ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ: ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಮತ್ತು ಇತಿಹಾಸ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 160ನೆ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಡಬ ತಾಲ್ಲೂಕಿನ ನೌಕರರ ಸಂಘದ ಅಧ್ಯಕ್ಷರಾದ ವಿಮಲಕುಮಾರ್ ಕೆ.ಎ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ “ಯುವ ಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ” ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು.
ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ, ಜ್ಞಾನ ಪರಂಪರೆಗಳನ್ನ ವಿಶ್ವಕ್ಕೆ ಪರಿಚಯಿಸಿದ ರೀತಿಯನ್ನು ಕುರಿತು ಮಾತಾನಾಡುತ್ತಾ ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಅವರ ಮೊದಲ ನುಡಿಗಳಲ್ಲಿಯೇ ಸಹೋದರತೆ, ಭ್ರಾತೃತ್ವದ ಅಭಿವ್ಯಕ್ತಿಯ ಮೂಲಕ ಮಾನವೀಯತೆಯ ಮಹತ್ವವನ್ನು ಸಾರಿದರು. ವಿವೇಕಾನಂದರು ಬೋಸ್ಟನ್ ಪಟ್ಟಣಕ್ಕೆ ಭೇಟಿ ನೀಡಿದ ದಿನಗಳ ಮಹತ್ವವನ್ನು ವಿವರಿಸಿದರು. ಬದುಕಿನ ಚಿಕ್ಕ ಚಿಕ್ಕ ಕೆಲಸಗಳನ್ನೂ ಪರಿಶುದ್ಧ ಮನಸ್ಸಿನಿಂದ ಮಾಡಿದರೆ ಅದೇ ದೊಡ್ಡ ಕಾರ್ಯವೆನಿಸಿಕೊಳ್ಳುತ್ತದೆ, ದೇಶಪ್ರೇಮದ ಮೂಲಕ ಸೇವೆಗೈಯುವ ಪರೋಪಕಾರಿಯಾದ ಮನಸ್ಥಿತಿಯೊಂದನ್ನ ಬೆಳೆಸಿಕೊಳ್ಳುವ ಅಭಿಲಾಷೆಯೇ ವಿವೇಕಾನಂದರ ಸಂದೇಶಗಳ ಆಶಯವಾಗಿದೆ ಎಂದರು. ವಿದ್ಯಾರ್ಥಿಗಳೊಂದಿಗೆ ಪ್ರಾಯೋಗಿಕ ಸಂವಾದದ ಮೂಲಕ ನಮ್ಮ ಕಲ್ಪನೆಗಳ ವಿಸ್ತಾರತೆ, ಕನಸುಗಳ ವಿಶಾಲತೆ, ಶ್ರೇಷ್ಠ ಗುರಿಗಳ ಸಾಧ್ಯತೆಗಳು ಕೂಡ ನಮ್ಮನ್ನು ಮಾನಸಿಕವಾಗಿ ಸಧೃಡರನ್ನಾಗಿ ಮಾಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಹ ಸಂಯೋಜಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸೀತಾರಾಮ ಪಿ ಅವರು ಮಾತನಾಡುತ್ತಾ ಸ್ವಾಮಿ ವಿವೇಕಾನಂದರ ಜೀವನದ ಘಟನೆಗಳು, ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅವರೊಂದಿಗೆ ಸಂವಾದದ ಮೂಲಕ ರೂಪಿಸಿಕೊಂಡ ದಾರ್ಶನಿಕ ವ್ಯಕ್ತಿತ್ವ ನಮಗೆಲ್ಲಾ ಮಾದರಿಯಾಗಿದೆ. ಭಾರತದಲ್ಲಿನ ಬಡತನ, ದಾರಿದ್ರ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸಲು ವಿವೇಕಾನಂದರ ಸಂದೇಶಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕದ ಮಾರ್ಗದರ್ಶನದಂತೆ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಕುರಿತು ಕಾಲೇಜು ಮಟ್ಟದ ರಸಪ್ರಶ್ನೆ, ಭಾಷಣ, ಚಿತ್ರಕಲೆ, ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಮಲಕುಮಾರ್ ಕೆ.ಎ ಅವರು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಿ ಅಭಿನಂದಿಸಿದರು.

ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ.ನೂರಂದಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳ ಪರಿಚಯದೊಂದಿಗೆ ಸ್ವಾಗತಿಸಿದರು.
ಅರ್ಥಶಾಸ್ತ್ರದ ಉಪನ್ಯಾಸಕಿಯಾದ ಸ್ಪೂರ್ತಿ ಕೆ.ಟಿ ಅವರು ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾಜ್ಯಶಾಸ್ತ್ರದ ಉಪನ್ಯಾಸಕಿಯಾದ ಡೀನಾ ಪಿ.ಪಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಯುವ ರೆಡ್ ಕ್ರಾಸ್ ವಿದ್ಯಾರ್ಥಿ ಸ್ವಯಂಸೇವಕರಾದ ಭಾರತಿ ಮತ್ತು ತಂಡದವರು ಪ್ರಾರ್ಥನೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ಮತ್ತು ವಿದ್ಯಾರ್ಥಿ ಸಂಘದ ನಾಯಕರಾದ ಗುರುಪ್ರಸಾದ್, ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಸ್ವಯಂಸೇವಕರು, ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಆನಂದ್, ಗ್ರಂಥಪಾಲಕರಾದ ಶ್ರೀಮತಿ ಶೋಭಾ ಮತ್ತು ಎಲ್ಲಾ ವಿಭಾಗಗಳ ಉಪನ್ಯಾಸಕ ವೃಂದದವರು, ಬೋಧಕೇತರ ಸಿಬ್ಬಂದಿ ಕುಮಾರಿ ದಿವ್ಯ, ಕುಮಾರಿ ಸುಮಾ, ಉಪಸ್ಥಿತರಿದ್ದರು.

Leave a Reply

error: Content is protected !!