ನೇಸರ ಡಿ 18: ಅರಸಿನಮಕ್ಕಿ-ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ 12 ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.
2020-21ನೇ ಸಾಲಿನಲ್ಲಿ ಸಹಕಾರಿ ಸಂಘದಲ್ಲಿ ಸಾಲ ವಿತರಣೆ, ಠೇವಣಿ ಸಂಗ್ರಹ, ಗೊಬ್ಬರ ಮಾರಾಟ, ಅಡಿಕೆ ಖರೀದಿ, ಕೊಕ್ಕೊ ಖರೀದಿ, ರೇಷನ್ ನಿಂದ 230 ಕೋಟಿ ರೂಪಾಯಿ ವ್ಯವಹಾರ ನಡೆದಿದ್ದು ರೂ.96.63 ಲಕ್ಷ ಲಾಭ ಬಂದಿದೆ. ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ಮೂಲಕ ಮುಂದಿನ ದಿನಗಳಲ್ಲಿ ಜೆನೆರಿಕ್ ಔಷಧಗಳ ಮಾರಾಟ ಕೇಂದ್ರ ಆರಂಭಿಸಲಾಗುವುದು. ಸಂಘದ ಪ್ರಧಾನ ಕಚೇರಿ ಇರುವ ಜಾಗದಲ್ಲಿ ಸುಸಜ್ಜಿತ ಮುಖ್ಯ ಕಚೇರಿ ಕಟ್ಟಡ ನಿರ್ಮಾಣ ಮಾಡುವ ಗುರಿ ಇರಿಸಲಾಗಿದೆ. ಸಂಘದ ಶಾಖೆಗಳಲ್ಲಿ ಗೊಬ್ಬರ-ಕೀಟನಾಶಕ ಮಾರಾಟ ನಡೆಸಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ‘ಉಂಡೆಮನೆ’ ಪ್ರಶಸ್ತಿ ಪುರಸ್ಕೃತ ಉದಯಶಂಕರ್ ಕೆ., ಹೈನುಗಾರ ಸಾಧಕ ಯೋಗೀಶ್ ದಾಮ್ಲೆ ಅಡ್ಡಹಳ್ಳ, ನಿವೃತ್ತ ಮುಖ್ಯೋಪಾಧ್ಯಾಯ ಸಂಜೀವ ನಾಯ್ಕ್, ಯುವ ಅನ್ವೇಷಕ ಚಿನ್ಮಯ್ ಗೌಡ, ಇವರನ್ನು ಸನ್ಮಾನಿಸಲಾಯಿತು. ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಜು ಸಾಲಿಯಾನ್, ಮುಖ್ಯಕಾರ್ಯ ನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್, ಸಂಘದ ನಿರ್ದೇಶಕರುಗಳಾದ ಕೊರಗಪ್ಪ ಗೌಡ, ರತೀಶ್ ಬಿ., ಧರ್ಮರಾಜ್ ಎ.,ತಾರಾ ಟಿ. ಚಿಪ್ಳೂಣ್ ಕರ್, ಗಂಗಾವತಿ, ಶ್ರೀಮತಿ ಬೇಬಿ, ಬೇಬಿಕಿರಣ್, ನಾಗೇಶ್ ಜಿ., ಕುಶಾಲಪ್ಪ ಗೌಡ, ಮುರಳೀಧರ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.