ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿರುವ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ, ವೆಬ್‌ಸೈಟ್ ಅನಾವರಣ, ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮವು ನೆಲ್ಯಾಡಿಯ ಎಲೈಟ್ ಸಭಾಂಗಣದಲ್ಲಿ ನೆರವೇರಿತು.
ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿ, ಕಾಲೇಜಿನ ಪಠ್ಯ, ಪಠ್ಯೇತರ ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಉತ್ತಮವಾಗಿ ಜವಾಬ್ದಾರಿಗಳನ್ನು ನಿರ್ವಹಿಸಿ ಕಾಲೇಜಿನ ಯಶಸ್ವಿಗೆ ಕಾರಣಕರ್ತರಾಗಬೇಕೆಂದರು. ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು, ವ್ಯಕ್ತಿತ್ವ ವಿಕಸನಕ್ಕೆ ಅನುಕೂಲ ಮಾಡಿಕೊಡಬೇಕು. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ವಿದ್ಯಾರ್ಥಿಗಳ ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ನೆಲೆಗಳಿಂದ ವ್ಯಕ್ತಿತ್ವ ವಿಕಾಸವಾಗಬೇಕು, Teacher is the Game Changer ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯು ಹೇಳುವ ಹಾಗೆ ವಿದ್ಯಾರ್ಥಿಗಳಲ್ಲಿರುವ ಅಂಧಕಾರ ದೂರ ಮಾಡಿ ಬೆಳಕನ್ನು ತೋರಬೇಕೆಂದು ಸಲಹೆ ನೀಡಿದರು. ಯಾವಾಗಲೂ “ರಾಷ್ಟ್ರ ಮೊದಲು, ವ್ಯಕ್ತಿತ್ವ ಮುಖ್ಯ” ಎಂಬ ಮಾತನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಂಡು ನಮ್ಮ ದೇಶದ ಬಗೆಗೆ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ವೆಬ್‌ಸೈಟ್ ಇಂದು ಅನಾವರಣಗೊಂಡಿದೆ. ಇನ್ನು ಮುಂದೆ ಕಾಲೇಜಿನ ಎಲ್ಲ ಕಾರ್ಯ ಚಟುವಟಿಕೆಗಳನ್ನು ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಎಲ್ಲರಿಗೂ, ಎಲ್ಲೆಡೆಯೂ ಕಾಲೇಜಿನ ಮಾಹಿತಿ ತಲುಪುವಂತೆ ಕಾರ್ಯನಿರ್ವಹಿಸಬೇಕು. ವೆಬ್‌ಸೈಟ್ ನ ಉತ್ತಮ ಕಾರ್ಯನಿರ್ವಹಣೆಗಾಗಿ ಎಲ್ಲ ರೀತಿಯ ಆರ್ಥಿಕ ಸಹಕಾರದ ಜೊತೆಗೆ ಉತ್ತಮ ರೀತಿಯ ತಾಂತ್ರಿಕ ನೆರವನ್ನೂ ಕೂಡ ವಿಶ್ವವಿದ್ಯಾನಿಲಯದಿಂದ ನೀಡಲಾಗುತ್ತದೆ ಎಂದರು.
ಶ್ರೀಮತಿ ಹೇಮಾವತಿ ಅವರ ಜೀವರಕ್ಷಣೆಯ ಸೇವೆಯನ್ನು ಪ್ರಶಂಸಿಸಿದ ಕುಲಪತಿಗಳು, ಇನ್ನೊಬ್ಬರಿಗಾಗಿ ಬದುಕುವ ಕ್ಷಣದ ತೃಪ್ತಿಯು ಎಷ್ಟು ಕೋಟಿ ಕೊಟ್ಟರೂ ಸಿಗಲಾರದು ಅಂತಹ ಪುಣ್ಯದ ಕೆಲಸವನ್ನು ಶ್ರೀಮತಿ ಹೇಮಾವತಿ ಅವರು ಮಾಡಿದ್ದಾರೆ. ಇದು ಎಲ್ಲರಿಗೂ ಮಾದರಿಯಾದ ವ್ಯಕ್ತಿತ್ವದ ನಿದರ್ಶನ ಎಂದರು. ಆತ್ಮಾನುಸಂಧಾನದ ಮೂಲಕ ಮಾತ್ರ ಇಂತಹ ಸೇವೆ ಮಾಡಲು ಸಾಧ್ಯ. ಅವರೊಳಗಿನ ಶಿಕ್ಷಕಿ ಎನ್ನುವ ವ್ಯಕ್ತಿತ್ವ ಜಾಗ್ರತವಾಗಿದ್ದ ಕಾರಣ ಈ ಪುಣ್ಯದ ಕೆಲಸ ಸಾಧ್ಯವಾಗಿದೆ. ಹೀಗೆ ಇನ್ನೊಬ್ಬರಿಗಾಗಿ ಬದುಕಿದಾಗ ಮಾತ್ರ ಭಗವಂತ ಒಳ್ಳೆಯ ಸಾಮರ್ಥ್ಯ ಕೊಡುತ್ತಾನೆ ಎಂದರು.
ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಐದು ಘಟಕ ಕಾಲೇಜುಗಳಿವೆ. ಪಂಚಮಂ ಕಾರ್ಯಸಿದ್ಧಿ ಎನ್ನುವ ಹಾಗೆ ಅವುಗಳಲ್ಲಿ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜು ಕೂಡ ಒಂದಾಗಿದೆ. ಈ ಕಾಲೇಜು ಭಿನ್ನವಾಗಿ ಬೆಳೆದು ಈ ಭಾಗದ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳ ಬಾಳನ್ನು ಬೆಳಗಬೇಕು ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಅಬ್ರಾಹಂ ವರ್ಗೀಸ್ ಅವರು ಮಾತನಾಡುತ್ತಾ ನೆಲ್ಯಾಡಿಯ ಈ ವಿಶ್ವವಿದ್ಯಾನಿಲಯ ಕಾಲೇಜು ಈ ಭಾಗದಲ್ಲಿ ಉತ್ತಮವಾದ ಶೈಕ್ಷಣಿಕ ಸೇವೆಯನ್ನು ನೀಡುತ್ತ ಬರುತ್ತಿದೆ. ನಾನು ಆರಂಭದಿಂದ ಈ ಕಾಲೇಜಿನೊಂದಿಗೆ ಒಡನಾಟವಿಟ್ಟುಕೊಂಡಿರುವ ಹಿನ್ನಲೆಯಲ್ಲಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸುತ್ತಾ ಬರುತ್ತಿದ್ದೇನೆ. ಈ ಕಾಲೇಜಿಗೆ ಅತ್ಯುತ್ತಮವಾದ ಉಪನ್ಯಾಸ ವೃಂದವಿದೆ. ಇಂತಹ ಉಪನ್ಯಾಸಕರನ್ನು ನೇಮಕ ಮಾಡಿ ಕಳಿಸಿರುವುದಕ್ಕೆ ಕುಲಪತಿಗಳಿಗೆ ಕೃತಜ್ಞತೆ ತಿಳಿಸುವುದರ ಜೊತೆಗೆ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಈ ವಿಶ್ವವಿದ್ಯಾನಿಲಯ ಕಾಲೇಜಿಗೆ ಜಾಗ ದೊರೆತಿದೆ. ಹಾಗಾಗಿ ಇದು ಕೇವಲ ಕಾಲೇಜಾಗಿ ಮಾತ್ರ ಬೆಳೆದರೆ ಸಾಲದು, ಇದು ಉನ್ನತವಾದ ಅಧ್ಯಯನ ಕೇಂದ್ರವಾಗಬೇಕು. ಉತ್ತಮ ವಸತಿ ನಿಲಯಗಳೊಂದಿಗೆ ಸ್ನಾತಕೋತ್ತರ ಕೇಂದ್ರ ಮತ್ತು ಸಂಶೋಧನ ಅಧ್ಯಯನಕ್ಕೆ ಅವಕಾಶ ಕೊಟ್ಟು ವಿಶ್ವವಿದ್ಯಾನಿಲಯದ ಉನ್ನತ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಬೇಕು. ಈ ನಿಟ್ಟಿನ ಬೆಳವಣಿಗೆಯಲ್ಲಿ ವಿಶ್ವವಿದ್ಯಾನಿಲಯವು ಕ್ರಮ ಕೈಗೊಳ್ಳಬೇಕೆಂದು ಆಶಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ನೆಲ್ಯಾಡಿಯ ಖ್ಯಾತ ಉದ್ಯಮಿಗಳು ಸತೀಶ್ ಕೆ.ಎಸ್ ದುರ್ಗಾಶ್ರೀ ಇವರು ಮಾತನಾಡುತ್ತಾ ಕಾಲೇಜಿನ ಕಾಲೇಜಿನ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಪ್ರಸ್ತುತ ಕಾಲೇಜು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೂ ಕೂಡ ಉತ್ತಮವಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಉತ್ತಮವಾದ ಶೈಕ್ಷಣಿಕ ವಾತಾವರಣ ಇಲ್ಲಿದೆ. ಹಾಗಾಗಿ ವಿದ್ಯಾರ್ಥಿಗಳು ಈ ವಾತಾವರಣದಲ್ಲಿ ತಮ್ಮ ಪ್ರಯತ್ನದ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಲಹೆ ನೀಡಿದರು. ಸನ್ಮಾನ್ಯ ಕುಲಪತಿಗಳಾದ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಇವರ ಆಡಳತಾವಧಿಯಲ್ಲಿಯೇ ಇವರಿಂದಲೇ ಈ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ ಜರುಗಬೇಕೆಂಬುದು ನಮ್ಮೆಲ್ಲರ ಆಶಯ ಎಂದರು.
