಿಷ್ಯ ಉಜ್ವಲವಾಗಲು ಮನೆಮನೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳು ಜರಗಬೇಕು” ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಎಂ.ಪಿ.ಶ್ರೀನಾಥ್ ಹೇಳಿದರು.
ಅವರು ಸಹೃದಯಿ ಬಳಗ ಮುಂಡಾಜೆ ಇದರ ವತಿಯಿಂದ ಮುಂಡಾಜೆಯ ನೈಮಿಶಾರಣ್ಯ ಮಜಲಿನಲ್ಲಿ ಜರಗಿದ ಕಾವ್ಯಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸಾಹಿತ್ಯ ಕಾರ್ಯಕ್ರಮಗಳಿಗೆ ಇತ್ತೀಚಿನ ದಿನಗಳಲ್ಲಿ ವೀಕ್ಷಕರ ಕೊರತೆ ಕಂಡು ಬರುತ್ತಿದೆ ಸರಳ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ ವೀಕ್ಷಕರನ್ನು ಸೆಳೆಯುವುದರೊಂದಿಗೆ ಸಾಹಿತ್ಯದ ಅರಿವನ್ನು ಮೂಡಿಸುವ ಅಗತ್ಯ ಇದೆ” ಎಂದು ಹೇಳಿದರು.

ಕವಿ ಸಾಹಿತಿ ಡಾ.ರಮಾನಂದ ಬನಾರಿ ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ “ಕಾವ್ಯ ಹುಟ್ಟುವುದು, ಕಾವ್ಯ ಕಟ್ಟುವುದು, ಕಾವ್ಯ ಮುಟ್ಟಬೇಕಾದವರನ್ನು ಮುಟ್ಟುವುದು ಈ ಮೂರು ಪರಿಭಾಗಗಳಲ್ಲಿ ಕಾವ್ಯ ಮೂಡಬೇಕು. ಕಾವ್ಯ ರಚನೆಗೆ ಬೇಕಾದ ಮೂಲ ದ್ರವ್ಯ – ಏಕಾಗ್ರತೆ ಮತ್ತು ಸಂವೇದನೆ ಇವುಗಳ ಸಮ್ಮಿಲನದಿಂದ ಹೊಳಹುಗಳುಳ್ಳ ಕಾವ್ಯ ರಚಿಸಬೇಕು ಎಂದರು.
ಹಿರಿಯ ಸಾಹಿತಿ ಪ್ರೊ. ಎನ್‌‌ ಜಿ. ಪಟುವರ್ಧನ್ ಕವಿಗೋಷ್ಠಿಯ ನೇತೃತ್ವ ವಹಿಸಿ ಮಾತನಾಡಿ “ಕಾವ್ಯಗಳು ಆತ್ಮಕ್ಕೆ ಮುಟ್ಟುವಂತಿರಬೇಕು ಮನಸ್ಸಿಗೆ ಮುದ ನೀಡುವ ರಸ, ಧ್ವನಿ ಔಚಿತ್ಯ ಉಳ್ಳ ಕವನಗಳು ಮೂಡಿ ಬರಬೇಕು” ಎಂದರು.
ಸಂಧ್ಯಾ ಪಾಳಂದ್ಯೆ, ವಿದ್ಯಾಶ್ರೀ ಅಡೂರು, ಶಂಕರ ತಾಮನ್ಕರ್, ಬಾಲಕೃಷ್ಣ ಸಹಸ್ರಬುಧ್ಯೆ, ನಾರಾಯಣ ಫಡಕೆ ಕವಿಗೋಷ್ಠಿಯಲ್ಲಿ ಭಾಗವಹಿಸಿದರು. ಸಾಮಾಜಿಕ ಧುರೀಣ ಶ್ರೀಧರ ಜಿ.ಭಿಡೆ, ಯಕ್ಷಗಾನ ಸಂಯೋಜಕ ಭುಜಬಲಿ ಧರ್ಮಸ್ಥಳ, ಲೇಖಕ ವಿಮರ್ಶಕ ಟಿ. ಎ.ಎನ್.ಖಂಡಿಗೆ,ಸೇರಾಜೆ ಸೀತಾರಾಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಶ್ರೀಕರ ಭಟ್ ಮರಾಠೆ ಸ್ವಾಗತಿಸಿದರು. ಪ್ರೊ. ಜಿ ಕೆ ಭಟ್ ಹಾಗೂ ನ್ಯಾಯವಾದಿ ಶೈಲೇಶ್ ಠೋಸರ್ ಕಾರ್ಯಕ್ರಮ ನಿರೂಪಿಸಿದರು ಸುಕೃತಿ ಎಸ್.ಮರಾಠೆ ವಂದಿಸಿದರು.

ಉಜಿರೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

ಈ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಉಜಿರೆಯ ಶ್ರೀ ಕೃಷ್ಣಾನುಗ್ರಹದಲ್ಲಿ ಫೆ. 3ರಿಂದ 5ರ ತನಕ ಜರಗಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಪ್ರೊ. ಎಂ.ಪಿ. ಶ್ರೀನಾಥ್ ಹೇಳಿದರು. ಈ ಬಗ್ಗೆ ಈಗಾಗಲೇ ಪೂರ್ವ ತಯಾರಿ, ಸಮಾಲೋಚನೆಗಳು ನಡೆಯುತ್ತಿದೆ ಎಂದು ತಿಳಿಸಿದರು.

Leave a Reply

error: Content is protected !!