ಒಂದು ದೇಶ ಸಶಕ್ತವಾಗ ಬೇಕಿದ್ದರೆ ಹಳ್ಳಿಗಳಲ್ಲಿ ಹೈನುಗಾರಿಕೆ, ಕೃಷಿ ಕ್ಷೇತ್ರಗಳಲ್ಲಿ ಮಹಿಳೆಯರ ಸಹಿತ ಯುವಕರು ಪಾಲ್ಗೊಳ್ಳಬೇಕು – ಕೆ.ಪಿ.ಸುಚರಿತ ಶೆಟ್ಟಿ

ಶೇರ್ ಮಾಡಿ

ನೆಲ್ಯಾಡಿ ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ 5 ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ ಶ್ರೀಮತಿ ಆಶಾ ಎಸ್ ಜೋಗಿತ್ತಾಯ ದಂಪತಿಗಳು

ಗೋಪೂಜೆ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ನೆಲ್ಯಾಡಿ : ಒಂದು ದೇಶ ಸಶಕ್ತವಾಗ ಬೇಕಿದ್ದರೆ ಭಾರತ ದೇಶದಂತಹ ಇಂಥ ಹಳ್ಳಿಗಳಲ್ಲಿ ಹೈನುಗಾರಿಕೆ, ಕೃಷಿ ಕ್ಷೇತ್ರಗಳಲ್ಲಿ ಮಹಿಳೆಯರ ಸಹಿತ ಯುವಕರು, ಹಿರಿಯರು, ರಾಷ್ಟ್ರ ಪ್ರೇಮದಿಂದ ಈ ಒಂದು ಕಾರ್ಯಗಳನ್ನು ಮಾಡಬೇಕು. ಕೃಷ್ಣ ಪರಮಾತ್ಮನು ಹಾಲಿನ ಕ್ಷೇತ್ರವನ್ನು ಸುಮಾರು 5 ಸಾವಿರ ವರುಷಗಳ ಹಿಂದೆ ಅದರ ಮಹತ್ವವನ್ನು ಸಾರಿದಂಥ ದೇಶ ನಮ್ಮದು. ನಮ್ಮ ದೇಶದ ಸಂಸ್ಕೃತಿ ಉಳಿಯಬೇಕಿದ್ದರೆ, ನಮ್ಮ ದೇಶದ ವೈಭವ ಉಳಿಯಬೇಕಿದ್ದರೆ, ಕರಾವಳಿ ಭಾಗದ ಅವಿಭಾಜ್ಯ ಜಿಲ್ಲೆಯ ಹೈನುಗಾರಿಕೆ ಕ್ಷೇತ್ರ ಇನ್ನಷ್ಟು ಬೆಳೆಯಬೇಕು ಎಂದು ನೆಲ್ಯಾಡಿ ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿಯಮಿತ ಕ್ಷೀರ ಕಾರಂಜಿ ಇದರ ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ ಫೆ.01 ರಂದು ಸಂಘದ ವಠಾರದಲ್ಲಿ ನಡೆಯಿತು, ಸಾಂದ್ರ ಶೀತಲೀಕರಣ ಘಟಕವನ್ನು ಹಾಗೂ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರು ಇದರ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ ಈ ಘಟಕದ ಬೆಳ್ಳಿ ಹಬ್ಬದ ಆಚರಣೆಗಾಗಿ 25 ಸಾವಿರ ದೇಣಿಗೆ ನೀಡುತ್ತೇವೆ ಎಂದರು. ಒಟ್ಟಿನಲ್ಲಿ ಈ ಸಂಘವು ಸದಾ ಚಟುವಟಿಕೆಯಿಂದ ಕೂಡಿರಬೇಕು. ಗುಣಮಟ್ಟದ ಹಾಲನ್ನು ಉತ್ಪಾದಿಸಿ ಯುವಕ ಯುವತಿಯರು ಕೂಡಾ ಹಾಲಿನ ಕ್ಷೇತ್ರದಲ್ಲಿ ಒಂದು ಸ್ವಂತ ಉದ್ಯೋಗ ಮಾಡುವಂತಹ ಹಾಗೂ ಆ ಮೂಲಕ ಅವರ ಕೃಷಿಯನ್ನು ಉಳಿಸುವಂತಹ ಕೆಲಸವನ್ನ ಇಂಥ ಮಹಿಳಾ ಸಂಘಗಳು ಮಾಡಬೇಕು. ಒಂದು ಸಂಸ್ಥೆಯಲ್ಲಿ ನಾವು ಬೆಳೆಯಬೇಕಾದರೆ ಅಪಾರ ರೀತಿಯ ಜ್ಞಾನ ಸಂಪಾದನೆ ಅಗತ್ಯವಿದೆ. ಇಂದು ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಲಕ್ಷದ 60 ಸಾವಿರ ಲೀಟರ್ ಹಾಲು ಇಂದು ಉತ್ಪಾದಿಸುತ್ತಿದ್ದೇವೆ. ಆದರೆ ಐವತ್ತು ಸಾವಿರ ಲೀಟರ್ ಹಾಲು ಇನ್ನೂ ಹೆಚ್ಚು ನಮಗೆ ಬೇಕಾಗಿದೆ. ಎರಡು ಜಿಲ್ಲೆಯ ಗ್ರಾಹಕರಿಗೆ ಹಾಲು ಪೂರೈಸಲು ನಮ್ಮಲ್ಲಿ ಹಾಲಿಲ್ಲ. ಇದಕ್ಕೆ ಕಾರಣ ಬೇರೆ ಬೇರೆ ಇದೆ ಪ್ರಕೃತಿಯ ಕಾರಣವಿರಬಹುದು, ಈ ಜಿಲ್ಲೆಯ ಹವಾಮಾನವಿರಬಹುದು, ಇಲ್ಲಿ ಮಾತ್ರವಲ್ಲ ರಾಷ್ಟ್ರ, ರಾಜ್ಯಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಿದೆ. ಯುವಕ ಯುವತಿಯರು ಕೃಷಿ ಹಾಗೂ ಹೈನುಗಾರಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ನೂತನವಾಗಿ ನಿರ್ಮಿಸಿದ ಘಟಕದ ಧ್ವಜಸ್ತಂಭವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರು ಇದರ ಉಪಾಧ್ಯಕ್ಷರಾದ ಎಸ್ ಬಿ ಜಯರಾಮ ರೈ ಬಳಜ್ಜ ಮಾತನಾಡಿ ದಕ್ಷಿಣ ಕನ್ನಡ ಹಾಲು ಒಕ್ಕೂಟವು 735 ಸಂಘವಿದ್ದು ಅದರಲ್ಲಿ 202 ಮಹಿಳಾ ಸಂಘವಿದೆ. ನಾವು ಈಗ 5 ಲಕ್ಷ 86 ಸಾವಿರ ಲೀಟರ್ ಹಾಲಿನ ಉತ್ಪಾದನೆಯಾಗಿತ್ತು ಆದರೆ ಈಗ ಬೇರೆ ಬೇರೆ ಕಾರಣಗಳಿಂದ ಹಾಲು ಉತ್ಪಾದನೆಯು ಕಡಿಮೆಯಾಗುತ್ತಿದೆ 4 ಲಕ್ಷದ 60 ಸಾವಿರ ಲೀಟರ್ ಹಾಲು ಈಗ ಉತ್ಪಾದನೆಯಾಗುತ್ತಿದೆ. ಹೈನುಗಾರರಿಗೆ ಡಿಸಿಸಿ ಬ್ಯಾಂಕಿನಿಂದ ಒಂದೇ ದಿನದಲ್ಲಿ ತ್ರಿಮುಖ ಒಪ್ಪಂದದಡಿಯಲ್ಲಿ ಒಂದು ದನಕ್ಕೆ 18 ಸಾವಿರ ರೂಪಾಯಿಯಂತೆ ನಾಲ್ಕು ದನಗಳಿಗೆ 72 ಸಾವಿರದ ಸಾಲವನ್ನು ನಿಬಡ್ಡಿಯಲ್ಲಿ ಕೊಡುವ ವ್ಯವಸ್ಥೆ ಇದೆ. ರೈತರು ಇದರ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು.

ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರು ಇದರ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ ನೂತನ ಜನರೇಟರನ್ನು ಉದ್ಘಾಟಿಸಿದರು. ನಾರಾಯಣ ಪ್ರಕಾಶ್ ಕೆ., ನಾಮಫಲಕ ಉದ್ಘಾಟಿಸಿದರು. ಶ್ರೀಮತಿ ಸವಿತಾ ಎನ್ ಶೆಟ್ಟಿ ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರು ಇದರ ವ್ಯವಸ್ಥಾಪಕರಾದ ಡಾ.ನಿತ್ಯಾನಂದ ಭಕ್ತ ಸಂದರ್ಭೋಚಿತವಾಗಿ ಮಾತನಾಡಿ ಘಟಕದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರಾದ ಶ್ರೀಮತಿ ಆಶಾ ಎಸ್ ಜೋಗಿತ್ತಾಯ ರವರು ಮಾತನಾಡಿ ಈ ಮಹಿಳಾ ಸಹಕಾರಿ ಸಂಘವು ಕೇಂದ್ರ ಸರಕಾರದ ಸ್ಟೆಪ್ ಯೋಜನೆ ಅಡಿ ಆರಂಭಗೊಂಡಿತು. ಯಾವುದೇ ರೀತಿಯಾದ ಸೌಕರ್ಯ ಇಲ್ಲದ ಈ ಕುಗ್ರಾಮದಲ್ಲಿ ಈ ಭಾಗದ ಜನರ ಜೀವನೋಪಾಯಕ್ಕಾಗಿ ಹೈನುಗಾರಿಕೆ ಆರಂಭಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧಿಕಾರಿಗಳು ಈ ಊರಿಗೆ ಬಂದು ಸಭೆ ಸೇರಿ ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಆರಂಭಿಸುವುದೆಂದು ನಿರ್ಣಯ ಮಾಡಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಮನೆಮನೆಗೆ ಭೇಟಿ ನೀಡಿ 15,675 ಷೇರು ಬಂಡವಾಳವನ್ನು ಸಂಗ್ರಹಿಸಿ. ವಿಠಲ ಮಾರ್ಲ ರವರ ಕಟ್ಟಡದಲ್ಲಿ 1998 ಫೆಬ್ರವರಿ 1ರ ರಂದು ಸಂಘ ಆರಂಭವಾಯಿತು. ಸ್ಪೂರ್ತಿ, ಸ್ವಸ್ತಿ, ಶಕ್ತಿ ಹೆಸರಿನ ಮೂರು ಸ್ವಸಹಾಯ ಸಂಘಗಳು ರಚನೆಗೊಂಡಿದ್ದು. ಮಹಿಳೆಯರಿಗೆ ಹೈನುಗಾರಿಕೆ ಮಾಡುವ ಉದ್ದೇಶದಿಂದ ಅವರಿಗೆ ಉತ್ತೇಜನ ನೀಡಿಕೊಂಡು ಅದರಲ್ಲಿ ಅವರಿಗೆ ಸಂಘದ ವತಿಯಿಂದ ಸಾಲ ನೀಡಲಾಗುತ್ತಿತ್ತು. ಸಂಘಕ್ಕೆ ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ 5 ಸೆಂಟ್ಸ್ ಜಾಗವನ್ನು ದಾನವಾಗಿ ನೀಡುವುದರೊಂದಿಗೆ 2002 ಮಾರ್ಚ್ 16ರಂದು ಕ್ಷೀರ ಕಾರಂಜಿ ಕಟ್ಟಡವು ನಿರ್ಮಾಣಗೊಂಡು ಉದ್ಘಾಟನೆಗೊಂಡಿತು. 260 ಸದಸ್ಯರುಗಳಿದ್ದು ಇದರಲ್ಲಿ 160 ಸದಸ್ಯರು ಹಾಲು ಹಾಕುವರಾಗಿರುತ್ತಾರೆ. ಸರಾಸರಿಯಾಗಿ ಒಂದೂವರೆ ಸಾವಿರ ಲೀಟರ್ ಹಾಲು ಈಗ ಸಂಗ್ರಹಣೆ ಗೊಳ್ಳುತ್ತಿದೆ. ಸಂಘದ ವತಿಯಿಂದ ಸದಸ್ಯರುಗಳಿಗೆ ಮಾಹಿತಿ ಶಿಬಿರ, ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಂಘಕ್ಕೆ ಎಲ್ಲರ ಸಹಕಾರವನ್ನು ಕೋರಿದರು.

ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರು ಇದರ ಬಿ ಎಂ ಸಿ ಉಪವ್ಯವಸ್ಥಾಪಕರಾದ ಡಾ.ಕೇಶವ ಸುಳಿ, ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರು ಇದರ ವಿಸ್ತರಣಾಧಿಕಾರಿ ಆದಿತ್ಯ ಚಿದ್ಗಲ್, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ ರಾಮನಗರ, ಪ್ರಕಾಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಕೃಷಿ ರತ್ನ ಪದ್ಮವಿಭೂಷಣ ಡಾ.ವರ್ಗೀಸ್ ಕುರಿಯನ್ ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಸನ್ಮಾನ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಂಗಾಧರ ಶೆಟ್ಟಿ ಹೊಸಮನೆ, ಇಂಜಿನಿಯರ್ ಚಂದ್ರಹಾಸ ಪನ್ಯಾಡಿ ಇವರನ್ನು ಸನ್ಮಾನಿಸಲಾಯಿತು.

ಬೇರೆ ಬೇರೆ ಘಟಕಗಳಿಂದ ಆಗಮಿಸಿದ ಪದಾಧಿಕಾರಿಗಳಿಗೆ, ಘಟಕದ ಪದಾಧಿಕಾರಿಗಳಿಗೆ, ಸಹಕರಿಸಿದ ಎಲ್ಲರಿಗೂ ಘಟಕದ ಅಧ್ಯಕ್ಷೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

ಉಪಾಧ್ಯಕ್ಷೆ ಅನುಸೂಯ.ಜಿ ಹಾಗೂ ಸಂಘದ ನಿರ್ದೇಶಕರು ಸರ್ವ ಸದಸ್ಯರು, ಕಾರ್ಯದರ್ಶಿ ಶ್ರೀಮತಿ ಕಮಲ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಭವಾನಿ.ಜಿ ಪ್ರಾರ್ಥಿಸಿದರು, ಶ್ರೀಮತಿ ಆಶಾ ಎಸ್ ಜೋಗಿತ್ತಾಯ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶೀನಪ್ಪ ಬರೆಮೇಲು ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕಿ ಶ್ರೀಮತಿ ಹೇಮಾವತಿ ಜಿ ವಂದಿಸಿದರು.

Leave a Reply

error: Content is protected !!