ವಿಶ್ವವಿದ್ಯಾನಿಲಯ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದ ಮತ್ತು ಕಾಲೇಜಿನ ಅನುಷ್ಠಾನ ಸಮಿತಿಯ ಪರವಾಗಿ ಕಾಲೇಜಿನ ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಹೇಮಾವತಿ ಅವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಹೇಮಾವತಿಯವರು ಈ ಸನ್ಮಾನವನ್ನು ನನ್ನ ವೈಯಕ್ತಿಕವಾಗಿ ಸ್ವೀಕರಿಸದೆ ನನ್ನ ಸೇವೆಗೆ ಸಂದ ಗೌರವವಾಗಿದ್ದು ಈ ಸೇವೆಯು ನನ್ನ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪ್ರೇರಣೆಯಾಗುವ ಕಾರಣ ಸನ್ಮಾನ ಸ್ವೀಕರಿಸಿದ್ದೇನೆ ಎಂದರು. ಸೆಪ್ಟೆಂಬರ್28 2022 ರಂದು ಬಂಟ್ವಾಳದ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯನ್ನು ಸ್ಮರಿಸುತ್ತಾ ಹೃದಯಾಘಾತವಾಗಿದ್ದ ವ್ಯಕ್ತಿಯನ್ನು ಕಾಪಾಡಲು ತಮ್ಮ ಪ್ರಯಾಾಣವನ್ನೇ ಮೊಟಕುಗೊಳಿಸಿ ಜೀವ ಕಾಪಾಡಿದ ಪ್ರಸಂಗವನ್ನು ವಿವರಿಸಿದರು.
ಸಭಾ ಕಾರ್ಯಕ್ರಮದ ನಂತರ ಲಲಿತ ಕಲಾ ಸಂಘದ ವತಿಯಿಂದ ಸಂಘದ ಸಂಚಾಲಕರಾದ ಶ್ರೀಮತಿ ದಿವ್ಯಶ್ರೀ ಜಿ ಮತ್ತು ಎಲ್ಲಾ ಬೋಧಕ ವರ್ಗದ ಮೂಲಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಗಾಯನ, ನೃತ್ಯ, ಮೈಮ್, ಛದ್ಮವೇಷ, ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್, ಗೌರವಾಧ್ಯಕ್ಷರಾದ ಕೆ.ಪಿ ಥಾಮಸ್, ಜಿ.ಪಂ ಮಾಜಿ ಸದಸ್ಯರಾದ ಪಿ.ಪಿ ವರ್ಗೀಸ್, ಕೋಶಾಧಿಕಾರಿಯಾದ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿಯಾದ ಶಿವಪ್ರಸಾದ್, ಸದಸ್ಯರಾದ ತೀರ್ಥೇಶ್ವರ ಉರ್ಮಾನು , ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಕಾಲೇಜಿನ ಕಟ್ಟಡದ ಮಾಲೀಕರಾದ ರವಿಚಂದ್ರ ಗೌಡ ಹೊಸವೊಕ್ಲು, ನೆಲ್ಯಾಡಿಯ ಐಐಸಿಟಿ ಕಂಪ್ಯೂಟರ್ ವಿದ್ಯಾಸಂಸ್ಥೆಯ ಮತ್ತು ನೇಸರ ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಸಿ.ಹೆಚ್, ನೆಲ್ಯಾಡಿ ವರ್ತಕರ ಸಂಘದ ಉಪಾಧ್ಯಕ್ಷರಾದ ಗಣೇಶ್ ಕೆ ರಶ್ಮಿ, ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ನಿವೃತ್ತ ಕನ್ನಡ ಉಪನ್ಯಾಸಕರಾದ ರವೀಂದ್ರ, ಅವರು ಉಪಸ್ಥಿತರಿದ್ದರು.
ಕಾಲೇಜಿನ ಸಂಯೋಜಕರಾದ ಡಾ.ಜಯರಾಜ್ ಎನ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಸಂಚಾಲಕರಾದ ಸುರೇಶ್ ಕೆ ಇವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.
ಕಾರ್ಯಕ್ರಮವನ್ನು ರಾಜ್ಯಶಾಸ್ತ್ರದ ಉಪನ್ಯಾಸಕಿ ಕುಮಾರಿ ಡೀನಾ ಪಿ.ಪಿ ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೆರೊಣಿಕಾ ಪ್ರಭಾ ಅಧ್ಯಕ್ಷರ, ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಿ.ಬಿ.ಎ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಿಶ್ಮಿತಾ ಪಿ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ.ಸೀತಾರಾಮ್ ಪಿ ವಂದಿಸಿದರು.