ಕಡಬ: ಕೊಯಿಲ ಗ್ರಾಮದ ಏಣಿತಡ್ಕ ಎಂಬಲ್ಲಿ ಕುಮಾರಾಧಾರ ನದಿಯಲ್ಲಿ ತೆಪ್ಪದಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ತೆಪ್ಪ ಮಗುಚಿ ಮಹಿಳೆಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಏಣಿತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬವರ ಪತ್ನಿ ಗೀತಾ (47) ಎಂದು ಗುರುತಿಸಲಾಗಿದೆ.
ದನಗಳಿಗೆ ಮೇವಿನ ಹುಲ್ಲು ತರುವುದಕ್ಕಾಗಿ ಏಣಿತಡ್ಕ ಭಾಗದಿಂದ ನದಿಯ ಇನ್ನೊಂದು ಭಾಗ ಆರೆಲ್ತಡಿ ಎಂಬಲ್ಲಿಗೆ ತೆಪ್ಪದಲ್ಲಿ ತೆರಳಿ ಹುಲ್ಲು ಎರೆದು ಮೂಟೆಕಟ್ಟಿಕೊಂಡು ತಿರುಗಿ ತೆಪ್ಪದಲ್ಲಿ ಬರಬೇಕಾದರೆ ಈ ದುರ್ಘಟನೆ ನಡೆದಿದೆ. ತೆಪ್ಪದಲ್ಲಿ ಹುಲ್ಲಿನ ಮೂಟೆಯೊಂದಿಗೆ. ಮೂರು ಜನ ಇದ್ದ ತೆಪ್ಪ ನದಿ ಮಧ್ಯೆ ಬರುತ್ತಿದ್ದಂತೆ ಜೋರು ಗಾಳಿ ಬೀಸಿದೆ. ಪರಿಣಾಮ ತೆಪ್ಪ ನೀರು ತುಂಬಿ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ಆದರೆ ಹುಲ್ಲಿನ ಮೂಟೆಗಳು ತೇಲುತ್ತಿದ್ದವು. ಇವುಗಳ ಸಹಾಯದಿಂದ ಮೂರೂ ಜನ ಮಹಿಳೆಯರು ನೀರಿನ ಸೆಳೆತದಿಂದ ಪಾರಾಗಲು ಯತ್ನಿಸಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರಾದ ವಿದ್ಯಾಲಕ್ಷ್ಮಿ ಹಾಗೂ ಸುನಂದ ಹುಲ್ಲಿನ ಮೂಟೆಯ ಸಹಾಯದಿಂದ ನದಿ ದಡ ಸೇರಿದ್ದಾರೆ. ಆದರೆ ಗೀತಾ ಅವರು ದಡ ಸೇರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯ ಈಜು ತಜ್ಷರು ನೀರಲ್ಲಿ ಮುಳಗಿದ್ದ ಮಹಿಳೆಯನ್ನು ಮೇಲಕ್ಕೆತ್ತಿದರೂ ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಸದಾ ನದಿಯಾಚೆಯಿಂದ ಹುಲ್ಲು ತರಲು ಹೋಗುತ್ತಿದ್ದ ಈ ಮೂವರು ಮಹಿಳೆಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಿದ್ದು, ಭಾನುವಾರ ಮಧ್ಯಾಹ್ನ ಯೊಜನೆಯ ಮೀಟಿಂಗ್ ಇರುವ ಕಾರಣ ಮಧ್ಯಾಹ್ನ ಮುಂಚೆ ಹುಲ್ಲು ತರಲು ಹೋಗಿದ್ದರು.
ಸ್ಥಳಕ್ಕೆ ಕಡಬ ಠಾಣಾ ಎ.ಎಸ್.ಐ ಶಿವರಾಮ ಹಾಗೂ ಪೋಲೀಸ್ ಸಿಬ್ಬಂದಿ ಚಂದನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತರಿಗೆ ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.
ಅಪಾಯಕಾರಿ ಸ್ಥಳ:
ಕುಮಾಧಾರ ನದಿಯ ಏಣಿತಡ್ಕ ಹಾಗೂ ಕೂಟೇಲು ಆರೆಲ್ತಡಿ ಮಧ್ಯದ ಸ್ಥಳ ನದಿಯ ಹರಿವು ತುಂಬಾ ಅಪಾಯಕಾರಿಯಾಗಿದೆ. ಇಲ್ಲಿ ಈ ಹಿಂದೆ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದರು. ಹುಲ್ಲು ತರಲೆಂದೇ ಹೋದ ವ್ಯಕ್ತಿ ನಾಡ ದೋಣಿಯಿಂದ ಬಿದ್ದು ಮೃತಪಟ್ಟಿದ್ದರು, ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು. ಸಂಬಂಧಿಕರ ಮನೆಗೆ ಆಗಮಿಸಿ ನದಿಯ ಬದಿಯಲ್ಲಿ ಫೋಟೋ ತೆಗೆಯಲು ಹೋಗಿ ನೀರು ಪಾಲಾಗಿದ್ದ, ಕೆಲ ವರ್ಷಗಳ ಹಿಂದೆ ಮಹಿಳೆಯೊಬ್ಬರು ಇದೇ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಬಡ ಕೃಷಿಕೂಲಿ ಕಾರ್ಮಿಕೆ ತೆಪ್ಪಮಗುಚಿ ಪ್ರಾಣಕಳೆದುಕೊಂಡಿದ್ದಾರೆ. ಈ ಪ್ರದೇಶವನ್ನು ನದಿಯ ಎರಡೂ ಭಾಗದ ಸ್ಥಳೀಯಾಡಳಿತಗಳು ಅಪಾಯಕಾರಿ ಸ್ಥಳ ಎಂದು ಗುರುತಿಸಿ ನಾಮಫಲಕ ಅಳವಡಿಸಿ ದುರಂತಗಳನ್ನು ತಡೆಯಬೇಕು ಎಂದು ನಾಗರೀಕರು ಅಗ್ರಹಿಸಿದ್ದಾರೆ.