ಕ್ರೀಡೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವಂತವರಾಗಬೇಕು- ನಿಂಗರಾಜು

ಶೇರ್ ಮಾಡಿ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ರಾಮಕುಂಜ: ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವು ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದಿಂದ ವಿದ್ಯಾರ್ಥಿಗಳು ತಂದ ಕ್ರೀಡಾ ಜ್ಯೋತಿಯ ಮೂಲಕ ಸಮಾರಂಭದ ಮುಖ್ಯ ಅತಿಥಿಗಳಾದ ಅಲಂಕಾರು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ನಿಂಗರಾಜು ಇವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ” ಕ್ರೀಡೆಯ ಒಂದು ಮುಖ್ಯ ಗುಣ ಮಾನವೀಯ ಮೌಲ್ಯಗಳನ್ನು ಬೆಳೆಸುವುದು. ಒಬ್ಬ ನಿಜವಾದ ಕ್ರೀಡಾಪಟು ಕಷ್ಟ-ಸುಖ ನೋವು- ನಲಿವು ಇವೆಲ್ಲವನ್ನ ಅನುಭವಿಸಿರುತ್ತಾನೆ. ಇದರಿಂದ ಸ್ವಾಭಾವಿಕವಾಗಿಯೇ ಅವನಲ್ಲಿ ಮಾನವೀಯ ಮೌಲ್ಯಗಳು ಹೆಚ್ಚು ಇರುತ್ತವೆ. ಹಾಗಾಗಿ ನೀವೆಲ್ಲರೂ ಕ್ರೀಡೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವಂತವರಾಗಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾದ ಕುಂತೂರುಪದವು ಸಂತ ಜಾರ್ಜ್ ಹೈಸ್ಕೂಲು ಇದರ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಕುಮಾರ್ ಇವರು ಧ್ವಜಾರೋಹಣ ಮಾಡಿದರು. ಇವರು ಮಾತನಾಡುತ್ತಾ “ಕ್ರೀಡೆಯಿಂದ ಒಬ್ಬ ವ್ಯಕ್ತಿಗೆ ಅನೇಕ ಅನುಕೂಲತೆಗಳು ಇವೆ. ಕ್ರೀಡೆಯಿಂದ ಒಬ್ಬ ವಿದ್ಯಾರ್ಥಿಯು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗುತ್ತಾನೆ. ಸ್ವಸ್ಥ ವ್ಯಕ್ತಿಗಳು ಖಂಡಿತವಾಗಿಯೂ ಸ್ವಸ್ಥ ಸಮಾಜವನ್ನು ನಿರ್ಮಿಸುತ್ತಾರೆ.” ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾದ ಅಶೋಕ್ ಕೊಯಿಲ ಇವರು “ಕ್ರೀಡೆಯಿಂದ ಒಬ್ಬ ವಿದ್ಯಾರ್ಥಿಗೆ ತನ್ನ ಬದುಕನ್ನ ಕಟ್ಟಿಕೊಳ್ಳಲು ಬಹಳಷ್ಟು ಅವಕಾಶಗಳು ಇವೆ. ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜ್ಯ ರಾಷ್ಟ್ರಮಟ್ಟದ ಸಾಧನೆಗಳನ್ನ ಮಾಡಿದರೆ ಅಂಥವರಿಗೆ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಉದ್ಯೋಗದಲ್ಲಿಯೂ ವಿಶೇಷ ಆದ್ಯತೆಯನ್ನ ನೀಡಲಾಗುತ್ತದೆ. ಇದರಿಂದ ಒಬ್ಬ ಕ್ರೀಡಾಪಟು ಕ್ರೀಡೆಯಲ್ಲಿ ಮಾತ್ರವಲ್ಲದೆ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗ್ತದೆ. ಹಾಗಾಗಿ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನ ಮಾಡುವಲ್ಲಿ ಈ ಕ್ರೀಡಾಕೂಟವು ಮೊದಲ ಹಂತವಾಗಲಿ” ಎಂದು ಹಿತನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ ಎಸ್, ಮುಖ್ಯ ಗುರುಗಳಾದ ಸತೀಶ್ ಭಟ್ ಉಪಸ್ಥಿತರಿದ್ದರು. ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸತೀಶ್ ಭಟ್ ಸರ್ವರನ್ನು ಸ್ವಾಗತಿಸಿದರು. ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಸುಪ್ರೀತಾ ಇವರು ಧನ್ಯವಾದವನ್ನ ಸಮರ್ಪಿಸಿದರು. ಕಾಲೇಜಿನ ಉಪನ್ಯಾಸಕರಾದ ಸತೀಶ್ ಜಿ ಆರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಕ್ರೀಡೆಗಳು ಜರುಗಿದವು.

Leave a Reply

error: Content is protected !!